US Drones: ಅಮೆರಿಕದಿಂದ ಪ್ರಬಲ 31 ಸಶಸ್ತ್ರ ಡ್ರೋನ್​ಗಳನ್ನು ಪಡೆಯಲಿದೆ ಭಾರತ; ಮುಂದಿನ ತಿಂಗಳಿಂದಲೇ ಖರೀದಿ ಪ್ರಕ್ರಿಯೆ

|

Updated on: Jun 25, 2023 | 4:07 PM

India To Buy 31 MQ-9B Reaper Drones: ಅಮೆರಿಕದ ಶಕ್ತಿಶಾಲಿ 31 ಎಂಕ್ಯೂ-9ಬಿ ರೀಪರ್ ಡ್ರೋನ್​ಗಳನ್ನು ಭಾರತ ಖರೀದಿಸಲಿದ್ದು, ಇದರ ಅಂದಾಜು ವೆಚ್ಚ 29,000 ಕೋಟಿ ರೂ ಆಗಿದೆ. ಭಾರತದಲ್ಲೇ ಇವುಗಳ ಅಸೆಂಬ್ಲಿಂಗ್ ಆಗಲಿದ್ದು, ಎರಡು ವರ್ಷದೊಳಗೆ 10 ಡ್ರೋನ್​ಗಳು ಸರಬರಾಜಾಗಲಿವೆ.

US Drones: ಅಮೆರಿಕದಿಂದ ಪ್ರಬಲ 31 ಸಶಸ್ತ್ರ ಡ್ರೋನ್​ಗಳನ್ನು ಪಡೆಯಲಿದೆ ಭಾರತ; ಮುಂದಿನ ತಿಂಗಳಿಂದಲೇ ಖರೀದಿ ಪ್ರಕ್ರಿಯೆ
ಎಂಕ್ಯೂ-9ಬಿ ರೀಪರ್ ಡ್ರೋನ್
Follow us on

ನವದೆಹಲಿ: ಅಮೆರಿಕದ ಅತ್ಯಾಧುನಿಕ ಸಮರ ಡ್ರೋನ್​ಗಳನ್ನು ಭಾರತ ಪಡೆಯಲಿದೆ. 31 ಎಂಕ್ಯೂ-9ಬಿ ರೀಪರ್ ಡ್ರೋನ್​ಗಳನ್ನು (MQ-9B Reaper Drone) ಖರೀದಿಸುವ ಪ್ರಕ್ರಿಯೆ ಮುಂದಿನ ತಿಂಗಳಿಂದಲೇ ಆರಂಭವಾಗಲಿದೆ. ಪ್ರಿಡೇಟರ್ಬಿ ಡ್ರೋನ್ ಎಂದೂ ಕರೆಯಲಾಗುವ ಈ ಡ್ರೋನ್​ಗಳು ಮುಂದಿನ 6-7 ವರ್ಷಗಳಲ್ಲಿ ಭಾರತಕ್ಕೆ ಸರಬರಾಜಾಗಲಿವೆ. ಆದರೆ, ಜುಲೈನಿಂದ ಇದರ ಒಪ್ಪಂದ ಇತ್ಯಾದಿ ಖರೀದಿ ಪ್ರಕ್ರಿಯೆ ಶುರುವಾಗಲಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಹಳ ಶಕ್ತಿಶಾಲಿ ಎಂದು ಪರಿಗಣಿಸಲಾದ ಈ 31 ಡ್ರೋನ್​ಗಳ ಖರೀದಿಗೆ ಅಂದಾಜು ವೆಚ್ಚ 3.5 ಬಿಲಿಯನ್ ಡಾಲರ್ (ಸುಮಾರು 29,000 ಕೋಟಿ ರೂ) ಎಂದು ಹೇಳಲಾಗುತ್ತಿದೆ.

31 ಸಶಸ್ತ್ರ ರೀಪರ್ ಡ್ರೋನ್​ಗಳ (Weaponised Drone) ಪೈಕಿ 15 ಡ್ರೋನ್​ಗಳು ನೌಕಾಪಡೆಗೆ ನಿಯುಕ್ತಗೊಳ್ಳಲಿವೆ. ಸಾಗರ ಕಾವಲು ಕಾರ್ಯಕ್ಕೆ ಇವು ಬಳಕೆಯಾಗಲಿವೆ. ಇನ್ನು, ಭಾರತೀಯ ಭೂಸೇನೆ ಮತ್ತು ವಾಯುಸೇನೆಗಳಿಗೆ ತಲಾ ಎಂಟೆಂಟು ಡ್ರೋನ್​ಗಳು ಸ್ಕೈ ಗಾರ್ಡಿಯನ್​ಗಳಾಗಿ ನಿಯೋಜನೆಗೊಳ್ಳುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿForex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಭಾರತದಲ್ಲೇ ತಯಾರಾಗುತ್ತವೆ ಈ ಡ್ರೋನ್​ಗಳು

ಅಮೆರಿಕದ ಈ ಅತ್ಯಾಧುನಿಕ ರೀಪರ್ ಡ್ರೋನ್​ಗಳು ಅಲ್ಲಿನ ಜನರಲ್ ಅಟಾಮಿಕ್ಸ್ (General Atomics) ಕಂಪನಿಯ ಉತ್ಪನ್ನಗಳಾಗಿವೆ. ಭಾರತದ ಯಾವುದಾದರೂ ಕಂಪನಿ ಜೊತೆ ಸಹಭಾಗಿತ್ವದಲ್ಲಿ ಈ ಡ್ರೋನ್​ಗಳನ್ನು ಭಾರತದಲ್ಲೇ ಅಸೆಂಬಲ್ ಮಾಡಲಾಗುತ್ತದೆ. ಈ ಡ್ರೋನ್​ಗಳ ಕೆಲ ಬಿಡಿಭಾಗಗಳನ್ನೂ ಭಾರತದಲ್ಲಿ ತಯಾರಿಸುವ ಸಾಧ್ಯತೆ ಇದೆ.

ಜೂನ್ 15ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಖರೀದಿ ಮಂಡಳಿ (Defence Acquisitions Council) ಈ ಡ್ರೋನ್ ಖರೀದಿ ಒಪ್ಪಂದಕ್ಕೆ ಎಒಎನ್ (AoN- Acceptance of Necessity) ಹೊರಡಿಸಿತ್ತು. ಜುಲೈ ಮೊದಲ ವಾರದಲ್ಲಿ ಈ ಒಪ್ಪಂದದ ಮುಂದಿನ ಕ್ರಮದ ಬಗ್ಗೆ ಅಮೆರಿಕ ಸರ್ಕಾರಕ್ಕೆ ಮನವಿ ಹೋಗಲಿದೆ. ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ ಎರಡು ವರ್ಷದೊಳಗೆ 10 ಡ್ರೋನ್​ಗಳು ಸರಬರಾಜಾಗುವ ನಿರೀಕ್ಷೆ ಇದೆ. ಅದಾದ ಬಳಿಕ ಪ್ರತೀ 6 ತಿಂಗಳಿಗೊಮ್ಮೆ ಡ್ರೋನ್​ಗಳು ಸರಣಿಯಾಗಿ ಭಾರತಕ್ಕೆ ಸಿಗಲಿವೆ.

ಇದನ್ನೂ ಓದಿFilm Scam: ನಕಲಿ ಸಿನಿಮಾ, ನಕಲಿ ವಿತರಕರ ಹೆಸರಲ್ಲಿ 1,500 ಕೋಟಿ ರೂ ಲಪಟಾಯಿಸಿಕೊಂಡಿತಾ ಎರೋಸ್? ಸೆಬಿ ತನಿಖೆಯಲ್ಲಿ ಕರ್ಮಕಾಂಡ ಬಯಲು

ಬಹಳ ಶಕ್ತಿಶಾಲಿ ಡ್ರೋನ್​ಗಳು….

ಚಾಲಕರಹಿತವಾದ ಮತ್ತು ರಿಮೋಟ್ ಆಗಿ ನಿಯಂತ್ರಿಸಬಹುದಾದ ಎಂಕ್ಯೂ-9ಬಿ ರೀಪರ್ ಡ್ರೋನ್ ಬಹಳ ನಿಖರ ಸಾಮರ್ಥ್ಯಕ್ಕೆ ಹೆಸರಾಗಿದೆ. ಶತ್ರುಗಳ ಸ್ಥಳಕ್ಕೆ ಗುರಿ ಇಟ್ಟರೆ ತಪ್ಪದೇ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ದೂರ ಸ್ಥಳದ ಗುರಿಗೆ ಹೊಡೆಯಬಲ್ಲ ಕ್ಷಿಪಣಿಗಳು ಮತ್ತು ಸ್ಮಾರ್ಟ್ ಬಾಂಬ್​ಗಳನ್ನು ಈ ಡ್ರೋನ್​ಗಳು ಹೊತ್ತೊಯ್ಯಬಲ್ಲುವು. ಚೀನಾದ ಬಳಿ ಬಹಳಷ್ಟು ಡ್ರೋನ್​ಗಳಿದ್ದು, ಅದಕ್ಕೆ ಪ್ರತಿಯಾಗಿ ಅವಕ್ಕಿಂತ ಶಕ್ತಿಶಾಲಿ ಡ್ರೋನ್​ಗಳಾಗಿ ಎಂಕ್ಯೂ-9ಬಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ