
ನವದೆಹಲಿ, ಜೂನ್ 2: ನಾಲ್ಕು ಟ್ರಿಲಿಯನ್ ಡಾಲರ್ ಇರುವ ಭಾರತದ ಆರ್ಥಿಕತೆ (Indian economy) ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ಸದ್ಯ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಆರ್ಥಿಕ ತಜ್ಞ ಹಾಗೂ ಜಿ20 ಶೆರ್ಪಾ ಅಮಿತಾಭ್ ಕಾಂತ್ ಪ್ರಕಾರ ಅಮೆರಿಕದ ಈಗಿನ ಜಿಡಿಪಿ ಮಟ್ಟವನ್ನು ಭಾರತ ಇನ್ನೆರಡೂವರೆ ದಶಕದಲ್ಲಿ ಮುಟ್ಟಬಹುದು. 4 ಟ್ರಿಲಿಯನ್ ಡಾಲರ್ ಇರುವ ಭಾರತದ ಆರ್ಥಿಕತೆಯು 2047ರೊಳಗೆ 30 ಟ್ರಿಲಿಯನ್ ಡಾಲರ್ ಸಮೀಪಕ್ಕೆ ಹೋಗಬಹುದು ಎಂದು ಅಮಿತಾಭ್ ಕಾಂತ್ ಹೇಳುತ್ತಾರೆ.
ಅಮೆರಿಕದ ಜಿಡಿಪಿ ಈಗ 30 ಟ್ರಿಲಿಯನ್ ಡಾಲರ್ ಇದೆ. ಚೀನಾದ ಆರ್ಥಿಕತೆ 19 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿದೆ. ಜರ್ಮನಿ, ಜಪಾನ್ ಮತ್ತು ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಿದೆ. ಅತಿದೊಡ್ಡ ಆರ್ಥಿಕತೆಯಲ್ಲಿ ಭಾರತವು ಜರ್ಮನಿಗಿಂತ ಒಂದು ಸ್ಥಾನ ಕೆಳಗಿದೆ.
ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಷಿಯೇಶನ್ನ ಸಭೆಯಲ್ಲಿ ಮಾತನಾಡುತ್ತಿದ್ದ ಅಮಿತಾಭ್ ಕಾಂತ್, ಭಾರತಕ್ಕೆ ಅದರ ಯುವಜನರ ಸಂಖ್ಯಾ ಬಲ ಇರುವುದನ್ನು ಎತ್ತಿತೋರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಬಳಿ ಇದೆ ಭಾರತದ 20 ಲಕ್ಷ ಕೋಟಿ ರೂ ಹಣ; ಸಾಲ ತೀರಿಸದೇ ಇದ್ದರೆ ಏನಾಗುತ್ತೆ?
‘ಭಾರತಕ್ಕೆ ಜನಸಂಖ್ಯಾ ಬಲ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನರಿಗೆ ವಯಸ್ಸಾಗುತ್ತಿದೆ. ಜಪಾನ್ಗೆ ಈಗಾಗಲೇ ವಯಸ್ಸಾಗಿ ಹೋಗಿದೆ. ಚೀನಾ ಕೂಡ ಹೆಚ್ಚು ವಯಸ್ಸಾಗುತ್ತಾ ಬಂದಿದೆ. ಭಾರತೀಯರ ಸರಾಸರಿ ವಯಸ್ಸು ಈಗ 28 ವರ್ಷ ಇದೆ. 1947ರಲ್ಲೂ ಸರಾಸರಿ ವಯಸ್ಸು 35 ವರ್ಷ ಇರಲಿದೆ. ಇದು ಬೇಬಿ ಬೂಮರ್ಗಳ ದೇಶ’ ಎಂದು ಅಮಿತಾಭ್ ಕಾಂತ್ ಬಣ್ಣಿಸಿದ್ದಾರೆ.
ಭಾರತದಲ್ಲಿ ನಗರೀಕರಣ ಪ್ರಕ್ರಿಯೆಗೆ ಪೂರಕವಾಗಿ 500 ಹೊಸ ನಗರಗಳ ಸ್ಥಾಪನೆಯ ಅವಶ್ಯಕತೆ ಇದೆ. ಮುಂದಿನ ಐದು ದಶಕದಲ್ಲಿ ನಾವು ಎರಡು ಅಮೆರಿಕವನ್ನು ಸೃಷ್ಟಿಸಬೇಕಿದೆ. ಪ್ರತೀ ಐದು ವರ್ಷಕ್ಕೆ ಒಂದು ಚಿಕಾಗೋ ನಗರ ಸ್ಥಾಪಿಸಬೇಕಿದೆ. ಇದು ಭಾರತಕ್ಕೆ ಇರುವ ಸವಾಲು ಎಂದು ಮಾಜಿ ನೀತಿ ಆಯೋಗ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್ನ ಎಂಬ್ರೇರ್ ಮಾತುಕತೆ
ಭಾರತದಲ್ಲಿ ಕಾರ್ಯನಿರ್ವಹಣೆ ಆಗುತ್ತಿರುವ 150ಕ್ಕೂ ಹೆಚ್ಚು ಏರ್ಪೋರ್ಟ್ಗಳಿವೆ. 400 ಏರ್ಪೋರ್ಟ್ಗಳ ನಿರ್ಮಾಣ ಆಗಬೇಕು. ನಿಮಗೆ ಒಳ್ಳೆಯ ವಿಮಾನ ನಿಲ್ದಾಣಗಳು, ಉತ್ತಮ ಏರ್ಲೈನ್ಗಳು ಅವಶ್ಯಕ ಉಂಟು ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ