Forex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
India's Forex Rises: ಫಾರೆಕ್ಸ್ ಮೀಸಲು ನಿಧಿ ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ 2.35 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರಲ್ಲಿ ವಿದೇಶೀ ಕರೆನ್ಸಿ ಸಂಪತ್ತಿನಲ್ಲೇ 2.578 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಚಿನ್ನದ ಆಸ್ತಿ ಕಡಿಮೆ ಆಗಿದೆ.
ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ 2.35 ಬಿಲಿಯನ್ ಡಾಲರ್ನಷ್ಟು (ಸುಮಾರು 19,000 ಕೋಟಿ ರೂ) ಮೊತ್ತ ಹೆಚ್ಚಳವಾಗಿದೆ. ಇದರ ಹಿಂದಿನ ವಾರದಲ್ಲಿ 1.318 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ನಿಧಿ ಕಡಿಮೆ ಅಗಿತ್ತು. ಒಟ್ಟಾರೆ ಜೂನ್ 16ಕ್ಕೆ ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ ಫಂಡ್ನಲ್ಲಿ ಒಟ್ಟು 596.098 ಬಿಲಿಯನ್ ಡಾಲರ್ (ಸುಮಾರು 48.86 ಲಕ್ಷ ಕೋಟಿ ರೂಪಾಯಿ) ಭರ್ತಿಯಾಗಿದೆ. ಇದು ಆರ್ಬಿಐ ಬಿಡುಗಡೆ ಮಾಡಿದ ಸಾಪ್ತಾಹಿಕ ಅಂಕಿಅಂಶಗಳ ವರದಿಯಲ್ಲಿ ಇದೆ.
ಫಾರೆಕ್ಸ್ ಮೀಸಲು ನಿಧಿಯಲ್ಲಿ ನಾಲ್ಕು ಅಂಶಗಳು ಇರುತ್ತವೆ. ವಿದೇಶೀ ಕರೆನ್ಸಿ ಸಂಪತ್ತು, ಚಿನ್ನ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್ನೊಂದಿಗಿನ ಮೀಸಲು ಸ್ಥಾನ ಇವು ನಾಲ್ಕು ಅಂಶಗಳು ಸೇರಿ ಫಾರೆಕ್ಸ್ ಮೀಸಲು ನಿಧಿಯನ್ನು ಗಣಿಸಲಾಗುತ್ತದೆ. ಇದರಲ್ಲಿ ವಿದೇಶೀ ಕರೆನ್ಸಿ ಸಂಪತ್ತು ಬಹಳ ಮುಖ್ಯವಾದ ಭಾಗ. ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ ವಿದೇಶೀ ಕರೆನ್ಸಿ ಸಂಪತ್ತು 2.578 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿ 527.651 ಬಿಲಿಯನ್ ಡಾಲರ್ನಷ್ಟಿದೆ. ಅಂದರೆ ಫಾರೀನ್ ಕರೆನ್ಸಿ ಅಸೆಟ್ಗಳು 43.3 ಲಕ್ಷ ಕೋಟಿ ರೂನಷ್ಟಿವೆ.
ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) 62 ಮಿಲಿಯನ್ ಡಾಲರ್ನಷ್ಟು ಹೆಚ್ಚಾದರೆ, ಐಎಂಎಫ್ನೊಂದಿಗಿನ ಭಾರತದ ಮೀಸಲು ಸ್ಥಾನ 34 ಮಿಲಿಯನ್ನಷ್ಟು ಹೆಚ್ಚಾಗಿದೆ. ಫಾರೆಕ್ಸ್ ರಿಸರ್ವ್ನ ಮೂರು ಭಾಗಗಳು ಹೆಚ್ಚಳವಾದರೆ ಚಿನ್ನದ ಮೀಸಲು ನಿಧಿ ಇಳಿಕೆಯಾಗಿದೆ. ವಿದೇಶೀ ಕರೆನ್ಸಿ ಅಸ್ತಿ ಬಳಿಕ ಫಾರೆಕ್ಸ್ ನಿಧಿಯಲ್ಲಿ ಚಿನ್ನ ಪ್ರಮುಖ ಅಂಶ. ಇದು ಆ ವಾರದಂದು 324 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಒಟ್ಟು ಚಿನ್ನದ ಮೀಸಲು 45.049 ಬಿಲಿಯನ್ ಡಾಲರ್ನಷ್ಟು ಇದೆ ಎಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿ ತಿಳಿದುಬರುತ್ತದೆ.
2021ರಲ್ಲಿ ದಾಖಲೆಯ ಮಟ್ಟದಲ್ಲಿತ್ತು ಫಾರೆಕ್ಸ್ ರಿಸರ್ವ್ಸ್
2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ 645 ಬಿಲಿಯನ್ ಡಅಲರ್ನಷ್ಟು ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಸಂಗ್ರಹ ಎಂಬ ದಾಖಲೆಗೆ ಬಾಜನವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಮೀಸಲು ನಿಧಿಯಲ್ಲಿ ಬಹುತೇಕ ಸತತವಾಗಿ ಇಳಿಕೆ ಆಗುತ್ತಿದೆಯಾದರೂ ಅಪಾಯ ಎನಿಸುವಷ್ಟು ಮಟ್ಟಕ್ಕೆ ಬಂದಿಲ್ಲ.
ಇದನ್ನೂ ಓದಿ: Money: ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದೀರಾ? ಏನು ಮಾಡಬೇಕು? ಸ್ವತಃ ಎಸ್ಬಿಐ ಕೊಟ್ಟ ಸಲಹೆಗಳು ಇಲ್ಲಿವೆ
ಡಾಲರ್ ಹಾಗೂ ಇತರ ವಿದೇಶೀ ಕರೆನ್ಸಿಗಳ ಎದುರು ರುಪಾಯಿಯನ್ನು ರಕ್ಷಿಸಲು ಆರ್ಬಿಐ ಈ ಫಾರೆಕ್ಸ್ ನಿಧಿಯನ್ನು ಬಳಸುತ್ತದೆ. ಡಾಲರ್ ವೃದ್ಧಿಸಿದಾಗೆಲ್ಲಾ ರುಪಾಯಿ ಮೌಲ್ಯ ತೀರಾ ಕುಸಿಯದಂತೆ ತಡೆಯಲು ಈ ನಿಧಿ ಸಹಾಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ