ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲದಲ್ಲಿರುವವರಿಗೆ ನಿರಾಸೆ ತರಿಸುವಂಥ ನಿರ್ಧಾರವನ್ನು ಪ್ರಮುಖ ಕಂಪನಿಗಳು (IT Companies) ಕೈಗೊಂಡಿವೆ. ಕೋವಿಡ್-19 (Covid-19) ಸಾಂಕ್ರಾಮಿಕದ ನಂತರ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ (Recruitments) ವಿಳಂಬ ನೀತಿ ಅನುಸರಿಸುತ್ತಾ ಬಂದಿರುವ ಕಂಪನಿಗಳು ಇದೀಗ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಕೆಲ ಕಾಲ ಮುಂದೂಡುವ ತೀರ್ಮಾನ ಕೈಗೊಂಡಿವೆ ಎಂದು ವರದಿಯಾಗಿದೆ.
ಎರಡನೇ ತ್ರೈಮಾಸಿಕ ಅವಧಿಯಲ್ಲಿ ದೇಶದ 10 ದೊಡ್ಡ ಐಟಿ ಕಂಪನಿಗಳ ಪೈಕಿ 5 ಕಂಪನಿಗಳು ಮಾರಾಟ, ನೆರವು ಸಿಬ್ಬಂದಿ ಸಂಬಂಧಿತ ಉದ್ಯೋಗ ಕಡಿತ ಮಾಡಿವೆ. ಅನೌಪಚಾರಿಕವಾಗಿ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿವೆ ಎಂದು ‘ಲೈವ್ ಮಿಂಟ್’ ಪತ್ರಿಕೆ ವರದಿ ಮಾಡಿದೆ.
ಯಾವ ಕಂಪನಿಗಳಲ್ಲಿ ಉದ್ಯೋಗ ಕಡಿತ, ನೇಮಕಾತಿ ಮುಂದೂಡಿಕೆ?
ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿಗಳಾದ ವಿಪ್ರೋ ಮತ್ತು ಟೆಕ್ ಮಹೀಂದ್ರಾದ ಮಾರಾಟ ವಿಭಾಗದ ಸಿಬ್ಬಂದಿ, ನೆರವು ಸಿಬ್ಬಂದಿ ಹಾಗೂ ಸಾಫ್ಟ್ವೇರ್ ಎಂಜಿನಿಯರ್ಗಳ ಸಂಖ್ಯೆಯಲ್ಲಿ ಹಂತಹಂತವಾಗಿ ಕುಸಿತ ಕಾಣಿಸಿದೆ. ಈ ಕಂಪನಿಗಳು ನೇಮಕಾತಿಯನ್ನೂ ಮುಂದೂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಲ್ ಆ್ಯಂಡ್ ಟಿ ಹಾಗೂ ಹೈದರಾಬಾದ್ ಮೂಲದ ಸಿಯೆಂಟ್ ಲಿಮಿಟೆಡ್ ಕಂಪನಿಗಳು ಮಾರಾಟ ಸಿಬ್ಬಂದಿಯ ಸಂಖ್ಯೆಯಲ್ಲಿ ಕಡಿತ ಮಾಡಿವೆ. ಝೆನ್ಸಾರ್ ಲಿಮಿಟೆಡ್ ಕೂಡ ಉದ್ಯೋಗಿಗಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿದೆ.
ಇದನ್ನೂ ಓದಿ: Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನೆಲ್ಲ ಉದ್ದಿಮೆಗಳು, ವ್ಯವಹಾರಗಳು ಆನ್ಲೈನ್ ವೇದಿಕೆಗೆ ಬದಲಾದುದರಿಂದ ಐಟಿ ಕಂಪನಿಗಳು ಹೆಚ್ಚೆಚ್ಚು ನೇಮಕಾತಿ ಮಾಡಿಕೊಂಡಿದ್ದವು. 2020ರ ಜುಲೈ ಹಾಗೂ 2022ರ ಸೆಪ್ಟೆಂಬರ್ ಅವಧಿಯಲ್ಲಿ 10 ಅತಿದೊಡ್ಡ ಐಟಿ ಕಂಪನಿಗಳು ಮೂರನೇ ಒಂದು ಭಾಗದಷ್ಟು ಮಂದಿಯನ್ನು ಅಥವಾ 5 ಲಕ್ಷ ಜನರನ್ನು ನೇಮಕಾತಿ ಮಾಡಿಕೊಂಡಿದ್ದವು. ಈ 10 ಕಂಪನಿಗಳು ಒಟ್ಟಾಗಿ ಸೆಪ್ಟೆಂಬರ್ 30ರ ವೇಳೆಗೆ ಸುಮಾರು 17.4 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದವು. ಆದರೆ, ಆರ್ಥಿಕತೆ ಕುಂಠಿತಗೊಂಡಿರುವುದು, ಲಾಭದಲ್ಲಿ ಕುಸಿತವಾಗಿರುವುದು ಉದ್ದಿಮೆ ವಾತಾವರಣದಲ್ಲಿ ಬದಲಾವಣೆ ಸೃಷ್ಟಿಸಿತು. ಉದ್ಯೋಗ ಕಡಿತ, ನೇಮಕಾತಿ ತಡೆಹಿಡಿಯುವಿಕೆ ಅಥವಾ ಮುಂದೂಡಿಕೆಗೆ ಕಾರಣವಾಯಿತು ಎಂದು ‘ಲೈವ್ ಮಿಂಟ್’ ವರದಿ ಹೇಳಿದೆ.
ಜಾಗತಿಕವಾಗಿಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಐಟಿ ಕಂಪನಿಗಳು ಉದ್ಯೋಗ ಕಡಿತ, ನೇಮಕಾತಿ ವಿಳಂಬದ ಮೊರೆ ಹೋಗಿವೆ. ಖ್ಯಾತ ಟೆಕ್ ಕಂಪನಿ ಮೈಕ್ರೋಸಾಫ್ಟ್ 1,000 ಮಂದಿ ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿತ್ತು. ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ ಕೂಡ 4,000 ಉದ್ಯೋಗ ಕಡಿತ ಮಾಡಿತ್ತು. ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಕೂಡ ಅರ್ಧದಷ್ಟು ಉದ್ಯೋಗ ಕಡಿತ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ