ಡಾವೊಸ್, ಜನವರಿ 23: ಭಾರತ ಮೊಬೈಲ್ ಫೋನ್ ತಯಾರಿಕೆಯಲ್ಲಿ ಚೀನಾ ನಂತರದ ಸ್ಥಾನ ಪಡೆದಿದೆ. ಅತಿಹೆಚ್ಚು ಮೊಬೈಲ್ ಫೋನ್ ತಯಾರಿಸುವ ದೇಶಗಳಲ್ಲಿ ಭಾರತದ್ದು ಎರಡನೇ ಸ್ಥಾನ. ಆ್ಯಪಲ್ ಕಂಪನಿಯ ಶೇ. 20ರಷ್ಟು ಐಫೋನ್ಗಳು ಭಾರತದಲ್ಲೇ ತಯಾರಾಗುತ್ತಿವೆ. ಫೋನ್ಗೆ ಬೇಕಾದ ಹೆಚ್ಚಿನ ಬಿಡಿಭಾಗಗಳೆಲ್ಲವೂ ಭಾರತದಲ್ಲೇ ಲಭ್ಯವಾಗುವಂತೆ ಪ್ರಬಲ ಇಕೋಸಿಸ್ಟಂ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್ನಂತಹ ಮೊಬೈಲ್ ಫೋನ್ ಕಂಪನಿ ಭಾರತದಲ್ಲಿ ಶುರುವಾಗುತ್ತಾ, ಅಥವಾ ವಿದೇಶೀ ಕಂಪನಿಗಳಿಗೆ ಫೋನ್ ತಯಾರಿಸಿಕೊಡುವ ಕೆಲಸಗಳಿಗೆ ಮಾತ್ರ ಭಾರತ ಸೀಮಿತವಾಗಿರುತ್ತಾ? ಈ ಪ್ರಶ್ನೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಉತ್ತರಿಸಿದ್ದಾರೆ.
ಸ್ವಿಟ್ಜರ್ಲ್ಯಾಂಡ್ನ ಡಾವೊಸ್ ಸಮಿಟ್ನಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಅಶ್ವಿನಿ ವೈಷ್ಣವ್ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನೊಂದು ವರ್ಷದಲ್ಲಿ ಭಾರತೀಯ ಬ್ರ್ಯಾಂಡ್ ಅನ್ನು ನೀವು ನೋಡಬಹುದು ಎಂದು ಎಲೆಕ್ಟ್ರಾನಿಕ್ಸ್ ಸಚಿವರೂ ಆದ ಅವರು ಹೇಳಿದ್ದಾರೆ
ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ
ಮೊಬೈಲ್ ಫೋನ್ ತಯಾರಿಕೆಗೆ ಬೇಕಾದ ಹೋಮ್ವರ್ಕ್ ಮುಗಿಸಿದ್ದೇವೆ. ನಮ್ಮ ದೇಶದಲ್ಲಿ ಉತ್ತಮವಾದ ಎಲೆಕ್ಟ್ರಾನಿಕ್ಸ್ ಇಕೋಸಿಸ್ಟಂ ಅನ್ನು ಹೊಂದಿದ್ದೇವೆ. ನಮ್ಮದೇ ಭಾರತೀಯ ಬ್ರ್ಯಾಂಡ್ ಮತ್ತು ಸಾಧನಗಳನ್ನು ಹೊಂದುವ ಸಮಯ ಬಂದಿದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
‘ಮೊಬೈಲ್ ಫೋನ್ಗೆ ಬೇಕಾಗಿರುವ ಸಾವಿರಾರು ಸರಕುಗಳನ್ನು ತಯಾರಿಸುವಂತಹ ಇಡೀ ಇಕೋಸಿಸ್ಟಂ ಜೊತೆ ಇವತ್ತು ಮತ್ತು ನಿನ್ನೆ ಮಾತುಕತೆಗಳನ್ನು ನಡೆಸಿದ್ದೇವೆ. ಈ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಆಶಾದಾಯಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಬ್ರ್ಯಾಂಡ್ ಯಾವಾಗ ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ವೈಷ್ಣವ್, ‘ಬಹಳ ಶೀಘ್ರದಲ್ಲೇ, ಇನ್ನೊಂದು ವರ್ಷ ಅಥವಾ 18 ತಿಂಗಳೊಳಗೆ ನಮ್ಮದೇ ಭಾರತೀಯ ಬ್ರ್ಯಾಂಡ್ ಹೊಂದಿರುತ್ತೇವೆ’ ಎಂದು ಹೇಳಿದ್ದಾರೆ.
ಅಶ್ವಿನಿ ವೈಷ್ಣವ್ ಅವರು ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಭಾರತದ ಎಐ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಸರ್ಕಾರ ತಂದಿರುವ ಸುಧಾರಣಾ ಕ್ರಮಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ