ಅಮೆರಿಕದ ಬಳಿ ಇದೆ ಭಾರತದ 20 ಲಕ್ಷ ಕೋಟಿ ರೂ ಹಣ; ಸಾಲ ತೀರಿಸದೇ ಇದ್ದರೆ ಏನಾಗುತ್ತೆ?
US vows huge debt with India: ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕವು ಅತಿಹೆಚ್ಚು ಸಾಲ ಹೊಂದಿರುವ ದೇಶವೂ ಹೌದು. ಜಪಾನ್ ಮತ್ತು ಚೀನಾ ದೇಶಗಳು ಅಮೆರಿಕದ ಟ್ರೆಷರಿ ಬಾಂಡ್ಗಳ ಮೇಲೆ ಅತಿಹೆಚ್ಚು ಹೂಡಿಕೆ ಮಾಡಿವೆ. ಈ ಸಾಲಿನಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಭಾರತಕ್ಕೆ ಅಮೆರಿಕ ಬರೋಬ್ಬರಿ 241 ಬಿಲಿಯನ್ ಡಾಲರ್ನಷ್ಟು ಋಣದ ಭಾರ ಹೊಂದಿದೆ.

ನವದೆಹಲಿ, ಜೂನ್ 2: ವಿಶ್ವದಲ್ಲಿ ಅತಿಹೆಚ್ಚು ಸಾಲ ಹೊಂದಿರುವ ದೇಶವೆಂದರೆ ಅದು ಅಮೆರಿಕ. ಈ ವಿಶ್ವದ ದೊಡ್ಡಣ್ಣನಿಗೆ ಅತಿಹೆಚ್ಚು ಸಾಲ ಕೊಟ್ಟಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಅಂದರೆ, ಇದು ನೇರವಾಗಿ ನೀಡಿರುವ ಸಾಲಗಳಲ್ಲ. ಅಮೆರಿಕದ ಟ್ರೆಷರಿ ಬಾಂಡ್ಗಳ ಮೇಲೆ ಭಾರತ ಕಾಲಾನುಕ್ರಮದಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಈ ರೀತಿ ಬಾಂಡ್ಗಳ ಮೇಲೆ ಮಾಡಿರುವ ಹೂಡಿಕೆ ಈಗ 241 ಬಿಲಿಯನ್ ಡಾಲರ್ಷ್ಟಾಗಿದೆ. ಅಂದರೆ 20 ಲಕ್ಷ ಕೋಟಿ ರೂಗಿಂತಲೂ ತುಸು ಹೆಚ್ಚು. ಪಾಕಿಸ್ತಾನದ ಮುಕ್ತಾಲು ಭಾಗದ ಜಿಡಿಪಿಯಷ್ಟು ಹಣವಾಗುತ್ತದೆ ಅದು.
ಅಮೆರಿಕದ ಒಟ್ಟು ಸಾಲು ಬರೋಬ್ಬರಿ 36 ಟ್ರಿಲಿಯನ್ ಡಾಲರ್ ಇದೆ. ಅದರ ಜಿಡಿಪಿಗಿಂತಲೂ ಹೆಚ್ಚು ಪ್ರಮಾಣದ ಸಾಲ. ಸಾರ್ವಜನಿಕ ಸಾಲವೇ 29 ಟ್ರಿಲಿಯನ್ ಡಾಲರ್ನಷ್ಟಿದೆ. ಈ ಟ್ರೆಷರಿ ಬಾಂಡ್ಗಳು ಇತ್ಯಾದಿಗಳು ಸೇರುತ್ತವೆ.
ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್ನ ಎಂಬ್ರೇರ್ ಮಾತುಕತೆ
ಜಗತ್ತಿನ ಹಲವು ದೇಶಗಳು ಅಮೆರಿಕದ ಟ್ರೆಷರಿ ಬಾಂಡ್, ಟ್ರೆಷರಿ ಬಿಲ್, ಸೆಕ್ಯೂರಿಟೀಸ್ಗಳನ್ನು ಖರೀದಿಸುತ್ತವೆ. ಇವುಗಳು ಸಾಲ ಪಡೆಯಲು ಇರುವ ಪ್ರಮುಖ ಹಣಕಾಸು ಯಂತ್ರಗಳಾಗಿವೆ. ವಿಶ್ವದ ಆರ್ಥಿಕ ಚಟುವಟಿಕೆಯ ತಳಹದಿಯು ಡಾಲರ್ ಮೇಲೆ ನಿಂತಿದೆ. ಅಮೆರಿಕದ ಆರ್ಥಿಕತೆಯೇ ವಿಶ್ವದ ಆರ್ಥಿಕತೆಗೆ ಆಧಾರವಾಗಿದೆ. ಹೀಗಾಗಿ, ಅಮೆರಿಕದ ಟ್ರೆಷರಿ ಬಾಂಡ್ಗಳು ಸುರಕ್ಷಿತ ಎನಿಸಿವೆ. ಈ ಕಾರಣಕ್ಕೆ ವಿವಿಧ ದೇಶಗಳು ಅಮೆರಿಕದ ಸರ್ಕಾರಿ ಬಾಂಡ್ಗಳ ಮೇಲೆ ಹೂಡಿಕೆ ಮಾಡಲು ಯಾವ ಮೀನ ಮೇಷ ಎಣಿಸುವುದಿಲ್ಲ. ಅಮೆರಿಕಕ್ಕೆ ಸಾಲ ಬೇಕು, ಜಗತ್ತಿಗೆ ಅಮೆರಿಕದ ಆರ್ಥಿಕತೆ ಬೇಕು. ಈ ಒಂದು ಕೊಡುಕೊಳ್ಳುವಿಕೆಯಲ್ಲಿ ವ್ಯವಹಾರ ಸಮತೋಲನ ಸಾಧಿಸಿಕೊಂಡು ಹೋಗುತ್ತಿದೆ.
ಅಮೆರಿಕಕ್ಕೆ ಅತಿಹೆಚ್ಚು ಸಾಲ ಕೊಟ್ಟವರಲ್ಲಿ ಜಪಾನ್ ಮೊದಲು
ಅಮೆರಿಕದ ಟ್ರೆಷರಿ ಸೆಕ್ಯೂರಿಟಿಗಳಲ್ಲಿ ಅತಿಹೆಚ್ಚು ಹೂಡಿಕೆ ಮಾಡಿರುವ ವಿದೇಶಗಳಲ್ಲಿ ಜಪಾನ್ ಮೊದಲು ಬರುತ್ತದೆ. ಇದು 1.11 ಟ್ರಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಿದೆ. ಚೀನಾ, ಬ್ರಿಟನ್, ಲಕ್ಸುಂಬರ್ಗ್ ಮತ್ತು ಕೆನಡಾ ದೇಶಗಳು ಟಾಪ್-5 ಪಟ್ಟಿಗೆ ಬರುತ್ತವೆ. ಭಾರತವು ಈ ಸಾಲಿನಲ್ಲಿ 12ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ
ಅಮೆರಿಕ ಸಾಲ ಮರುಪಾವತಿಸಲಿಲ್ಲವೆಂದರೆ…?
ಒಂದು ಸರ್ಕಾರವು ತಾನು ನೀಡಿದ ಸಾಲಪತ್ರಕ್ಕೆ ಹೂಡಿಕೆದಾರರಿಗೆ ಹಣ ಮರಳಿಸಲಿಲ್ಲವೆಂದರೆ ಅದು ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ. ಒಂದು ದೇಶದ ವಿಶ್ವಾಸಾರ್ಹತೆ ಕುಂದುತ್ತದೆ. ರೇಟಿಂಗ್ ಏಜೆನ್ಸಿಗಳು ದೇಶದ ಗ್ರೇಡಿಂಗ್ ಕಡಿಮೆ ಮಾಡುತ್ತವೆ. ವಿದೇಶೀ ಹೂಡಿಕೆಗಳು ಕಡಿಮೆ ಆಗಬಹುದು. ಅಮೆರಿಕದ ವಿಚಾರದಲ್ಲಿ ಇನ್ನೂ ಹೆಚ್ಚು ಸ್ವರೂಪದ ಪರಿಣಾಮಗಳಾಗುತ್ತವೆ. ಜಗತ್ತಿನ ಆರ್ಥಿಕತೆಯ ಮೇಲೆ ಅಮೆರಿಕದ ಪ್ರಭಾವ ಇರುವುದರಿಂದ ಜಾಗತಿಕ ಅರ್ಥ ವ್ಯವಸ್ಥೆಯೇ ಅಲುಗಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ