ಭಾರತದ ಮೊದಲ ಖಾಸಗಿ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
India's first defence drone runway built by private sector: ಮಹಾರಾಷ್ಟ್ರದ ನಾಗಪುರ್ನಲ್ಲಿ ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಮತ್ತು ಸ್ಫೋಟಕ ಡ್ರೋನ್ಗಳ ಪರೀಕ್ಷಾ ಸೌಲಭ್ಯಗಳ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಭಾರತದಲ್ಲಿ ಖಾಸಗಿ ಸೆಕ್ಟರ್ನಿಂದ ಈ ರನ್ವೇ ತಯಾರಾಗಿದ್ದು ಇದೇ ಮೊದಲು.

ನಾಗಪುರ್, ಮಾರ್ಚ್ 31: ಭಾರತದ ಡಿಫೆನ್ಸ್ ಕ್ಷೇತ್ರದಲ್ಲಿ ಖಾಸಗಿ ಸೆಕ್ಟರ್ನ (private sector) ಪಾತ್ರ ದಿನೇ ದಿನೇ ಹೆಚ್ಚುತ್ತಿದೆ. ರಾಕೆಟ್, ಸೆಟಿಲೈಟ್, ಮದ್ದು ಗುಂಡು, ಡ್ರೋನ್ ಇತ್ಯಾದಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಖಾಸಗಿ ಕಂಪನಿಗಳು ತಯಾರಿಸುತ್ತಿವೆ. ಮಿಲಿಟರಿ ರಫ್ತುಗಳಲ್ಲೂ ಪ್ರೈವೇಟ್ ಸೆಕ್ಟರ್ ಪ್ರಾಮುಖ್ಯತೆ ಪಡೆದಿವೆ. ಇದೇ ವೇಳೆ, ನಾಗಪುರದಲ್ಲಿ ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಎನ್ನುವ ಖಾಸಗಿ ಕಂಪನಿಯು ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಅಭಿವೃದ್ಧಿಪಡಿಸಿದೆ. ಹಾಗೆಯೇ, ಸ್ವಘಾತ ಡ್ರೋನ್ಗಳ (Loitering Munition) ಪರೀಕ್ಷಾ ಕೇಂದ್ರವನ್ನೂ ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗಪುರಕ್ಕೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕಂಪನಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಭಾರತದಲ್ಲಿ ಇದು ಖಾಸಗಿ ಸೆಕ್ಟರ್ನಿಂದ ನಿರ್ಮಾಣವಾದ ಮೊದಲ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಎನಿಸಿದೆ.
ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆಯ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ 1.27 ಕಿಮೀಯಷ್ಟು ಉದ್ದ ಇದೆ. ಇದರಲ್ಲಿ ಮಧ್ಯಮ ಎತ್ತರ ಮತ್ತು ದೀರ್ಘ ಬಾಳಿಕೆಯ (MALE- Medium Altitude Long Endurance) ಡ್ರೋನ್, ಮತ್ತು ಅಧಿಕ ಎತ್ತರದ ದೀರ್ಘ ಬಾಳಿಕೆಯ (HALE- High Altitude Long Endurance) ಡ್ರೋನ್ಗಳ ಅಭಿವೃದ್ಧಿ ಮತ್ತು ಪರೀಕ್ಷೆಗೆ ಈ ರನ್ವೇ ಬಳಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಂದೂಕು ಲೈಸೆನ್ಸ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ, ನಿಯಮಗಳೇನು? ಇಲ್ಲಿದೆ ಮಾಹಿತಿ
ಅದೇ ವೇಳೆ, ಪ್ರಧಾನಿಯವರು ಆ ಕಾಂಪ್ಲೆಕ್ಸ್ನಲ್ಲಿ 1,080 ಎಕರೆಯಷ್ಟು ವಿಶಾಲವಾದ ಟೆಸ್ಟ್ ರೇಂಜ್ಗೂ ಚಾಲನೆ ನೀಡಿದರು. ಇಲ್ಲಿ ಮುಂದಿನ ತಲೆಮಾರಿನ ಸ್ಫೋಟಕ ಡ್ರೋನ್ ಅಥವಾ ಕಾಮಿಕೇಜ್ ಡ್ರೋನ್ ಅಥವಾ ಲಾಯ್ಟರಿಂಗ್ ಮ್ಯೂನಿಶನ್ ಅಭಿವೃದ್ಧಿಪಡಿಸಿ ಪರೀಕ್ಷಿಸಲಾಗುತ್ತದೆ.
ಈ ಟೆಸ್ಟ್ ರೇಂಜ್ನಲ್ಲಿ ಡ್ರೋನ್ ಸ್ಫೋಟಕಗಳ ಪರೀಕ್ಷೆಗಾಗಿ ನಿಗದಿತ ಕಮ್ಯಾಮಡ್ ಮತ್ತು ಕಂಟ್ರೋಲ್ ಸೆಂಟರ್ ಇದೆ. ಡ್ರೋನ್ ಟೇಕ್ ಆಫ್ ಆಗುವ ಪ್ರದೇಶ, ಪ್ಯಾರಚೂಟ್ ರಿಕವರಿ ಜಾಗ, ಸಿಇಪಿ ಮೆಶರ್ಮೆಂಟ್, ವಾರ್ಹೆಡ್ ಟೆಸ್ಟ್ ಫೆಸಿಲಿಟಿ ಇತ್ಯಾದಿ ಹಲವಾರು ಸೌಲಭ್ಯಗಳನ್ನು ಕಾಣಬಹುದು.
ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆಯ ಈ ವಿಶಾಲ ಪ್ರದೇಶದಲ್ಲಿ ದೇಶೀಯವಾಗಿ ನಿರ್ಮಿತವಾದ ಪಿನಾಕ ರಾಕೆಟ್ ಸಿಸ್ಟಂ, ಏರ್ ಬಾಂಬ್, ಮೈನ್ ಬಾಂಬ್, ಮಲ್ಟಿ ಮೋಡ್ ಗ್ರಿನೇಡ್, ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಮತ್ತಿತರ ಮಿಲಿಟರಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು ತಯಾರಾಗಿರುವುದನ್ನು ಪ್ರಧಾನಿ ಮೋದಿ ಗಮನಿಸಿದರು.
ಇದನ್ನೂ ಓದಿ: ಡಿಜಿಟಲ್ ಎನರ್ಜಿ ಗ್ರಿಡ್, ಇದು ವಿದ್ಯುತ್ ಕ್ಷೇತ್ರದ ಯುಪಿಐ: ನಂದನ್ ನಿಲೇಕಣಿ
ಸದ್ಯ, ಭಾರತೀಯ ಮಿಲಿಟರಿಗಾಗಿ ಈ ಸಂಸ್ಥೆಯು MALE ಡ್ರೋನ್ ಅನ್ನು ನಿರ್ಮಿಸುವ ಪ್ರಸ್ತಾವವನ್ನು ರಕ್ಷಣಾ ಇಲಾಖೆಗೆ ನೀಡಲಾಗಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 31 March 25