ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ
Income Tax department crackdown on bogus tax claims: ಇನ್ಕಮ್ ಟ್ಯಾಕ್ಸ್ ವ್ಯವಸ್ಥೆಯಲ್ಲಿ ತೆರಿಗೆ ಪಾವತಿದಾರರಿಗೆ ನೀಡಲಾಗಿರುವ ವಿವಿಧ ಟ್ಯಾಕ್ಸ್ ಬೆನಿಫಿಟ್ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಪ್ರಕರಣಗಳನ್ನು ಗುರುತಿಸಲು ಆದಾಯ ತೆರಿಗೆ ಇಲಾಖೆ ದೇಶಾದ್ಯಂತ ಪರಿಶೀಲನಾ ಕಾರ್ಯಾಚರಣೆ ನಡೆಸಿದೆ. ಅತ್ಯಾಧುನಿಕ ಎಐ ಟೆಕ್ನಾಲಜಿ, ಗ್ರೌಂಡ್ ಲೆವೆಲ್ ಇಂಟೆಲಿಜೆನ್ಸ್ ಇತ್ಯಾದಿ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಬಳಸಿ ಬಲೆ ಬೀಸಿದೆ.

ನವದೆಹಲಿ, ಜುಲೈ 15: ಆದಾಯ ತೆರಿಗೆಯಲ್ಲಿ (Income Tax) ಲಭ್ಯ ಇರುವ ವಿವಿಧ ಡಿಡಕ್ಷನ್, ಎಕ್ಸೆಂಪ್ಷನ್ ಇತ್ಯಾದಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸಲಾಗುತ್ತಿರುವ ಪ್ರಕರಣಗಳನ್ನು ಐಟಿ ಇಲಾಖೆ ಜಾಲಾಡುತ್ತಿದೆ. ವೃತ್ತಿಪರ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಟ್ಯಾಕ್ಸ್ ಬೆನಿಫಿಟ್ಗಳ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ದೊಡ್ಡ ಮಟ್ಟದಲ್ಲಿ ಪರಿಶೀಲನಾ ಕಾರ್ಯಾಚರಣೆ ಆರಂಭಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ಮಾಡಿದೆ.
ಹೊಸ ಎಐ ಟೂಲ್ಗಳು, ತಳಮಟ್ಟದ ಗುಪ್ತಚರ ವ್ಯವಸ್ಥೆ, ಥರ್ಡ್ ಪಾರ್ಟಿ ಮೂಲಗಳು ಹೀಗೆ ವಿವಿಧೆಡೆಯಿಂದ ಪಡೆಯಲಾದ ಹಣಕಾಸು ಮಾಹಿತಿಯನ್ನು ಆಧರಿಸಿ ಐಟಿ ಇಲಾಖೆ ತನ್ನ ಕೆಂಪೇನ್ ನಡೆಸಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಇತ್ತೀಚೆಗೆ ನಡೆಸಲಾದ ರೇಡ್ಗಳಲ್ಲಿ ಐಟಿ ಇಲಾಖೆಗೆ ಈ ಸಂಬಂಧ ಕೆಲ ಪ್ರಮುಖ ಪುರಾವೆಗಳು ಲಭಿಸಿವೆ ಎನ್ನಲಾಗಿದೆ.
ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಐಟಿ ಇಲಾಖೆ ಅಡಿಯಲ್ಲಿ ಬುರವ 10(13ಎ), 80ಜಿಜಿಸಿ, 80ಇ, 80ಡಿ, 80ಇಇ, 80ಇಇಬಿ, 80ಜಿ, 80ಡಿಡಿಬಿ ಸೆಕ್ಷನ್ಗಳಲ್ಲಿ ಸಿಗುವ ಡಿಡಕ್ಷನ್ಗಳನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತೆರಿಗೆ ಪಾವತಿದಾರರಿಗೆ ಪೂರ್ಣ ರೀಫಂಡ್ ಕೊಡಿಸುವುದಾಗಿ ಆಮಿಷವೊಡ್ಡಿ ಕಮಿಷನ್ ಪಡೆದು ಮಧ್ಯವರ್ತಿಗಳು ಈ ವಂಚನೆಯ ಕೆಲಸ ಮಾಡುತ್ತಿದ್ದಾರೆ. ಇವರುಗಳು ತಾತ್ಕಾಲಿಕ ಇಮೇಲ್ ಐಡಿಗಳನ್ನು ರಚಿಸಿ ಅವುಗಳ ಮೂಲಕ ಬಲ್ಕ್ ರಿಟರ್ನ್ಸ್ ಫೈಲ್ ಮಾಡುತ್ತಾರೆ. ಬಳಿಕ ಈ ಇಮೇಲ್ ಐಡಿಗಳನ್ನು ತ್ಯಜಿಸುತ್ತಾರೆ. ಇದರಿಂದಾಗಿ, ಐಟಿ ಇಲಾಖೆಯಿಂದ ಹೋಗುವ ನೋಟೀಸ್ಗಳು ಯಾರ ಗಮನಕ್ಕೂ ಬರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯವು ವಿವರಿಸಿದೆ.
ಆದಾಯ ತೆರಿಗೆಯ ಎಕ್ಸ್ ಪೋಸ್ಟ್
➡️The Income Tax Department has launched a large-scale crackdown on fraudulent claims of deductions and exemptions in Income Tax Returns (ITRs). Organized rackets, false filings, and misuse of beneficial provisions are under scrutiny.
➡️This large-scale verification follows… pic.twitter.com/ctozbLBDCa
— Income Tax India (@IncomeTaxIndia) July 14, 2025
ಐಟಿ ರಿಟರ್ನ್ಸ್ ಅನ್ನು ತೆರಿಗೆ ಪಾವತಿದಾರರು ಸ್ವಯಂ ಆಗಿ ಮಾಡುವ ತೆರಿಗೆ ಘೋಷಣೆ. ಆದರೂ ಕೂಡ ಇಲಾಖೆಯು ಕಳೆದ ಒಂದು ವರ್ಷದಿಂದ ತೆರಿಗೆ ಪಾವತಿದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ. ತಪ್ಪಾಗಿ ಐಟಿಆರ್ ಸಲ್ಲಿಸಿದವರನ್ನು ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿ ಮೂಲಕ ಸಂಪರ್ಕಿಸಿ ಪರಿಷ್ಕೃತ ರಿಟರ್ನ್ ಸಲ್ಲಿಸಿ, ಸರಿಯಾದ ಪ್ರಮಾಣದ ತೆರಿಗೆ ಪಾವತಿಸುವಂತೆ ತಿಳಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಜುಲೈ 31ರ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ ಕಟ್ಟಬೇಕಾಗುತ್ತದಾ? ಇಲ್ಲಿದೆ ಮಾಹಿತಿ
ಒಂದು ಅಂದಾಜು ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಈ ಅಭಿಯಾನದ ಪರಿಣಾಮವಾಗಿ ದೇಶಾದ್ಯಂತ 40,000 ತೆರಿಗೆ ಪಾವತಿದಾರರು ತಮ್ಮ ಐಟಿಆರ್ ಅನ್ನು ಅಪ್ಡೇಟ್ ಮಾಡಿದ್ದಾರೆ. 1,045 ಕೋಟಿ ರೂ ಮೊತ್ತಕ್ಕೆ ತಪ್ಪಾಗಿ ಮಾಡಿದ್ದ ಕ್ಲೇಮ್ ಅನ್ನು ವಿತ್ಡ್ರಾ ಮಾಡಿದ್ದಾರೆ. ಆದರೂ ಕೂಡ ಬಹಳಷ್ಟು ಮಂದಿ ಸ್ಪಂದಿಸಿಲ್ಲ ಎಂಬುದು ಇಲಾಖೆ ಹೇಳಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Tue, 15 July 25








