
ನವದೆಹಲಿ, ಜೂನ್ 17: ಹವಾ ನಿಯಂತ್ರಣ ಯಂತ್ರ ಅಥವಾ ಏರ್ ಕಂಡೀಷನರ್ಗಳು (AC – Air Conditioner) ಸಾಕಷ್ಟು ವಿದ್ಯುತ್ ಬೇಡುತ್ತವೆ. ಉಷ್ಣ ಪ್ರದೇಶದ ಜನರು ಎಸಿಯನ್ನು ಶೇ. 20ಕ್ಕಿಂತಲೂ ಕಡಿಮೆ ಡಿಗ್ರಿ ಸೆಲ್ಷಿಯಸ್ಗೆ ಇಡಬಹುದು. ಶೀತ ಪ್ರದೇಶದ ಜನರು ಶೇ. 30ಕ್ಕಿಂತಲೂ ಹೆಚ್ಚು ಉಷ್ಣಾಂಶಕ್ಕೆ ಎಸಿಯ ಸೆಟ್ಟಿಂಗ್ ಇಡಬಹುದು. ಇದರಿಂದ ವಿದ್ಯುತ್ ಪೋಲಾಗಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ 23-24 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಸರಿಯಾಗಿರುತ್ತದೆ. ಈ ಅಂಶವನ್ನು ಮನಗಂಡು ಸರ್ಕಾರವು ಏರ್ ಕಂಡೀಷನಿಂಗ್ ನಿಯಮಗಳನ್ನು ರೂಪಿಸಲು ಮುಂದಾಗಿದೆ.
ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ದೇಶಾದ್ಯಂತ ಶೀಘ್ರದಲ್ಲೇ ಹೊಸ ಎಸಿ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಏರ್ ಕಂಡೀಷನರ್ಗಳು 20-28 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಮಾತ್ರವೇ ನೀಡಬಹುದು.
ಇದನ್ನೂ ಓದಿ: ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
ಅಂದರೆ, ಎಸಿಯಿಂದ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್, ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಷಿಯಸ್ ಮಾತ್ರವೇ ಸಿಗುತ್ತದೆ. ನೀವು 20 ಡಿಗ್ರಿ ಸೆಲ್ಷಿಯಸ್ಗಿಂತ ಕಡಿಮೆ ಉಷ್ಣಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ, 28 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಏರಿಸಲೂ ಆಗುವುದಿಲ್ಲ. ಇಂಥದ್ದೊಂದು ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಮೆರಿಕ, ಸ್ಪೇನ್, ಜಪಾನ್, ಸಿಂಗಾಪುರ್, ಆಸ್ಟ್ರೇಲಿಯಾ ಇತ್ಯಾದಿ ಕೆಲವೇ ದೇಶಗಳಲ್ಲಿ ಹವಾ ನಿಯಂತ್ರಣ ನಿಯಮಗಳು ಜಾರಿಯಲ್ಲಿವೆ. ಜಪಾನ್ ದೇಶದ ಸರ್ಕಾರಿ ಕಟ್ಟಡಗಳಲ್ಲಿ 28 ಡಿಗ್ರಿ ಉಷ್ಣಾಂಶ ಹೊಂದಿರಬೇಕೆಂದು ಸ್ಟ್ಯಾಂಡರ್ಡೈಸ್ ಮಾಡಲಾಗಿದೆ. ಅಮೆರಿಕದಲ್ಲಿ ಮನೆಗಳಲ್ಲಿರುವ ಎಸಿ ಉಷ್ಣಾಂಶ 26 ಡಿಗ್ರಿಯಷ್ಟಿರಬೇಕು ಎನ್ನುವ ಸಲಹೆ ಇದೆ. ಆದರೆ, ಇದು ಕಡ್ಡಾಯವಲ್ಲ.
ಇದನ್ನೂ ಓದಿ: ಇ-ಆಧಾರ್ ಇದ್ರೆ ಸಾಕು, ಮನೆಯಲ್ಲೇ ಕೂತು ಎಲ್ಲಾ ಮಾಡಲು ಸಾಧ್ಯ; ಏನಂತಾರೆ ಯುಐಡಿಎಐ ಸಿಇಒ?
ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿ ಎಸಿಯನ್ನು 24ರಿಂದ 26 ಡಿಗ್ರಿ ಸೆಲ್ಷಿಯಸ್ನಲ್ಲಿ ಇರಿಸಬೇಕೆನ್ನುವ ಮಾರ್ಗಸೂಚಿಯನ್ನು ನೀಡಲಾಗಿದೆ. ಸ್ಪೇನ್ ದೇಶದಲ್ಲಿ ಸ್ವಲ್ಪ ಕುತೂಹಲ ಎನಿಸುವ ನಿಯಮ ಇದೆ. ಇಲ್ಲಿ ಬೇಸಿಗೆಯಲ್ಲಿ ಎಸಿ ಉಷ್ಣಾಂಶವನ್ನು 27 ಡಿಗ್ರಿಗಿಂತ ಕಡಿಮೆಗೆ ಇರಿಸುವಂತಿಲ್ಲ. ಚಳಿಗಾಲದಲ್ಲಿ ಎಸಿ ಉಷ್ಣಾಂಶ 19 ಡಿಗ್ರಿಗಿಂತ ಹೆಚ್ಚಿರುವಂತಿಲ್ಲ.
ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ಸಂಸ್ಥೆ ಪ್ರಕಾರ ಎಸಿ ಉಷ್ಣಾಂಶವನ್ನು 20-24 ಡಿಗ್ರಿ ಸೆಲ್ಷಿಯಸ್ಗೆ ಇರಿಸಿದರೆ ಶೇ. 26ರಷ್ಟು ವಿದ್ಯುತ್ ಉಳಿಸಬಹುದಂತೆ. ಒಂದೊಂದು ಡಿಗ್ರಿ ಉಷ್ಣಾಂಶ ಹೆಚ್ಚಿಸಿದಷ್ಟೂ ವಿದ್ಯುತ್ ಉಳಿತಾಯ ಶೇ. 6ರಷ್ಟು ಹೆಚ್ಚುತ್ತದೆ ಎಂದೆನ್ನಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ