India@ 2075- ಅಮೆರಿಕವನ್ನು ಆರ್ಥಿಕವಾಗಿ ಭಾರತ ಯಾವಾಗ ಹಿಂದಿಕ್ಕಬಹುದು?: ಜಿಯೋಪೊಲಿಟಿಕಲ್ ತಜ್ಞೆ ವೆಲಿನಾ ಅಂದಾಜು
Velina Tchakarova Tweets: ಭಾರತ 2075ರಷ್ಟರಲ್ಲಿ ವಿಶ್ವದ ಎರಡನೆ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಜಿಯೋಪೊಲಿಟಿಕಲ್ ತಜ್ಞೆ ವೆಲಿನಾ ಶಕರೋವಾ ಅಂದಾಜಿಸಿದ್ದಾರೆ. ಗೋಲ್ಡ್ಮ್ಯಾನ್ ಸ್ಯಾಕ್ಸ್ ಸಂಸ್ಥೆಯ ರಿಸರ್ಚ್ ಅಂಶಗಳನ್ನು ಉಲ್ಲೇಖಿಸಿ ಶಕರೋವಾ ಟ್ವೀಟ್ ಮಾಡಿದ್ದಾರೆ. 2075ರಲ್ಲಿ ಚೀನಾ, ಭಾರತ ಮತ್ತು ಅಮೆರಿಕ ಟಾಪ್-3 ಆರ್ಥಿಕತೆಯ ದೇಶಗಳಾಗಿರಲಿವೆ.
ಬೆಂಗಳೂರು, ಡಿಸೆಂಬರ್ 29: ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿರುವ ಭಾರತ ಇನ್ನು 50 ವರ್ಷದಲ್ಲಿ ಎರಡನೇ ಸ್ಥಾನಕ್ಕೆ ಏರಬಹುದು. 2075ರಷ್ಟರಲ್ಲಿ ಭಾರತದ ಆರ್ಥಿಕತೆ (Indian economy) ಅಮೆರಿಕದ್ದನ್ನು ಮೀರಿಸಿ ಬೆಳೆಯಬಹುದು ಎಂದು ಜಾಗತಿಕ ರಾಜಕೀಯ ತಜ್ಞೆ ವೆಲಿನಾ ಶಕರೋವಾ (Geopolitical strategist Velina Tchakarova) ಹೇಳಿದ್ದಾರೆ. ಗೋಲ್ಡ್ಮ್ಯಾನ್ ಸ್ಯಾಕ್ಸ್ ಸಂಸ್ಥೆಯ ರಿಸರ್ಚ್ ಅಂಶಗಳನ್ನು (goldman sachs research) ಉಲ್ಲೇಖಿಸಿ ಗ್ರಾಫ್ ಮೂಲಕ ಡಾಟಾ ಪ್ರಸ್ತುಪಡಿಸಿ ಅವರು ಟ್ವೀಟ್ ಮಾಡಿದ್ದಾರೆ. ಈ ದತ್ತಾಂಶದ ಪ್ರಕಾರ 2075ರಲ್ಲಿ ಚೀನಾ ವಿಶ್ವದ ನಂಬರ್ ಆರ್ಥಿಕ ದೇಶವಾಗಿರಲಿದೆ. ಭಾರತ ಮತ್ತು ಅಮೆರಿಕ ಟಾಪ್ 3 ದೇಶಗಳ ಪೈಕಿ ಇರಲಿವೆ. ಈ ಮೂರು ದೇಶಗಳ ಜಿಡಿಪಿ 50-60 ಟ್ರಿಲಿಯನ್ ಡಾಲರ್ನಷ್ಟು ಇರಲಿದೆ ಎನ್ನಲಾಗಿದೆ.
ವೆಲಿನಾ ಶಕರೋವಾ ಪ್ರಸ್ತುತಪಡಿಸಿರುವ ಗ್ರಾಪ್ ಪ್ರಕಾರ 2035ರ ಆಸುಪಾಸಿನ ವರ್ಷದಲ್ಲಿ ಚೀನಾದ ಆರ್ಥಿಕತೆ ಅಮೆರಿಕವನ್ನು ದಾಟಿ ಮುನ್ನುಗ್ಗಬಹುದು. ಅಮೆರಿಕದ ಪ್ರಗತಿಯ ವೇಗ ಬಹುತೇಕ ಸ್ಥಿರವಾಗಿದೆ. ಐರೋಪ್ಯದ ಆರ್ಥಿಕತೆಯ ವೇಗ ಕೂಡ ಸ್ಥಿರವಾಗಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಜಪಾನ್ ಬೆಳವಣಿಗೆ ಹೊಂದುವುದು ಬಹಳ ಕಡಿಮೆ. ಸದ್ಯ ಸುಮಾರು 5 ಟ್ರಿಲಿಯನ್ ಡಾಲರ್ ಇರುವ ಜಿಡಿಪಿ 2075ರಲ್ಲಿ 7.5 ಟ್ರಿಲಿಯನ್ ಡಾಲರ್ಗೆ ಮಾತ್ರವೇ ಏರಿಕೆ ಆಗುವುದು.
ಇದನ್ನೂ ಓದಿ: Reliance Focus: ಯುವಕರು, ಡಾಟಾ, ಎಐ: ರಿಲಾಯನ್ಸ್ನ ಭವಿಷ್ಯದ ಆದ್ಯತೆಗಳ ಸುಳಿವು ಬಿಚ್ಚಿಟ್ಟ ಮುಕೇಶ್ ಅಂಬಾನಿ
ಜನಸಂಖ್ಯಾ ಹಿನ್ನಡೆಯಲ್ಲೂ ಚೀನಾ ಪ್ರಗತಿ
ಚೀನಾದಲ್ಲಿ ಏಕ ಸಂತಾನ ನೀತಿ ಜಾರಿಯಲ್ಲಿದ್ದ ಪರಿಣಾಮ ಅಲ್ಲಿ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅತಿಹೆಚ್ಚು ಜನಸಂಖ್ಯೆಯ ದಾಖಲೆಯನ್ನು ಭಾರತಕ್ಕೆ ಬಿಟ್ಟುಕೊಟ್ಟಿದೆ. ಇವತ್ತಿನ ಅಗಾಧ ಆರ್ಥಿಕ ಬೆಳವಣಿಗೆಯ ಪಾಲು ಹೊಂದಬೇಕಾದರೆ ಮಾನವ ಸಂಪನ್ಮೂಲ ಅಗತ್ಯ. ಚೀನಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯಿಂದಾಗಿ ಆರ್ಥಿಕ ಬೆಳವಣಿಗೆಯ ಫಲ ಪಡೆಯಲು ಮಾನವ ಸಂಪನ್ಮೂಲದ ಕೊರತೆ ಎದುರಾಗಲಿದೆ. ಆಗಿದ್ದಾಗ್ಯೂ ಚೀನಾದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಸಂಚಕಾರ ಬರುವ ಸಾಧ್ಯತೆ ಇಲ್ಲ ಎನ್ನುತ್ತದೆ ಗೋಲ್ಡ್ಮ್ಯಾನ್ನ ಅಂದಾಜು ನಕ್ಷೆ.
India is forecast to have the world’s second-largest economy by 2075. China is forecast to be world’s leading economy by 2075 despite the disastrous demographic outlook. #Velsig #outlook pic.twitter.com/ynENHJxPhW
— Velina Tchakarova (@vtchakarova) December 28, 2023
ಸದ್ಯ 17 ಟ್ರಿಲಿಯನ್ ಡಾಲರ್ನಷ್ಟಿರುವ ಚೀನಾದ ಆರ್ಥಿಕತೆ 2075ರಲ್ಲಿ 57 ಟ್ರಿಲಿಯನ್ ಡಾಲರ್ಗೆ ಏರಬಹುದು. 26 ಟ್ರಿಲಿಯನ್ ಡಾಲರ್ ಇರುವ ಅಮೆರಿಕದ ಜಿಡಿಪಿ ಇನ್ನು 50 ವರ್ಷದಲ್ಲಿ 52 ಟ್ರಿಲಿಯನ್ ಡಾಲರ್ಗೆ ಏರಬಹುದು. 3.5 ಟ್ರಿಲಿಯನ್ ಡಾಲರ್ ಇರುವ ಭಾರತದ ಆರ್ಥಿಕತೆ 51 ಟ್ರಿಲಿಯನ್ ಡಾಲರ್ನಷ್ಟಾಗಬಹುದು ಎಂದು ವೆಲಿನಾ ಶಕರೋವಾ ಅವರ ಗ್ರಾಫ್ ತಿಳಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ