GST: ಜೂನ್ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ
GST collections data: ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನ ಕೊನೆಯ ತಿಂಗಳಾದ ಜೂನ್ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹವಾಗಿದೆ. ಹಿಂದಿನೆರಡು ತಿಂಗಳಿಗೆ ಹೋಲಿಸಿದರೆ ಕಡಿಮೆ ತೆರಿಗೆ ಸಿಕ್ಕಿದೆ. ಆದರೆ, ಹಿಂದಿನ ವರ್ಷದ ಜೂನ್ಗೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚು ಜಿಎಸ್ಟಿ ಸಂಗ್ರಹವಾಗಿದೆ. 2024-25ರ ಒಂದು ವರ್ಷದಲ್ಲಿ 22.08 ಲಕ್ಷ ಕೋಟಿ ರೂ ಜಿಎಸ್ಟಿ ಸಿಕ್ಕಿದೆ. ಐದು ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಎರಡು ಪಟ್ಟು ಹೆಚ್ಚಿದೆ.

ನವದೆಹಲಿ, ಜುಲೈ 1: ಭಾರತದಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ (GST collections) 2024-25ರಲ್ಲಿ 22.08 ಲಕ್ಷ ಕೋಟಿ ರೂನಷ್ಟಾಗಿದೆ. ಇದು ಸಾರ್ವಕಾಲಿಕ ದಾಖಲೆ ಎನಿಸಿದೆ. ಹಿಂದೆಂದೂ ಯಾವುದೇ ವರ್ಷದಲ್ಲೂ ಜಿಎಸ್ಟಿ ಇಷ್ಟೊಂದು ಸಿಕ್ಕಿರಲಿಲ್ಲ. 2020-21ರ ಹಣಕಾಸು ವರ್ಷದಲ್ಲಿ 11.37 ಲಕ್ಷ ಕೋಟಿ ರೂ ಜಿಎಸ್ಟಿ ಸಿಕ್ಕಿತ್ತು. ಐದು ವರ್ಷದ ಬಳಿಕ ಈ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ದ್ವಿಗುಣಗೊಂಡಿರುವುದು ವಿಶೇಷ.
2021-22ರಲ್ಲಿ ಸರಾಸರಿ ಮಾಸಿಕ ಜಿಎಸ್ಟಿ ಸಂಗ್ರಹ 1.51 ಲಕ್ಷ ಕೋಟಿ ರೂ ಇತ್ತು. 2024-25ರಲ್ಲಿ ಅದು 1.84 ಲಕ್ಷ ಕೋಟಿ ರೂಗೆ ಏರಿದೆ.
ಜಿಎಸ್ಟಿ ನೊಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. 2017ರಲ್ಲಿ 65 ಲಕ್ಷ ನೊಂದಾಯಿತ ತೆರಿಗೆ ಪಾವತಿದಾರರಿದ್ದರು. 2024-25ರಲ್ಲಿ ಇವರ ಸಂಖ್ಯೆ 1.51 ಕೋಟಿಗಿಂತಲೂ ಹೆಚ್ಚಿದೆ.
ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ
2025ರ ಜೂನ್ ತಿಂಗಳಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ
ಇವತ್ತು ಬಿಡುಗಡೆಯಾದ ದತ್ತಾಂಶದ ಪ್ರಕಾರ ಈ ಜೂನ್ ತಿಂಗಳಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ 1.85 ಲಕ್ಷ ಕೋಟಿ ರೂ ಎನ್ನಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚು ಜಿಎಸ್ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.
ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಇಳಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್ಟಿ ಸಿಕ್ಕಿತ್ತು. ಈ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಜಿಎಸ್ಟಿ ಸಂಗ್ರಹ 2 ಲಕ್ಷ ಕೋಟಿ ರೂಗಿಂತ ಕೆಳಗೆ ಹೋಗಿದೆ.
ಇದನ್ನೂ ಓದಿ: ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ
ಜಿಎಸ್ಟಿ ಜಾರಿಗೆ ಬಂದು ಇವತ್ತಿಗೆ 8 ವರ್ಷ
ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ 2017ರ ಜುಲೈ 1ರಂದು ಜಾರಿಗೆ ಬಂದಿತ್ತು. ಇವತ್ತಿಗೆ ಜಿಎಸ್ಟಿಗೆ ಎಂಟು ವರ್ಷ ಪೂರ್ಣವಾಗಿದೆ. ವಿವಿಧ ಸ್ಥಳೀಯ ತೆರಿಗೆಗಳು ಮತ್ತು ಸೆಸ್ಗಳಿಂದ ಸಾಕಷ್ಟು ಗೋಜಲು ಮತ್ತು ಸಂಕೀರ್ಣತೆ ಹೊಂದಿದ್ದ ಟ್ಯಾಕ್ಸ್ ಸಿಸ್ಟಂ ಬದಲು ಬಹಳ ಸರಳ ಹಾಗೂ ನೇರ ಟ್ಯಾಕ್ಸ್ ಸಿಸ್ಟ ಆದ ಜಿಎಸ್ಟಿಯನ್ನು ತರಲಾಗಿತ್ತು. ಶೇ. 5ರಿಂದ ಆರಂಭವಾಗಿ ಶೇ. 28ರವರೆಗೂ ಸದ್ಯ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳನ್ನು ಜಿಎಸ್ಟಿ ಸಿಸ್ಟಂ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




