Indian Rice: ಭಾರತದಿಂದ ಅಕ್ಕಿ ರಫ್ತು ನಿಷೇಧ; ಹಲವು ದೇಶಗಳಲ್ಲಿ ಆತಂಕ; ಅಮೆರಿಕ, ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು

|

Updated on: Jul 23, 2023 | 10:33 AM

Global Effect of Indian Rice Export Ban: ಜುಲೈ 20ರಂದು ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ಭಾರತ ನಿಷೇಧಿಸಿತ್ತು. ಇದರಿಂದ ನೇಪಾಳ, ಬಾಂಗ್ಲಾದೇಶ ಹಾಗೂ ಆಫ್ರಿಕಾದ ಹಲವು ದೇಶಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗುವ ಸಂಭವ ಇದೆ.

Indian Rice: ಭಾರತದಿಂದ ಅಕ್ಕಿ ರಫ್ತು ನಿಷೇಧ; ಹಲವು ದೇಶಗಳಲ್ಲಿ ಆತಂಕ; ಅಮೆರಿಕ, ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು
ಅಕ್ಕಿ
Follow us on

ನವದೆಹಲಿ, ಜುಲೈ 23: ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ಭಾರತ ನಿಷೇಧ ಹೇರಿದ (Indian Rice Export Ban) ಕ್ರಮದಿಂದ ಜಾಗತಿಕವಾಗಿ ಆಹಾರ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್ ದೇಶದಿಂದ ಆಹಾರಪದಾರ್ಥಗಳ ಸರಬರಾಜಿನಲ್ಲಿ ಆಗಿರುವ ವ್ಯತ್ಯಯದಿಂದ ಹಲವು ದೇಶಗಳು ಪರಿತಪಿಸುತ್ತಿವೆ. ಈಗ ಭಾರತದ ಅಕ್ಕಿ ರಫ್ತು ನಿಷೇಧದಿಂದ ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಇಂಬುಕೊಡುವ ಸಾಧ್ಯತೆ ಇದೆ.

ಅಕ್ಕಿ ರಫ್ತನ್ನು ಭಾರತ ನಿಷೇಧಿಸಿದ್ದೇಕೆ?

ಭಾರತದಲ್ಲಿ ಮಳೆ, ಪ್ರವಾಹ ಮತ್ತಿತರ ಕಾರಣದಿಂದ ಆಹಾರ ಬೆಳೆಗಳ ಫಸಲು ಬಹಳ ಕಡಿಮೆ ಆಗಿದೆ. ಕಳೆದ 12 ತಿಂಗಳಲ್ಲಿ ಆಹಾರವಸ್ತುಗಳ ಶೇ. 10ಕ್ಕಿಂತಲೂ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಬಹಳ ಅಗತ್ಯ ಇರುವ ಆಹಾರವಸ್ತುಗಳಲ್ಲಿ ಅಕ್ಕಿ ಪ್ರಮುಖವಾದುದು. ಇದರ ಲಭ್ಯತೆ ಕಡಿಮೆ ಆಗಬಾರದೆಂಬ ದೃಷ್ಟಿಯಿಂದ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿದೆ. ಬಾಸ್ಮತಿ ವಿಧದ ಅಕ್ಕಿಗಳನ್ನು ಬಿಟ್ಟು ಉಳಿದ ಸಾಧಾರಣ ಅಕ್ಕಿಗಳ ರಫ್ತು ಮಾಡುವಂತಿಲ್ಲ.

ಇದನ್ನೂ ಓದಿCar Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ

ಭಾರತದ ಅಕ್ಕಿ ರಫ್ತಿನಿಂದ ಯಾವ್ಯಾವ ದೇಶಗಳಿಗೆ ಆತಂಕ?

ಜಾಗತಿಕವಾಗಿ ಒಟ್ಟು ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40ರಷ್ಟಿದೆ. 2022ರಲ್ಲಿ ಭಾರತ 22.2 ಮಿಲಿಯನ್ ಟನ್​ಗಳಷ್ಟು ಅಕ್ಕಿಯನ್ನು ವಿವಿಧ ದೇಶಗಳಿಗೆ ರಫ್ತು ಮಾಡಿತ್ತು. ಅದರಲ್ಲಿ ಅರ್ಧದಷ್ಟು ಅಕ್ಕಿ ಬಾಸ್ಮತಿಯೇತರದ್ದು. ಭಾರತದ ಅಕ್ಕಿಯ ಮೇಲೆ ಅತಿಹೆಚ್ಚು ಅವಲಂಬಿತವಾಗಿರುವುದು ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳ. ಹಾಗೆಯೇ, ಕ್ಯಾಮರೂನ್, ಡಿಜಿಬೋಟಿ, ಬೆನಿನ್, ಆಂಗೊಲಾ, ಗಿನಿಯಾ, ಐವರಿ ಕೋಸ್ಟ್, ಕೀನ್ಯಾ ಮೊದಲಾದ ದೇಶಗಳೂ ಕೂಡ ಭಾರತದಿಂದ ಬಾಸ್ಮತಿಯೇತರ ಅಕ್ಕಿಯನ್ನು ಹೆಚ್ಚು ಖರೀದಿಸುತ್ತವೆ.

ಇದನ್ನೂ ಓದಿSBI: ಎಸ್​ಬಿಐನಿಂದ ಬಿಡುಗಡೆ ಆಗಲಿವೆ ಇನ್​ಫ್ರಾ ಬಾಂಡ್​ಗಳು; 10,000 ಕೋಟಿ ರೂ ಮೊತ್ತದ ಸಾಲಕ್ಕೆ ಯೋಜನೆ

ಅಮೆರಿಕ ಮತ್ತು ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು

ಉತ್ತರ ಅಮೆರಿಕ ಖಂಡದ ರಾಷ್ಟ್ರಗಳಾದ ಕೆನಡಾ ಮತ್ತು ಅಮೆರಿಕಾದಲ್ಲಿ ಅಕ್ಕಿಗೆ ಬಹಳ ಬೇಡಿಕೆ ಇದೆ. ಇದಕ್ಕೆ ಕಾರಣ ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರು. 2022-23ರ ವರ್ಷದಲ್ಲಿ ಉತ್ತರ ಅಮೆರಿಕನ್ ದೇಶಗಳು ಭಾರತದಿಂದ 64,330 ಟನ್​ಗಳಷ್ಟು ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಂಡಿದ್ದವು. ಈಗ ಭಾರತ ಅಕ್ಕಿ ರಫ್ತು ನಿಷೇಧ ಮಾಡುತ್ತಿದ್ದಂತೆಯೇ ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ಸಮುದಾಯದವರು ಅಕ್ಕಿ ಖರೀದಿಗೆ ಮುಗಿಬೀಳುತ್ತಿದ್ದಾರೆಂಬ ಸುದ್ದಿ ಇದೆ. ಹಾಗೆಯೇ, ಅಲ್ಲಿನ ಸೂಪರ್​ಮಾರ್ಕೆಟ್​ಗಳು ಅಕ್ಕಿ ಬೆಲೆಯನ್ನು ವಿಪರೀತ ಏರಿಸುತ್ತಿರುವ ಸುದ್ದಿಯೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ