Cost Inflation Index: ಬೆಲೆ ಉಬ್ಬರ ಸೂಚಿಯಲ್ಲಿ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ
Cost Inflation Index raised from 363 to 376: ಆಸ್ತಿವಂತರಿಗೆ ಖುಷಿಯ ಸುದ್ದಿ ಬಂದಿದ್ದು, ಸಿಬಿಡಿಟಿ 2025-26ರ ವರ್ಷಕ್ಕೆ ಕಾಸ್ಟ್ ಇನ್ಫ್ಲೇಷನ್ ಇಂಡೆಕ್ಸ್ ಅನ್ನು 376ಕ್ಕೆ ಏರಿಸಿದೆ. 2024-25ರಲ್ಲಿ ಇದು 363 ಇತ್ತು. ಈ ಸಿಐಐ ಪರಿಷ್ಕರಣೆಯಿಂದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ನ ಹೊರೆ ಕಡಿಮೆ ಆಗಲಿದೆ. 2024ರ ಜುಲೈ 23ಕ್ಕೆ ಮುಂಚೆ ಮನೆ ಖರೀದಿಸಿದವರಿಗೆ ಈ ಇಂಡೆಕ್ಸೇಶನ್ ಲಾಭ ಸಿಗುತ್ತದೆ.

ನವದೆಹಲಿ, ಜುಲೈ 2: ಕೇಂದ್ರ ನೇರ ತೆರಿಗೆ ಮಂಡಳಿಯಾದ ಸಿಬಿಡಿಟಿ 2025-26ರ ವರ್ಷಕ್ಕೆ ಕಾಸ್ಟ್ ಇನ್ಫ್ಲೇಶನ್ ಇಂಡೆಕ್ಸ್ (CII- Cost Inflation Index) ದರವನ್ನು ಬದಲಾಯಿಸಿದೆ. 2024-25ರಲ್ಲಿ 363 ಇದ್ದ ಸಿಐಐ ಅನ್ನು 2025-26ರ ವರ್ಷಕ್ಕೆ 376ಕ್ಕೆ ಏರಿಸಲಾಗಿದೆ. ಇದರಿಂದ ಆಸ್ತಿ ಮಾರಾಟ ಮಾಡುವವರಿಗೆ ಎಲ್ಟಿಸಿಜಿ ತೆರಿಗೆ (LTCG tax) ಹೊರೆ ಕಡಿಮೆ ಆಗಲಿದೆ. ಈ ಪರಿಷ್ಕೃತ ಇಂಡೆಕ್ಸ್ ದರವು 2026ರ ಏಪ್ರಿಲ್ 1ರಿಂದ ಅನ್ವಯ ಆಗಲಿದೆ.
ಕಾಸ್ಟ್ ಇನ್ಫ್ಲೇಶನ್ ಇಂಡೆಕ್ಸ್ ಪರಿಷ್ಕರಣೆಯಿಂದ ಏನು ಉಪಯೋಗ?
ಸಿಐಐ ಅನ್ನು 363ರಿಂದ 376ಕ್ಕೆ ಏರಿಸಿರುವುದು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹೊರೆ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಸಿಐಐ ಅನ್ನು ಪ್ರತೀ ವರ್ಷವೂ ಅಪ್ಡೇಟ್ ಮಾಡಲಾಗುತ್ತಿರುತ್ತದೆ. 2001-02ರಲ್ಲಿ ಸಿಐಐ 100 ಇತ್ತು. 2010-11ರಲ್ಲಿ 167ಕ್ಕೆ ಏರಿಸಲಾಯಿತು. 2020-21ರಲ್ಲಿ ಅದು 301 ಆಯಿತು. 2026-27ಕ್ಕೆ 376ಕ್ಕೆ ಏರಿದೆ.
ಉದಾಹರಣೆಗೆ, ನೀವು ಒಂದು ಮನೆ ಅಥವಾ ನಿವೇಶನವನ್ನು 2006-07ರಲ್ಲಿ 10 ಲಕ್ಷ ರೂಗೆ ಖರೀದಿಸಿರುತ್ತೀರಿ. ಆಗ ಸಿಐಐ 122 ಇತ್ತು. 2025-26ರಲ್ಲಿ ನೀವು ಅದನ್ನು 80 ಲಕ್ಷ ರೂಗೆ ಮಾರುತ್ತೀರಿ ಎಂದಿಟ್ಟುಕೊಳ್ಳಿ. ಇದಕ್ಕೆ ದೀರ್ಘಾವಧಿ ಲಾಭ ಗಳಿಕೆ ತೆರಿಗೆ ಅಥವಾ ಎಲ್ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಕೆಲ ಆಸ್ತಿಗಳಿಗೆ ಇಂಡೆಕ್ಸೇಶನ್ ಎಫೆಕ್ಟ್ ಅನ್ವಯ ಆಗುತ್ತದೆ.
ಇದನ್ನೂ ಓದಿ: GST: ಜೂನ್ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ
ಇಲ್ಲಿ ಮೇಲ್ನೋಟಕ್ಕೆ ನೀವು 70 ಲಕ್ಷ ರೂ ಲಾಭ ಮಾಡುತ್ತೀರಿ. ಇದಕ್ಕೆ ಶೇ. 20 ಎಲ್ಟಿಸಿಜಿ ಅನ್ವಯ ಆದಲ್ಲಿ 14 ಲಕ್ಷ ರೂ ಟ್ಯಾಕ್ಸ್ ಬೀಳುತ್ತದೆ. ಶೇ. 12.5 ಎಲ್ಟಿಸಿಜಿ ಎಂದು ಪರಿಗಣಿಸಿದರೂ 8.75 ಲಕ್ಷ ರೂ ಟ್ಯಾಕ್ಸ್ ಆಗುತ್ತದೆ.
ಇಲ್ಲಿ ಇಂಡೆಕ್ಸೇಶನ್ ಲಾಭ ಪಡೆಯುವುದಾದರೆ ಟ್ಯಾಕ್ಸ್ ಎಷ್ಟು ಕಡಿಮೆ ಆಗುತ್ತೆ ನೋಡಿ… ಇಂಡೆಕ್ಸೇಶನ್ ಬೆನಿಫಿಟ್ ಅನ್ನು ಲೆಕ್ಕ ಮಾಡಲು ಒಂದು ಸೂತ್ರ ಇದೆ: ಮಾರಾಟ ಮಾಡಿದ ವರ್ಷದ ಸಿಐಐ / ಖರೀದಿಸಿದ ವರ್ಷದ ಸಿಐಐ x ಖರೀದಿಸಿದ ಬೆಲೆ.
ಅಂದರೆ, 376/122×10 ಲಕ್ಷ = 30,81,967 ರೂ ಆಗುತ್ತದೆ.
ನೀವು ಆಸ್ತಿ ಮಾರಿ ಲಾಭ ಗಳಿಸಿದ್ದು 70 ಲಕ್ಷ ರೂ. ನೀವು ಖರೀದಿಸಿದ ಹಣಕ್ಕೆ ಹಣದುಬ್ಬರದ ಪರಿಣಾಮ ಸೇರಿಸಿದರೆ 30.82 ಲಕ್ಷ ರೂ ಆಗುತ್ತದೆ. ನಿಮ್ಮ ಲಾಭದಲ್ಲಿ ಇದನ್ನು ಕಳೆದರೆ, 70-30.82 = 39.18 ಲಕ್ಷ ರೂ ಆಗುತ್ತದೆ. ಇದು ನಿಮಗೆ ಸಿಗುವ ರಿಯಲ್ ಪ್ರಾಫಿಟ್. ಇದಕ್ಕೆ ಶೇ. 20ರಷ್ಟು ಎಲ್ಟಿಸಿಜಿ ಅನ್ವಯ ಆಗುತ್ತದೆ. ಅಂದರೆ ಹತ್ತಿರಹತ್ತಿರ 8 ಲಕ್ಷ ರೂನಷ್ಟು ತೆರಿಗೆ ಬಾಧ್ಯತೆ ಬರುತ್ತದೆ.
ನೀವು ಇಂಡೆಕ್ಸೇಶನ್ ಬೆನಿಫಿಟ್ ಇಲ್ಲದ ಹೊಸ ಟ್ಯಾಕ್ಸ್ ಪ್ರಕಾರ ಶೇ. 12.5ರಷ್ಟು ಎಲ್ಟಿಸಿಜಿ ಕಟ್ಟುತ್ತೇವೆ ಎಂದರೆ 8.75 ಲಕ್ಷ ರೂ ಟ್ಯಾಕ್ಸ್ ಆಗುತ್ತದೆ. ನಿಮಗೆ ಬಹುತೇಕ ಒಂದು ಲಕ್ಷ ರೂನಷ್ಟು ಟ್ಯಾಕ್ಸ್ ಉಳಿಸುತ್ತದೆ ಸಿಐಐ.
ಇದನ್ನೂ ಓದಿ: ಓಲಾ, ಊಬರ್ ಪ್ರಯಾಣಿಕರಿಗೆ ಶಾಕ್; ಸರ್ಜ್ ಪ್ರೈಸ್ ಹೆಚ್ಚಳಕ್ಕೆ ಸರ್ಕಾರ ಅನುಮತಿ; ಇಲ್ಲಿದೆ ಮಾರ್ಗಸೂಚಿ ಮುಖ್ಯಾಂಶಗಳು
2024ರ ಜುಲೈ 22ರ ಬಳಿಕ ಆಸ್ತಿ ಖರೀದಿಸಿದವರಿಗೆ ಸಿಗಲ್ಲ ಈ ಸೌಲಭ್ಯ
ಸರ್ಕಾರವು ಕ್ಯಾಪಿಟಲ್ ಗೇನ್ ಟ್ಯಾಕ್ಸ್ಗಳಿಗೆ ಇಂಡೆಕ್ಸೇಶನ್ ಲಾಭವನ್ನು ರದ್ದು ಮಾಡಿದೆ. ಮನೆಗಳಂತಹ ಕೆಲವೇ ಕೆಲವು ಆಸ್ತಿಗಳಿಗೆ ಈ ಸೌಲಭ್ಯ ಇದೆ. ಅದೂ 2024ರ ಜುಲೈ 22ಕ್ಕೆ ಮುನ್ನ ಖರೀದಿಸಲಾದ ಮನೆಗಳಿಗೆ ಸಿಐಐ ಅಥವಾ ಇಂಡೆಕ್ಸೇಶನ್ ಬೆನಿಫಿಟ್ ಅನ್ವಯ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




