SBI: ಎಸ್ಬಿಐನಿಂದ ಬಿಡುಗಡೆ ಆಗಲಿವೆ ಇನ್ಫ್ರಾ ಬಾಂಡ್ಗಳು; 10,000 ಕೋಟಿ ರೂ ಮೊತ್ತದ ಸಾಲಕ್ಕೆ ಯೋಜನೆ
Infra Bond From State Bank of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಿಗೆಂದು 10,000 ಕೋಟಿ ರೂ ಮೊತ್ತದ ಬಾಂಡ್ಗಳನ್ನು ಮುಂದಿನ ವಾರ ವಿತರಿಸಲಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವದೆಹಲಿ, ಜುಲೈ 21: ಸ್ಟೇಟ್ ಬ್ಯಾಂಕ್ ಇಂಡಿಯಾ ಇದೀಗ ಮತ್ತೊಂದು ಸುತ್ತಿನ ಬಂಡವಾಳ ಸಂಗ್ರಹಣೆಗೆ ಮುಂದಾಗಿದ್ದು ಜನರಿಂದ 10,000 ಕೋಟಿ ರೂ ಮೊತ್ತದ ಸಾಲ ಪಡೆಯಲು ಯೋಜಿಸಿರುವುದು ತಿಳಿದುಬಂದಿದೆ. ಎಸ್ಬಿಐ ಮುಂದಿನ ಒಂದು ಅಥವಾ ಎರಡು ವಾರದಲ್ಲಿ ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳ (SBI Infra Bonds) ಮೂಲಕ ಸಾಲ ಸಂಗ್ರಹಿಸುವ ಇರಾದೆಯಲ್ಲಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ ಜುಲೈ ಕೊನೆಯ ವಾರದಲ್ಲಿ ಎಸ್ಬಿಐ ಇನ್ಫ್ರಾ ಬಾಂಡ್ಗಳಿಗೆ ಬಿಡ್ಡಿಂಗ್ ಕರೆಯುವ ಸಾಧ್ಯತೆ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಜನವರಿಯಲ್ಲಿ ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳ ಮೂಲಕ 9,718 ಕೋಟಿ ರೂ ಬಂಡವಾಳ ಸಂಗ್ರಹಿಸಿತ್ತು. 15 ವರ್ಷಗಳ ಈ ಬಾಂಡ್ಗಳನ್ನು ಖರೀದಿಸುವ ಹೂಡಿಕೆದಾರರಿಗೆ ವಾರ್ಷಿಕ ಶೇ. 7.7ರಷ್ಟು ಬಡ್ಡಿ ಸಿಗುತ್ತದೆ. ಈ ಬಾರಿ ನೀಡಲಾಗುವ ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳಿಗೆ ಎಷ್ಟು ಬಡ್ಡಿ ದರ ನೀಡಲಾಗುವುದು ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: SBI FD Scheme: ಎಸ್ಬಿಐ ವೀ ಕೇರ್, ಹಣ ಡಬಲ್ ಮಾಡಬಲ್ಲ ಸರ್ಕಾರಿ ಬ್ಯಾಂಕ್ ಎಫ್ಡಿ ಸ್ಕೀಮ್
ಏನಿದು ಇನ್ಫ್ರಾಸ್ಟ್ರಕ್ಚರ್ ಬಾಂಡ್?
ಬಾಂಡ್ ಎಂಬುದು ಸಾಲಪತ್ರ. ಸರ್ಕಾರದಿಂದ ವಿತರಿಸಲಾಗುವುದು ಗವರ್ನ್ಮೆಂಟ್ ಬಾಂಡ್ಗಳು. ಅದೇ ರೀತಿ ವಿವಿಧ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಸಾಲಪತ್ರಗಳನ್ನು ನೀಡುತ್ತವೆ. ಈ ಬಾಂಡ್ಗಳನ್ನು ವಿತರಿಸುವ ಸಂಸ್ಥೆಯೇ ಬಡ್ಡಿ ದರ ನಿಗದಿ ಮಾಡುತ್ತದೆ.
ಬಾಂಡ್ಗಳಲ್ಲಿ ಅನೇಕ ರೀತಿಯ ಹೆಸರು ಕೇಳಿರಬಹುದು. ಗ್ರೀನ್ ಬಾಂಡ್, ಗೋಲ್ಡ್ ಬಾಂಡ್, ಕಾರ್ಪೊರೇಟ್ ಬಾಂಡ್, ಇನ್ಫ್ರಾಸ್ಟ್ರಕ್ಚರ್ ಬಾಂಡ್ ಇತ್ಯಾದಿ ಇವೆ. ಗ್ರೀನ್ ಬಾಂಡ್ ಮೂಲಕ ಸಂಗ್ರಹವಾದ ಬಂಡವಾಳವನ್ನು ಪರಿಸರಸ್ನೇಹಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ. ಹಾಗೆಯೇ, ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳಿಂದ ಸಂಗ್ರಹವಾದ ಹಣವನ್ನು ದೇಶದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ. ಅಂದರೆ ಎಸ್ಬಿಐ ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ ಮೂಲಕ ಕಲೆಹಾಕಿದ ಸಾಲದ ಹಣವನ್ನು ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿರುವ ಸಂಸ್ಥೆಗಳಿಗೆ ಸಾಲವಾಗಿ ನೀಡುತ್ತದೆ.
ಇದನ್ನೂ ಓದಿ: Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ
ಇಲ್ಲಿ ಗಮನಿಸಬೇಕಾದರ ಸಂಗತಿ ಎಂದರೆ ಈ ಸಾಲಪತ್ರಗಳನ್ನು ಷೇರುಗಳ ರೀತಿ ವಹಿವಾಟು ಮಾಡಲು ಸಾಧ್ಯ. ಆದರೆ, ಬಾಂಡ್ ಪಡೆದು 5 ವರ್ಷದವರೆಗೆ ಮಾರಲು ಸಾಧ್ಯವಿಲ್ಲ. ಅದಾದ ಬಳಿಕ ಎನ್ಎಸ್ಇ ಅಥವಾ ಬಿಎಸ್ಇ ಷೇರುವಿನಿಮಯ ಕೇಂದ್ರಗಳಲ್ಲಿ ಇದನ್ನು ಮಾರಬಹುದು. ಸಾಮಾನ್ಯವಾಗಿ ಈ ಬಾಂಡ್ಗಳು 10-15 ವರ್ಷದಲ್ಲಿ ಮೆಚ್ಯೂರ್ ಆಗುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ