ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್​ಪಿಜಿ ಒಪ್ಪಂದ; ಭಾರತಕ್ಕೆ ಪ್ರಯೋಜನಗಳೇನು?

India signs LPG structured deal with US: ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಮುಳ್ಳಿನಂತಿದೆ. ಇಂಧನ ಸುರಕ್ಷತೆಯೇ ತನಗೆ ಮುಖ್ಯ ಎಂಬುದು ಭಾರತದ ಸ್ಪಷ್ಟ ನಿಲುವು. ಈ ಮಧ್ಯೆ ಅಮೆರಿಕದೊಂದಿಗೆ ಆಮದು ಹೆಚ್ಚಿಸಲು ಹೊರಟಿರುವ ಭಾರತವು ಈಗ 2.2 ಮಿಲಿಯನ್ ಟನ್ ಎಲ್​ಪಿಜಿ ಒಪ್ಪಂದ ಮಾಡಿಕೊಂಡಿದೆ. ಇದು ಈ ಎರಡು ದೇಶಗಳ ನಡುವಿನ ಮೊದಲ ಸ್ಟ್ರಾಟಿಜಿಕ್ ಎಲ್​ಪಿಜಿ ಡೀಲ್ ಎನಿಸಿದೆ.

ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್​ಪಿಜಿ ಒಪ್ಪಂದ; ಭಾರತಕ್ಕೆ ಪ್ರಯೋಜನಗಳೇನು?
ಭಾರತ ಅಮೆರಿಕ ಎಲ್​ಪಿಜಿ ಒಪ್ಪಂದ

Updated on: Nov 17, 2025 | 3:25 PM

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ (India US trade deal) ಬಗ್ಗೆ ಮಾತುಕತೆಗಳು ನಡೆಯುತ್ತಿರುವ ಹೊತ್ತಲ್ಲೇ ಈ ಎರಡೂ ದೇಶಗಳ ನಡುವಿನ ಇಂಧನ ಸಹಕಾರ ಹೊಸ ಹಂತ ಪ್ರವೇಶಿಸಿದೆ. ಮುಂದಿನ ವರ್ಷಕ್ಕೆ (2026) ಅಮೆರಿಕದಿಂದ 2.2 ಮಿಲಿಯನ್ ಟನ್ (ಎಂಟಿಪಿಎ) ಎಲ್​ಪಿಜಿ (LPG) ಖರೀದಿಸಲು ಭಾರತ 1 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಆ ದೇಶದೊಂದಿಗೆ ಭಾರತ ಮಾಡಿಕೊಂಡ ಮೊದಲ ಎಲ್​ಪಿಜಿ ಒಪ್ಪಂದ ಎನಿಸಿದೆ. ಇದು ಕೇವಲ ಕಮರ್ಷಿಯಲ್ ಡೀಲ್ ಅಲ್ಲ, ಎರಡೂ ದೇಶಗಳ ನಡುವಿನ ರಣತಂತ್ರಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ. ಕೇಂದ್​ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಡೀಲ್ ಅನ್ನು “ಹಿಸ್ಟಾರಿಕಲ್ ಫಸ್ಟ್” ಎಂದು ಬಣ್ಣಿಸಿದ್ದಾರೆ. ಭಾರತದ ಇಂಧನ ಭದ್ರತೆಗೆ ಇದು ಹೊಸ ದಿಕ್ಕು ನೀಡುತ್ತದೆ ಎಂದಿದ್ದಾರೆ. ಅಂದಹಾಗೆ, ಅಮೆರಿಕದಿಂದ ಭಾರತ ಸರಬರಾಜು ಮಾಡಿಕೊಳ್ಳುವ ಎಲ್​ಪಿಜಿ ಭಾರತದ ಒಟ್ಟಾರೆ ಎಲ್​ಪಿಜಿ ಆಮದಿನಲ್ಲಿ ಶೇ. 10 ಆಗುತ್ತದೆ.

ಸಂಬಂಧಕ್ಕೆ ಹೊಸ ಶಕ್ತಿ

ವೇಗವಾಗಿ ಬದಲಾಗುತ್ತಿರುವ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಪೂರೈಕೆ ವೈವಿಧ್ಯತೆಗೆ ಭಾರತ ಬಹಳ ಹಿಂದಿನಿಂದಲೂ ಒತ್ತು ನೀಡುತ್ತಾ ಬಂದಿದೆ. ಇಲ್ಲಿಯವರೆಗೆ, ಭಾರತವು LPG ಆಮದುಗಳಿಗಾಗಿ ಪ್ರಾಥಮಿಕವಾಗಿ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿತ್ತು. ಆದರೆ ಮೊದಲ ಬಾರಿಗೆ, ಅಮೆರಿಕದೊಂದಿಗೆ ಈ ರಚನಾತ್ಮಕ ಒಪ್ಪಂದವು ಎರಡೂ ದೇಶಗಳ ನಡುವಿನ ಇಂಧನ ಸಹಕಾರವನ್ನು ಹೆಚ್ಚಿಸುತ್ತದೆ. ವಿಶ್ವದ ಅತಿದೊಡ್ಡ LPG ಉತ್ಪಾದಕರಲ್ಲಿ ಅಮೆರಿಕವೂ ಇದೆ. ಈ ಒಪ್ಪಂದವು ಮುಂಬರುವ ವರ್ಷಗಳಲ್ಲಿ LNG, ಕಚ್ಚಾ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯುವ ನಿರೀಕ್ಷೆ ಇದೆ.

ಈ ಒಪ್ಪಂದ ಏಕೆ ಮುಖ್ಯ?

ಭಾರತಕ್ಕೆ ಅಗತ್ಯವಾಗಿರುವ ಎಲ್​ಪಿಜಿಯಲ್ಲಿ ಅರ್ಧದಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸಾಕಷ್ಟು ಪ್ರಮಾಣದ ಎಲ್ಪಿಜಿ ಆಮದು ಆಗುವುದರಿಂದ ಕಡಿಮೆ ಬೆಲೆಗೆ ಪೂರೈಕೆ ಮಾಡಬಲ್ಲ ಸ್ಥಿರ ಹಾಗು ವಿಶ್ವಾಸಾರ್ಹ ಮೂಲಗಳು ಅತ್ಯಗತ್ಯ ಎನಿಸಿವೆ. ಭಾರತ ಹಾಗೂ ಅಮೆರಿಕ ನಡುವಿನ ಈ ಒಪ್ಪಂದವು ಮೌಂಟ್ ಬೆಲ್ವಿಯು (Mount Belvieu) ಬೆಂಚ್ ಮಾರ್ಕ್ ಅನ್ನು ಆಧರಿಸಿದೆ. ಇದನ್ನು ಜಾಗತಿಕ LPG ಮಾರುಕಟ್ಟೆಯಲ್ಲಿ ಪಾರದರ್ಶಕ ಮತ್ತು ಸ್ಥಿರ ಬೆಲೆ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಭಾರತದ ಮೂರು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ IOC, BPCL ಮತ್ತು HPCL ತಂಡವು US ಉತ್ಪಾದಕರೊಂದಿಗೆ ತಿಂಗಳುಗಳ ಕಾಲ ನಡೆಸಿದ ಮಾತುಕತೆಗಳ ನಂತರ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಇದು ಪೂರೈಕೆಯ ಅಪಾಯವನ್ನು ಕಡಿಮೆ ಮಾಡುವುದಲ್ಲದೆ ಬೆಲೆ ಏರಿಳಿತಗಳ ಪರಿಣಾಮವನ್ನು ಸೀಮಿತಗೊಳಿಸುತ್ತದೆ. 2026 ರಲ್ಲಿ ಜಾಗತಿಕ ಮಾರುಕಟ್ಟೆ ಅಸ್ಥಿರವಾಗಿಬಿಟ್ಟರೂ, ಭಾರತಕ್ಕೆ ಹೆಚ್ಚೇನೂ ಸಮಸ್ಯೆಯಾಗದು.

ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ

ಗ್ರಾಹಕರಿಗೆ ಏನು ಪ್ರಯೋಜನ?

ಕಳೆದ ವರ್ಷ ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳು ಶೇ. 60 ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಇದರ ಹೊರತಾಗಿಯೂ, ಉಜ್ವಲ ಗ್ರಾಹಕರಿಗೆ ₹500-550 ಗೆ ಸಿಲಿಂಡರ್‌ಗಳ ಪೂರೈಕೆ ಆಗುತ್ತಿದೆ. ಸರ್ಕಾರ ₹40,000 ಕೋಟಿಗೂ ಹೆಚ್ಚು ಸಬ್ಸಿಡಿಗಳನ್ನು ನೀಡುವ ಮೂಲಕ ಬೆಲೆಗಳನ್ನು ಸ್ಥಿರವಾಗಿರಿಸಿದೆ. ಅಮೆರಿಕದೊಂದಿಗಿನ ಈ ದೀರ್ಘಾವಧಿಯ ಒಪ್ಪಂದವು ಭವಿಷ್ಯದಲ್ಲಿ ಬೆಲೆಗಳನ್ನು ನಿಯಂತ್ರಿಸಲು ಮತ್ತಷ್ಟು ಸಹಾಯ ಮಾಡುತ್ತದೆ. ಹಾಗೂ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಯಾವ ಕಂಪನಿಗಳು ಹೆಚ್ಚು ಲಾಭ ಪಡೆಯುತ್ತವೆ?

ಈ ಸ್ಟ್ರಕ್ಚರಲ್ ಡೀಲ್​ನಿಂದ ಪ್ರಾಥಮಿಕ ಫಲಾನುಭವಿಗಳು ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಆಗಿರುತ್ತಾರೆ. ಏಕೆಂದರೆ ಈ ಮೂರು ಕಂಪನಿಗಳು ಎಲ್‌ಪಿಜಿ ಆಮದು ಮತ್ತು ದೇಶೀಯ ಪೂರೈಕೆ ಸರಪಳಿಯನ್ನು ನಿರ್ವಹಿಸುತ್ತವೆ. ಈ ಕಂಪನಿಗಳು ಎರಡು ಪ್ರಮುಖ ಪ್ರಯೋಜನಗಳನ್ನು ಅನುಭವಿಸುತ್ತವೆ: ಮೊದಲನೆಯದಾಗಿ, ಪೂರೈಕೆ ಸ್ಥಿರತೆಯನ್ನು (ಸಪ್ಲೈ ಸ್ಟೆಬಿಲಿಟಿ) ಸಾಧಿಸಲಾಗುತ್ತದೆ ಮತ್ತು ಗಲ್ಫ್ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಎರಡನೆಯದೆಂದರೆ, ಕಾಸ್ಟ್ ಪ್ಲಾನಿಂಗ್​ನಲ್ಲಿ ಸುಧಾರಣೆ ಆಗುತ್ತದೆ. ಲಾಂಗ್ ಟರ್ಮ್ ಬೆಂಚ್​ಮಾರ್ಕಿಂಗ್ ಮೂಲಕ ಬೆಲೆ ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ ಪೆನ್ನಿ ನಾಣ್ಯ ತಯಾರಿಕೆ ಇನ್ನಿಲ್ಲ; 232 ವರ್ಷಗಳ ಇತಿಹಾಸ ಕೊನೆ; ಕಾರಣ ಏನು?

ಈ ವಲಯಗಳ ಮೇಲೂ ಪರಿಣಾಮ ಬೀರುತ್ತದೆಯೇ?

LPG ಲಾಜಿಸ್ಟಿಕ್ಸ್, ಬಂದರು ಮೂಲಸೌಕರ್ಯ (ಪೋರ್ಟ್ ಇನ್​ಫ್ರಾಸ್ಟ್ರಕ್ಚರ್) ಮತ್ತು ಸಾಗಣೆಯಲ್ಲಿ (ಶಿಪ್ಪಿಂಗ್) ತೊಡಗಿರುವ ಕಂಪನಿಗಳು ಸಕಾರಾತ್ಮಕ ಪರಿಣಾಮವನ್ನು ಕಾಣಬಹುದು. ಅಮೆರಿಕದಿಂದ ಆಗುವ LPG ಪೂರೈಕೆಯು ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವಳಿ ಬಂದರುಗಳಲ್ಲಿ ವಾಲ್ಯೂಮ್ ಹೆಚ್ಚಿಸುವ ನಿರೀಕ್ಷೆಯಿದೆ. ಇದಲ್ಲದೆ, ಪೆಟ್ರೋಕೆಮಿಕಲ್ ವಲಯಕ್ಕೆ ಇದು ಮುಂಬರುವ ವರ್ಷಗಳಲ್ಲಿ ಅನಿಲ ಆಧಾರಿತ ಫೀಡ್‌ಸ್ಟಾಕ್‌ನ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಇಂಧನ ಸುರಕ್ಷತೆ ಮುಖ್ಯ

ಭಾರತದ ಮೊದಲ ಯುಎಸ್ ಎಲ್‌ಪಿಜಿ ದೀರ್ಘಾವಧಿಯ ಒಪ್ಪಂದದಿಂದ ಇನ್ನೂ ಬೇರೆ ಬೇರೆ ಲಾಭಗಳಿವೆ. ಭಾರತ ಮತ್ತು ಅಮೆರಿಕ ನಡುವಿನ ಕಾರ್ಯತಂತ್ರಾತ್ಮಕ ಸಂಬಂಧಕ್ಕೆ ಪುಷ್ಟಿ ಸಿಗುತ್ತದೆ. ಅಮೆರಿಕದಿಂದ ಆಮದು ಹೆಚ್ಚಿಸಿ, ಬೇರೆ ಡೀಲ್​​ಗಳನ್ನು ಕುದುರಿಸಿಕೊಳ್ಳಲು ಭಾರತಕ್ಕೆ ಸಹಾಯವಾಗುತ್ತದೆ. ಭಾರತದ ಗ್ರಾಹಕರಿಗೆ ಸ್ಥಿರ ಬೆಲೆಯೂ ಪ್ರಾಪ್ತವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ