ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ
Indian army to get AK-630 gun system: ಪಾಕಿಸ್ತಾನದ ಗಡಿಭಾಗದಲ್ಲಿ ಭಾರತವು ಎಕೆ-630 ಎನ್ನುವ ಅತ್ಯಾಧುನಿಕ ಏರ್ ಡಿಫೆನ್ಸ್ ಗನ್ ಸಿಸ್ಟಂ ಅನ್ನು ನಿಯೋಜಿಸಲು ತಯಾರಾಗುತ್ತಿದೆ. ಭಾರತೀಯ ಸೇನೆಯು ಎಕೆ-630 ಅನ್ನು ಖರೀದಿಸಲು ಹೊರಟಿದೆ. ಟ್ರಕ್ಗಳ ಮೇಲೆ ಹೊತ್ತು ಸಾಗಬಲ್ಲಂತಹ ಈ ಗನ್ ಸಿಸ್ಟಂಗಳ ಬಹಳ ಪರಿಣಾಮಕಾರಿ ಎನಿಸಿವೆ. ಎಕೆ-47ಗಿಂತ ಇವು ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿ ಎನಿಸಿವೆ.

ನವದೆಹಲಿ, ಅಕ್ಟೋಬರ್ 6: ಪಾಕಿಸ್ತಾನದ ಗಡಿಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ (Pakistan) ಸೈನಿಕರು ಮತ್ತು ಒಳನುಸುಳಿ ಬರಲು ಯತ್ನಿಸುವ ಉಗ್ರರಿಗೆ ಮುಂಬರುವ ದಿನಗಳು ಸಿಂಹಸ್ವಪ್ನ ಎದುರಾಗಬಹುದು. ಪಾಕಿಸ್ತಾನದ ಗಡಿ ಭಾಗದಲ್ಲಿ ಭಾರತವು ಎಕೆ-630 ಏರ್ ಡಿಫೆನ್ಸ್ ಗನ್ಗಳನ್ನು (Air Defence Guns) ನಿಯೋಜಿಸಲು ತಯಾರಿ ನಡೆಸುತ್ತಿದೆ. ಮಿಷನ್ ಸುದರ್ಶನ್ ಚಕ್ರ (Mission Sudarshan Chakra) ಅಡಿಯಲ್ಲಿ ಈ ಭಯಾನಕ ಏರ್ ಗನ್ಗಳನ್ನು ಭಾರತೀಯ ಸೇನೆ (Indian Army) ಖರೀದಿಸಲು ನಿರ್ಧರಿಸಿದೆ.
ಸರ್ಕಾರಿ ಸ್ವಾಮ್ಯದ ಅಡ್ವಾನ್ಸ್ಡ್ ವೆಪನ್ ಅಂಡ್ ಎಕ್ವಿಪ್ಮೆಂಟ್ ಇಂಡಿಯಾ (AWEIL) ಸಂಸ್ಥೆಯಿಂದ ಈ ಏರ್ ಡಿಫೆನ್ಸ್ ಗನ್ಗಳನ್ನು ಪಡೆಯಲು ಸೇನೆ ಮನವಿ (ಆರ್ಎಫ್ಪಿ) ಸಲ್ಲಿಸಿದೆ. ಶತ್ರುಗಳ ಡ್ರೋನ್, ರಾಕೆಟ್, ಆರ್ಟಿಲೆರಿ ಇತ್ಯಾದಿಗಳ ದಾಳಿಗಳನ್ನು ಎದುರಿಸಲು ಈ ಎಕೆ-630 ಗನ್ಗಳು ಉಪಯುಕ್ತವಾಗಲಿವೆ. ಪಾಕಿಸ್ತಾನದ ಗಡಿ ಭಾಗಕ್ಕೆ ಹತ್ತಿರ ಇರುವ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಈ ಮಾರಕ ಅಸ್ತ್ರಗಳನ್ನು ಬಳಸುವ ಉದ್ದೇಶ ಇದೆ.
ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು
ಈ ಗನ್ಗಳ ಟ್ರಯಲ್ಗಳನ್ನು ಮೇ ತಿಂಗಳಲ್ಲೇ ನಡೆಸಲಾಗಿದೆ. ಇದರ ಕಾರ್ಯನಿರ್ವಹಣೆ ಬಗ್ಗೆ ಸೇನೆ ತೃಪ್ತಿ ವ್ಯಕ್ತಪಡಿಸಿದೆ. ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನವು ಹಲವು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಭಾರತದ ಧಾರ್ಮಿಕ ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿತ್ತು. ಭಾರತದ ಡಿಫೆನ್ಸ್ ಸಿಸ್ಟಂಗಳು ಈ ಹೆಚ್ಚಿನ ದಾಳಿಗಳನ್ನು ಸಮರ್ಥವಾಗಿ ವಿಫಲಗೊಳಿಸಿದ್ದು ಹೌದು. ಇಂಥ ಪರಿಸ್ಥಿತಿಯಲ್ಲಿ ಎಕೆ-630ಯಂತಹ ಏರ್ ಡಿಫೆನ್ಸ್ ಸಿಸ್ಟಂಗಳು ಮತ್ತಷ್ಟು ಉಪಯೋಗಕ್ಕೆ ಬರಬಹುದು.
ಹೇಗಿದೆ ಎಕೆ-630 ಏರ್ ಡಿಫೆನ್ಸ್ ಗನ್?
ಎಕೆ-630 ಎಂಬುದು ಒಂದು ರೀತಿಯ ಗನ್ ಸಿಸ್ಟಂ. ಟ್ರಕ್ಗಳಲ್ಲಿ ಇವುಗಳನ್ನು ಸಾಗಿಸಬಹುದು. ಒಂದು ದೊಡ್ಡ ಟ್ಯಾಂಕ್ ರೀತಿಯ ರಚನೆಯಲ್ಲಿ ಈ ಗನ್ ಸಿಸ್ಟಂ ಅನ್ನು ಕೂರಿಸಲು ಸಾಧ್ಯ. ಇದರಲ್ಲಿ ಒಂದು ನಿಮಿಷದಲ್ಲಿ 3,000 ಸುತ್ತುಗಳ ಗುಂಡಿನ ದಾಳಿ ನಡೆಸಬಹುದು. ಈ ಗುಂಡಿನ ಶ್ರೇಣಿ 4 ಕಿಮೀವರೆಗೂ ಇದೆ. ಅಂದರೆ, 4 ಕಿಮೀ ದೂರದಿಂದಲೇ ಶತ್ರುಗಳ ಮೇಲೆ ನಿಖರವಾಗಿ ಗುಂಡಿನ ದಾಳಿ ನಡೆಸಬಹುದು.
ಇದನ್ನೂ ಓದಿ: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್
ಎಕೆ-630ಗೆ ಹೋಲಿಸಿದರೆ ಎಕೆ-47 ಹೇಗೆ?
ಎಕೆ-630 ಗನ್ ಸಿಸ್ಟಂಗೆ ಹೋಲಿಸಿದರೆ ಎಕೆ-47 ಆಗಲೀ ಎಕೆ-56 ಆಗಲೀ ಪೇಲವ ಎನಿಸುತ್ತವೆ. ಎಕೆ-47 ಗನ್ನ ಎಫೆಕ್ಟಿವ್ ರೇಂಜ್ 300-400 ಮೀಟರ್ ಮಾತ್ರವೇ. ಇವು ನಿಮಿಷಕ್ಕೆ 600 ರೌಂಡ್ಗಳನ್ನು ಫೈರ್ ಮಾಡಬಲ್ಲುವು. ಹೀಗಾಗಿ, ಎಕೆ-47ಗಿಂತ ಬಹುತೇಕ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ ಎಕೆ-630 ಗನ್ ಸಿಸ್ಟಂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




