ITR: ಜುಲೈ 31ರ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ ಕಟ್ಟಬೇಕಾಗುತ್ತದಾ? ಇಲ್ಲಿದೆ ಮಾಹಿತಿ
Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಅದನ್ನು ಸೆ 15ಕ್ಕೆ ವಿಸ್ತರಿಸಲಾಗಿದೆ. ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಕಟ್ಟಲು ಜುಲೈ 31 ಡೆಡ್ಲೈನ್ ಇತ್ತು. ಈಗ ಐಟಿಆರ್ ಸಲ್ಲಿಕೆಗೆ ಗಡುವು ವಿಸ್ತರಣೆ ಆಗಿರುವುದರಿಂದ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಕಟ್ಟಲೂ ಕೂಡ ಸೆ. 15ರವರೆಗೆ ಕಾಲಾವಕಾಶ ಇದೆ. ಅದಾದ ಬಳಿಕ ಕಟ್ಟಿದರೆ ಶೇ. 1ರಷ್ಟು ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ.

ನವದೆಹಲಿ, ಜೂನ್ 24: ಈ ಬಾರಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಸಲ್ಲಿಸಲು ಜುಲೈ 31ಕ್ಕೆ ಇದ್ದ ಗಡುವನ್ನು ಸೆಪ್ಟೆಂಬರ್ 15ರವರೆಗೂ ವಿಸ್ತರಿಸಲಾಗಿದೆ. ಫಾರ್ಮ್ 16 ಬಂದಿಲ್ಲದೇ ಇರುವುದು ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಐಟಿಆರ್ ಸಲ್ಲಿಕೆ ವಿಳಂಬವಾಗಬಹುದು ಎನ್ನುವ ಹೆದರಿಕೆಯಲ್ಲಿದ್ದ ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿಯಾದ ಸಿಬಿಡಿಟಿ ನಿರಾಳ ಸುದ್ದಿ ನೀಡಿದೆ. ಆದರೆ, ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಅನ್ನು ಜುಲೈ 31ರೊಳಗೆ ಪಾವತಿಸಬೇಕಾ ಎನ್ನುವ ಸಂದಿಗ್ಧತೆಯನ್ನು ಕೆಲವರು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಎಕನಾಮಿಕ್ ಟೈಮ್ಸ್ ವರದಿಯು ಕೆಲ ತಜ್ಞರ ಅಭಿಪ್ರಾಯಗಳನ್ನು ಪಡೆದು ಈ ಪ್ರಶ್ನೆಗೆ ಸಮಾಧಾನ ನೀಡಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಇರುವ ಕಾಲಾವಧಿಯನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಿರುವುದರಿಂದ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಪಾವತಿಸಲೂ ಕೂಡ ಅಲ್ಲಿಯವರೆಗೆ ಕಾಲಾವಕಾಶ ಇರುತ್ತದೆ.
ಈ ಮುಂಚೆ, ಜುಲೈ 31ರೊಳಗೆ ಟ್ಯಾಕ್ಸ್ ಕಟ್ಟಬೇಕಿತ್ತು. ಅದಾದ ಬಳಿಕ ಪಾವತಿಸಿದರೆ ದಂಡ ತೆರಬೇಕಾಗುತ್ತಿತ್ತು. ಜೊತೆಗೆ ಬಡ್ಡಿಸಹಿತವಾಗಿ ಟ್ಯಾಕ್ಸ್ ಪಾವತಿಸಬೇಕಿತ್ತು. ಈಗ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ಇರುತ್ತದೆ.
ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ಅಲರ್ಟ್: ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ನಿಮಗೆ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ
ಏನಿದು ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್?
ಐಟಿಆರ್ ಫೈಲಿಂಗ್ ವೇಳೆ ನಾವು ಪಾವತಿಸುವ ಅಥವಾ ತೋರಿಸುವ ತೆರಿಗೆ ಬಾಧ್ಯತೆ ಇದು. ನಮ್ಮ ಒಟ್ಟು ತೆರಿಗೆ ಬಾಧ್ಯತೆ ಎಷ್ಟಿದೆ, ಟಿಡಿಎಸ್ ಎಷ್ಟು ಕಡಿತವಾಗಿದೆ. ಅಡ್ವಾನ್ಸ್ಡ್ ಟ್ಯಾಕ್ಸ್ ಎಷ್ಟು ಕಟ್ಟಿದ್ದೇವೆ ಇತ್ಯಾದಿಯನ್ನು ಲೆಕ್ಕ ಹಾಕಿ, ಅಂತಿಮವಾಗಿ ತೆರಿಗೆ ಕಟ್ಟುವುದು ಬಾಕಿ ಉಳಿದಿದ್ದರೆ ಅದನ್ನು ಪಾವತಿಸಬೇಕಾಗುತ್ತದೆ.
ಗಡುವು ಮೀರಿದರೆ ಎಷ್ಟು ಬಡ್ಡಿ ಮತ್ತು ದಂಡ?
ಸೆಪ್ಟೆಂಬರ್ 15ರ ಬಳಿಕ ನೀವು ತೆರಿಗೆ ಪಾವತಿಸುತ್ತೀನಿ ಎನ್ನುವುದಾದರೆ ಶೇ. 1ರಷ್ಟು ಬಡ್ಡಿಯನ್ನು ಸೇರಿಸಿ ತೆರಬೇಕಾಗುತ್ತದೆ. ಈ ಬಡ್ಡಿಯು ಮಾಸಿಕವಾಗಿರುತ್ತದೆ.
ನೀವು ಮುಂಗಡ ತೆರಿಗೆ ಅಥವಾ ಅಡ್ವಾನ್ಸ್ಡ್ ಟ್ಯಾಕ್ಸ್ ಕಟ್ಟಿರದಿದ್ದರೆ ಅಥವಾ ಕಡಿಮೆ ಕಟ್ಟಿದ್ದರೆ ಆ ಹಣಕ್ಕೆ ಶೇ. 1ರಷ್ಟು ಮಾಸಿಕ ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್ಗೆ ಡೆಡ್ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ
ಮುಂಗಡ ತೆರಿಗೆ ಯಾರು ಪಾವತಿಸಬೇಕು?
ಸ್ವಂತ ಉದ್ಯೋಗ ನಡೆಸುವವರು, ಬ್ಯುಸಿನೆಸ್ ಸಂಸ್ಥೆಗಳು ತಮ್ಮ ಆದಾಯಕ್ಕೆ ಕಟ್ಟಬೇಕಿರುವ ತೆರಿಗೆ 10,000 ರೂಗಿಂತ ಹೆಚ್ಚಿದ್ದರೆ ಅಂಥವರು ಅಡ್ವಾನ್ಸ್ಡ್ ಟ್ಯಾಕ್ಸ್ ಪಾವತಿಸಬೇಕು. ಸಂಬಳ ಪಡೆಯುತ್ತಿರುವ ವ್ಯಕ್ತಿಗಳಾದರೆ, ತಮ್ಮ ಸಂಬಳ ಹೊರತಾದ ಆದಾಯಕ್ಕೆ ಕಟ್ಟಬೇಕಾದ ತೆರಿಗೆ 10,000 ರೂ ಮೀರಿದರೆ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕು. ಇತರ ಆದಾಯ ಎಂದರೆ, ಷೇರು, ಆಸ್ತಿ ಮಾರಾಟದಿಂದ ಬಂದ ಕ್ಯಾಪಿಟಲ್ ಗೇನ್, ಬಾಡಿಗೆ, ಎಫ್ಡಿ ಬಡ್ಡಿ, ಫ್ರೀಲಾನ್ಸಿಂಗ್ ಆದಾಯ ಇತ್ಯಾದಿ ಸೇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ