ಜಾಗತಿಕ ಎಐ ಪೂರೈಕೆ ಸರಪಳಿ ವ್ಯವಸ್ಥೆಗೆ ಮೈತ್ರಿ; ಅಮೆರಿಕ ನೇತೃತ್ವದ ಗುಂಪಿಗೆ ಭಾರತ ಸೇರ್ಪಡೆ
ಕೃತಕ ಬುದ್ಧಿಮತ್ತೆ ಮತ್ತು ವಿರಳ ಖನಿಜಗಳ ಕ್ಷೇತ್ರದ ಪೂರೈಕೆ ಸರಪಳಿಯನ್ನು ಚೀನಾ ಹಿಡಿತದಿಂದ ಬೇರ್ಪಡಿಸಲು ಅಮೆರಿಕ ನೇತೃತ್ವದ ಗುಂಪು ಸಿದ್ಧವಾಗಿದೆ. ಈ ಗುಂಪಿಗೆ ಭಾರತವೂ ಸೇರ್ಪಡೆಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಡಿಕ್ಲರೇಶನ್ಗೆ ಭಾರತ ಸಹಿ ಹಾಕಿದೆ. ಜಪಾನ್, ಸೌತ್ ಕೊರಿಯಾ, ಕತಾರ್, ಯುಎಇ, ವಿವಿಧ ಐರೋಪ್ಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.

ನವದೆಹಲಿ, ನವೆಂಬರ್ 16: ಎಐ ಕ್ಷೇತ್ರದಲ್ಲಿ ಚೀನಾ ಅಗಾಧ ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ನೇತೃತ್ವದಲ್ಲಿ ಹೊಸ ಗುಂಪೊಂದು ಅಣಿಗೊಂಡಿದೆ. ಎಐ ಮತ್ತು ಕ್ರಿಟಿಕಲ್ ತಂತ್ರಜ್ಞಾನದ ಪೂರೈಕೆ ಸರಪಳಿಯ (Supply Chain) ಸುರಕ್ಷತೆ ಬಲಪಡಿಸಲು ಅಮೆರಿಕ ನೇತೃತ್ವದಲ್ಲಿ ಜಾಗತಿಕ ಮೈತ್ರಿ ಸಿದ್ಧವಾಗುತ್ತಿದೆ. ಈ ಸಂಬಂಧ ಭಾರತವೂ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.
ಎಐ ಮತ್ತು ವಿರಳ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯು ಚೀನಾದ ನಿಯಂತ್ರಣದಲ್ಲೇ ಇರುವುದರಿಂದ ಅಮೆರಿಕ ಕೆಲವಾರು ವರ್ಷಗಳಿಂದ ಪರ್ಯಾಯ ವ್ಯವಸ್ಥೆಗೆ ಹಾತೊರೆಯುತ್ತಿದೆ. ಎನ್ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಅವರು ಶಂಕಿತ ಚೀನೀ ಗೂಢಚಾರಿಣಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಪ್ರಕರಣವು ಅಮೆರಿಕಕ್ಕೆ ಚಿಂತೆಗೀಡು ತಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಎಐ ಮತ್ತು ವಿರಳ ಖನಿಜಗಳ ಪೂರೈಕೆ ಸರಪಳಿಯನ್ನು ಚೀನಾ ನಿಯಂತ್ರಣದಿಂದ ತಪ್ಪಿಸಲು ಅಮೆರಿಕ ನೇತೃತ್ವದಲ್ಲಿ ಹೊಸ ಗುಂಪು ರಚಿಸಲಾಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಜನರ ಆರೋಗ್ಯ ಆರೈಕೆಗೆ ಸರ್ಕಾರದ ವೆಚ್ಚ ಒಂದು ದಶಕದಲ್ಲಿ ಮೂರು ಪಟ್ಟು ಏರಿಕೆ; ಜನರ ಜೇಬಿಗಿಂತ ಸರ್ಕಾರದ ವೆಚ್ಚ ಹೆಚ್ಚು
ದೂರಗಾಮಿ ಸಮೃದ್ಧಿಯ ಅಡಿಪಾಯ ಭದ್ರಪಡಿಸಲು ಸ್ಯಾನ್ ಫ್ರಾನ್ಸಿಸ್ಕೋ ಡಿಕ್ಲರೇಶನ್ (San Francisco Declaration on the secure foundation of Enduring Prosperity) ಎಂದು ಹೇಳಲಾಗುವ ಈ ಒಪ್ಪಂದಕ್ಕೆ ಅಮೆರಿಕ, ಭಾರತವಲ್ಲದೆ, ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್, ಯುಕೆ, ಸೌತ್ ಕೊರಿಯಾ, ಕತಾರ್ ಮತ್ತು ಯುಎಇ ದೇಶಗಳೂ ಸಹಿ ಹಾಕಿವೆ. ಮುಂದಿನ ವಾರ ಜರ್ಮನಿ, ಸ್ವೀಡನ್, ನೆದರ್ಲ್ಯಾಂಡ್ಸ್ ಮತ್ತು ಯೂರೋಪಿಯನ್ ಕಮಿಷನ್ ಕೂಡ ಸಹಿ ಹಾಕುವ ನಿರೀಕ್ಷೆ ಇದೆ.
ಸೆಮಿಕಂಡಕ್ಟರ್, ವಿರಳ ಖನಿಜ, ಆಧುನಿಕ ಮ್ಯಾನುಫ್ಯಾಕ್ಚರಿಂಗ್, ಇಂಧನ ಮೂಲಸೌಕರ್ಯ ಮತ್ತು ಡಾಟಾ ಸೆಂಟರ್ಗಳನ್ನು ಒಳಗೊಂಡ ಜಾಗತಿಕ ಎಐ ಉದ್ಯಮಕ್ಕಾಗಿ ಸುರಕ್ಷಿತವಾದ ಪೂರೈಕೆ ಸರಪಳಿಯನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಅಮೆರಿಕವು ಪ್ಯಾಕ್ಸ್ ಸಿಲಿಕಾ ಎನ್ನುವ ಉಪಕ್ರಮ ಕೈಗೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋ ಡಿಕ್ಲರೇಶನ್ ಈ ಉಪಕ್ರಮದ ಒಂದು ಭಾಗವಾಗಿದೆ.
ಇದನ್ನೂ ಓದಿ: ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8, ಭಾರತದ್ದು ಶೇ. 7.2; ಗೋಲ್ಡ್ಮನ್ ಸ್ಯಾಕ್ಸ್ ಭವಿಷ್ಯ
ಅಮೆರಿಕ ನೇತೃತ್ವದ ಗುಂಪಿಗೆ ಸೇರುವುದರಿಂದ ಭಾರತಕ್ಕೆ ಏನು ಲಾಭ?
ಭಾರತವು ಸೆಮಿಕಂಡಕ್ಟರ್ ಮತ್ತು ಎಐ ಕ್ಷೇತ್ರದಲ್ಲಿ ಮುನ್ನಡೆ ಕಾಣಲು ಪ್ರಯತ್ನಿಸುತ್ತಿದೆ. ಸೆಮಿಕಂಡಕ್ಟರ್ ಚಿಪ್ ತಯಾರಿಕೆಯನ್ನು ಗಣನೀಯವಾಗಿ ಹೆಚ್ಚಿಸಲು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಮತ್ತು ಸ್ವಂತವಾದ ಎಐ ಮೂಲಸೌಕರ್ಯ ನಿರ್ಮಿಸಲು ಭಾರತ ಹೊರಟಿದೆ. ಇದು ಸಾಧ್ಯವಾಗಬೇಕಾದರೆ ಪೂರೈಕೆ ವ್ಯವಸ್ಥೆ ಅಬಾಧಿತವಾಗಿರಬೇಕು. ಪ್ರಮುಖ ಕಚ್ಚಾ ವಸ್ತು ಅಥವಾ ಬಿಡಿಭಾಗಗಳು ದೊರಕದೇ ಹೋದರೆ ಉದ್ಯಮದ ಓಟ ಕುಂಠಿತಗೊಳ್ಳುತ್ತದೆ. ಹೀಗಾಗಿ, ಭಾರತವು ಸ್ಯಾನ್ ಫ್ರಾನ್ಸಿಸ್ಕೋ ಡಿಕ್ಲರೇಶನ್ಗೆ ಸಹಿ ಹಾಕಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




