
ನವದೆಹಲಿ, ಅಕ್ಟೋಬರ್ 17: ಇವತ್ತಿನ ಯುದ್ಧಗಳಲ್ಲಿ ಯುದ್ಧವಿಮಾನಗಳ ಪಾತ್ರ ಬಹಳ ಮಹತ್ತರವಾದುದು. ಗಾಳಿಯಲ್ಲಿ ಸಾಮರ್ಥ್ಯ ಇರುವವರು ಯುದ್ಧ ಗೆದ್ದಂತೆ. ಅಂತೆಯೇ ಒಂದು ಸೇನೆಯಲ್ಲಿ ಅದರ ವಾಯುಶಕ್ತಿ ಅತಿ ಮುಖ್ಯ. ವಿಶ್ವದ ಅತೀ ಬಲಿಷ್ಠ ಮಿಲಿಟರಿ ಶಕ್ತಿ ಎಂದರೆ ಅಮೆರಿಕ ಹೆಸರು ಮೊದಲಿಗೆ ಬರುತ್ತದೆ. ಅತಿ ಬಲಿಷ್ಠ ವಾಯುಶಕ್ತಿಯಲ್ಲೂ ಅಮೆರಿಕವೇ ನಂಬರ್ ಒನ್. ಆದರೆ, ಅಚ್ಚರಿ ಅಂಶ ಇರುವುದು ಚೀನಾ ಮತ್ತು ಭಾರತದ್ದು. ವಿಶ್ವದ ಬಲಿಷ್ಠ ವಾಯುಶಕ್ತಿಯಲ್ಲಿ ಚೀನಾವನ್ನು ಭಾರತ (Indian Army) ಹಿಂದಿಕ್ಕಿದೆಯಂತೆ. ಡಬ್ಲ್ಯುಡಿಎಂಎಂಎ ವಿಶ್ವ ಶ್ರೇಯಾಂಕದ ಪ್ರಕಾರ ಅತಿ ಬಲಿಷ್ಠ ವಾಯುಶಕ್ತಿಯಲ್ಲಿ ಅಮೆರಿಕ ಮತ್ತು ರಷ್ಯಾ ಮೊದಲೆರಡು ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನ ಮತ್ತು ಚೀನಾ ನಾಲ್ಕನೇ ಸ್ಥಾನ ಪಡೆದಿದೆ.
ನಿರೀಕ್ಷೆಯಂತೆ, ರಷ್ಯಾ, ಚೀನಾ, ಭಾರತ, ಸೌತ್ ಕೊರಿಯಾ ಮತ್ತು ಜಪಾನ್ ದೇಶಗಳೆಲ್ಲದರ ವಾಯುಶಕ್ತಿಯನ್ನು ಒಟ್ಟಿಗೆ ಸೇರಿಸಿದರೂ ಅಮೆರಿಕಕ್ಕೆ ಸಮ ಬರಲಾಗದು ಎಂದು ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್ಕ್ರಾಫ್ಟ್ನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಅದಕ್ಕೆ ಕಾರಣ, ಮಿಲಿಟರಿ ಶಕ್ತಿ ಅಭಿವೃದ್ಧಿಗಾಗಿ ಅಮೆರಿಕ ಹೇರಳ ಬಂಡವಾಳ ಹಾಕುತ್ತದೆ. ವಿಶ್ವಾದ್ಯಂತ ವಿವಿಧ ದೇಶಗಳು ತಮ್ಮ ಮಿಲಿಟರಿಗಳಿಗಾಗಿ ಮಾಡುವ ವೆಚ್ಚದಲ್ಲಿ ಶೇ. 40ರಷ್ಟು ಪಾಲು ಅಮೆರಿಕದ್ದಾಗಿದೆ. ಹೀಗಾಗಿ, ಅದರ ಏರ್ ಫೋರ್ಸ್ ಬಹಳ ಶಕ್ತಿಶಾಲಿಯಾಗಿದೆ.
ಇದನ್ನೂ ಓದಿ: ಬ್ರಿಟನ್ನ ಮಾರ್ಟ್ಲೆಟ್ ಮಿಸೈಲ್ ಪಡೆಯಲಿದೆ ಭಾರತ; 350 ಮಿಲಿಯನ್ ಪೌಂಡ್ ಮೊತ್ತಕ್ಕೆ ಡೀಲ್
ಡಬ್ಲ್ಯುಎಂಎಂಎ ವಿಶ್ವದ 103 ದೇಶಗಳನ್ನು ತನ್ನ ಅಧ್ಯಯನದಲ್ಲಿ ಗಮನಿಸಿದೆ. ಒಟ್ಟು 48,082 ಯುದ್ಧವಿಮಾನಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದರಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಲ್ಲಿರುವ ಯುದ್ಧವಿಮಾನಗಳೂ ಒಳಗೊಂಡಿವೆ. TruVal ರೇಟಿಂಗ್ (ಟಿವಿಆರ್) ಸಿಸ್ಟಂ ಮೂಲಕ ಈ ವಾಯುಶಕ್ತಿಗಳನ್ನು ಅಳೆಯುವ ಕೆಲಸ ಮಾಡಿದೆ.
ಈ ಟಿವಿಆರ್ ರೇಟಿಂಗ್ ಪ್ರಕಾರ ಚೀನಾದ ಏರ್ ಫೋರ್ಸ್ 63.8 ಅಂಕ ಪಡೆದರೆ, ಭಾರತದ ವಾಯುಪಡೆಯ ಶಕ್ತಿ 69.4 ಅಂಕ ಪಡೆದಿದೆ. ಚೀನಾ ಬಳಿ ಹತ್ತಿರ ಹತ್ತಿರ 4,000 ಯುನಿಟ್ಗಳಷ್ಟು ಯುದ್ಧವಿಮಾನಗಳಿವೆ. ಭಾರತದ ಬಳಿ ಅದರ ಅರ್ಧದಷ್ಟು ಇರಬಹುದು. ಆದರೂ ಕೂಡ ಚೀನಾಗಿಂತ ಭಾರತ ಹೇಗೆ ಮೇಲಿರಲು ಸಾಧ್ಯ?
ಇದನ್ನೂ ಓದಿ: ಹದ್ದು ಮೀರಬೇಡಿ ಎಂದು ಜಡ್ಜ್ಗೆ ವಕೀಲನ ಎಚ್ಚರಿಕೆ; ಹೈಕೋರ್ಟ್ನಲ್ಲಿ ಅಡ್ವೋಕೇಟ್ ವಿರುದ್ಧ ಪ್ರಕರಣ
ಚೀನಾ ಬಳಿ ಹೆಚ್ಚು ಯುನಿಟ್ಗಳಿದ್ದರೂ ಭಾರತದ ಬಳಿ ಸಮತೋಲಿತ ಶಕ್ತಿ ಇದೆ. ಯುದ್ಧಕ್ಕೆ ಸನ್ನದ್ಧವಿರುವ ಸ್ಥಿತಿಯಲ್ಲಿ ಚೀನಾಗಿಂತ ಭಾರತ ಉತ್ತಮವಾಗಿದೆ. ಭಾರತದ ಬಳಿ ಇರುವ ಯುದ್ಧವಿಮಾನಗಳಲ್ಲಿ ಶೇ. 31.6ರಷ್ಟು ಫೈಟರ್ ಜೆಟ್ಗಳಿವೆ, ಶೇ. 29ರಷ್ಟು ಹೆಲಿಕಾಪ್ಟರ್ಗಳಿವೆ. ಶೇ. 21.8ರಷ್ಟು ಟ್ರೈನರ್ ವಿಮಾನಗಳಿವೆ.
ಭಾರತದ ಒಟ್ಟಾರೆ ವಾಯು ಶಕ್ತಿಯ ಟಿವಿಆರ್ 140.6 ಇದ್ದರೆ, ಚೀನಾದ್ದು 144 ಇದೆ. ಆದರೆ, ಟ್ರೈನಿಂಗ್, ಕ್ಲೋಸ್ ಏರ್ ಸಪೋರ್ಟ್, ವಿಶೇಷ ಬಾಂಬರ್ ಯುನಿಟ್ಗಳಲ್ಲಿ ಭಾರತ ಹೆಚ್ಚು ಪಕ್ವವಾಗಿದೆ. ಯುದ್ಧ ಸನ್ನದ್ಧ ಸ್ಥಿತಿಯಲ್ಲೂ ಭಾರತ ಉತ್ತಮವಾಗಿದೆ. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದಲ್ಲಿ ಭಾರತದ ವಾಯುಶಕ್ತಿ ಅದೆಷ್ಟು ಪಕ್ವವಾಗಿದೆ ಎಂಬುದು ಜಗಜ್ಜಾಹೀರಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ