
ನವದೆಹಲಿ, ಫೆಬ್ರುವರಿ 13: ಅಮೆರಿಕವು ಬಾಂಗ್ಲಾದೇಶದ ಕೆಲ ಸರಕುಗಳಿಗೆ ಸುಂಕ ವಿನಾಯಿತಿ ಕೊಟ್ಟಂತೆ ಭಾರತಕ್ಕೂ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಅಮೆರಿಕ ಮತ್ತು ಬಾಂಗ್ಲಾದೇಶ ನಡುವೆ ಇತ್ತೀಚೆಗೆ ಆಗಿರುವ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದ ಕೆಲ ಜವಳಿ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಕೊಡಲಾಗಿದೆ. ಇದರಿಂದ ಭಾರತದ ಜವಳಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಶೇ. 18ರಷ್ಟು ಟ್ಯಾರಿಫ್ ಹೊಂದಿರುವ ಭಾರತದ ಜವಳಿ ಉತ್ಪನ್ನಗಳು, ಶೇ. 0 ಟ್ಯಾರಿಫ್ ಇರುವ ಬಾಂಗ್ಲಾದೇಶದ ಜವಳಿ ರಫ್ತಿನೊಂದಿಗೆ ಪೈಪೋಟಿ ನಡೆಸಲು ಆಗುವುದಿಲ್ಲ ಎನ್ನುವ ಆತಂಕಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಅಮೆರಿಕದ ಹತ್ತಿ ಹಾಗೂ ಕೃತಕ ಫೈಬರ್ ಕಚ್ಚಾ ಪದಾರ್ಥಗಳನ್ನು ಬಳಸಿ ಬಾಂಗ್ಲಾದೇಶದಲ್ಲಿ ತಯಾರಿಸಲಾದ ಜವಳಿ ಉತ್ಪನ್ನಗಳಿಗೆ ಅಮೆರಿಕವು ಟ್ಯಾರಿಫ್ ಅನ್ನು ಶೂನ್ಯಕ್ಕೆ ಇಳಿಸಿದೆ. ಫೆಬ್ರುವರಿ 9ರಂದು ಆದ ಟ್ರೇಡ್ ಡೀಲ್ನಲ್ಲಿ ಈ ಕ್ರಮ ಪ್ರಕಟಿಸಲಾಗಿದೆ. ಉಳಿದಂತೆ, ಇತರ ಬಾಂಗ್ಲಾ ಉತ್ಪನ್ನಗಳಿಗೆ ಅಮೆರಿಕ ವಿಧಿಸುವ ಟ್ಯಾರಿಫ್ ಶೇ. 20ರಿಂದ ಶೇ. 19ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ: ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್ಗಳ ಆಫರ್
‘ಭಾರತಕ್ಕೂ ಕೂಡ ಇದೇ ಸೌಲಭ್ಯ ಕೊಡಲಾಗುತ್ತದೆ. ಸದ್ಯಕ್ಕೆ ನಮ್ಮ ಫ್ರೇಮ್ವರ್ಕ್ ಅಗ್ರೀಮೆಂಟ್ ಮಾಡಲಾಗುತ್ತಿದೆ. ಮಧ್ಯಂತರ ಒಪ್ಪಂದ ಅಂತಿಮಗೊಂಡಾಗ ಈ ಅಂಶ ಇರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು’ ಎಂದು ಹೇಳಿದ ಪೀಯೂಶ್ ಗೋಯಲ್, ಬಾಂಗ್ಲಾ ವಿಚಾರದಲ್ಲಿ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಭಾರತಕ್ಕೆ ಬಾಂಗ್ಲಾದೇಶ ಹೆಚ್ಚು ಅನುಕೂಲ ಪಡೆದಿದೆ ಎಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮತ್ತೊಂದು ಸುಳ್ಳು ಹೇಳಿದ್ದಾರೆ. ಅಮೆರಿಕದಿಂದ ಕಚ್ಚಾ ವಸ್ತು ಖರೀದಿಸಿ, ಅದನ್ನು ಬಳಸಿ ಬಟ್ಟೆ ತಯಾರಿಸಿ, ರಫ್ತು ಮಾಡಿದಾಗ, ಅದಕ್ಕೆ ಶೂನ್ಯ ಪ್ರತಿಸುಂಕ ಹಾಕಲಾಗುತ್ತದೆ. ಬಾಂಗ್ಲಾಗೆ ನೀಡಿರುವ ಈ ಸೌಲಭ್ಯ ಭಾರತಕ್ಕೂ ಸಿಗುತ್ತದೆ’ ಎಂದು ವಾಣಿಜ್ಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ
ಎಸ್ಬಿಐ ರಿಸರ್ಚ್ ಪ್ರಕಾರ, ಬಾಂಗ್ಲಾದೇಶದಿಂದ ಅಮೆರಿಕ 7.5 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಿಂದಲೂ ಇಷ್ಟೇ ಪ್ರಮಾಣದ ಜವಳಿ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಬಾಂಗ್ಲಾದೇಶದ ಆರ್ಥಿಕತೆಗೆ ಅದರ ಜವಳಿ ಕ್ಷೇತ್ರದ ಕೊಡುಗೆ ಅತ್ಯಧಿಕ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ