ಕರ್ನಾಟಕದಲ್ಲಿ ಬಂದೂಕು ಲೈಸೆನ್ಸ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ, ನಿಯಮಗಳೇನು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಎಲ್ಲೆಂದರಲ್ಲಿ ಬುಂದೂಕು ಬಳಸುವ ಹಾಗಿಲ್ಲ. ಅದಕ್ಕೆ ನಿರ್ದಿಷ್ಟವಾದ ಮಾನದಂಡಗಳಿವೆ. ಹಾಗಾದರೆ, ಬಂದೂಕು ಪರವಾನಗಿ ಪಡೆಯಲು ಅರ್ಹತಾ ಮಾನದಂಡಗಳೇನು? ಅಗತ್ಯ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಬಂದೂಕು ಪರವಾನಗಿ ನಿವೇಕರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಬಂದೂಕು (Gun) ಹೊಂದಬೇಕಿದ್ದರೇ ಅದಕ್ಕೆ ಕೆಲವೊಂದು ನಿಯಮಗಳಿವೆ. ಆತ್ಮ ರಕ್ಷಣೆಗಾಗಿ, ಬೆಳೆ ಸಂರಕ್ಷಣೆ, ಸಾಮಾನ್ಯ ಭದ್ರತೆ ಅಥವಾ ಇತರ ಕಾರಣಗಳಿಗೆ ಬಂದೂಕು ಇಟ್ಟುಕೊಳ್ಳಬಹುದು. ಆದರೆ, ಪರವಾನಗಿ ಅಗತ್ಯವಾಗಿದೆ. ಭಾರತದಲ್ಲಿ ಆಯಾ ರಾಜ್ಯ ಸರ್ಕಾರಗಳಿಂದ ಪರವಾನಗಿ ಪಡೆದ ಬಳಿಕ ಬಂದೂಕು ಇಟ್ಟುಕೊಳ್ಳಲು ಅವಕಾಶವಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಬಂದೂಕು ಪರವಾನಗಿ (Gun Licence) ಪಡೆಯಲು ಅರ್ಹತಾ ಮಾನದಂಡಗಳು ಯಾವವು? ಬಂದೂಕು ಪರವಾನಗಿ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು? ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುವುದು ಹೇಗೆ? ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು? ಬಂದೂಕು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಎಲ್ಲ ವಿವರ ಇಲ್ಲಿದೆ.
1956 ರ ಶಸ್ತ್ರಾಸ್ತ್ರ ಕಾಯ್ದೆಯು Non-Prohibited Bore (NPB) ಬಂದೂಕುಗಳನ್ನು ಪಡೆಯಲು ಅನುಮತಿಸುತ್ತದೆ. ಈ ಕೆಳಗಿನವುಗಳ ಅಡಿಯಲ್ಲಿ ಭಾರತೀಯರು ಯಾರಿಗಾದರೂ ಬಂದೂಕು ಪರವಾನಗಿಯನ್ನು ನೀಡಬಹುದು.
ಯಾರೆಲ್ಲ ಬಂದೂಕು ಇಟ್ಟುಕೊಳ್ಳಬಹದು?
ಆತ್ಮರಕ್ಷಣೆ: ಬೆದರಿಕೆಗೆ ಒಳಗಾಗಿರುವರು ಆತ್ಮರಕ್ಷಣೆಗೆ ಬಂದೂಕು ಇಟ್ಟುಕೊಳ್ಳಬಹದು.
ಸಾಮಾನ್ಯ ಭದ್ರತೆ: ಬ್ಯಾಂಕುಗಳು, ಸಂಸ್ಥೆಗಳು ಇತ್ಯಾದಿಗಳಿಗೆ ಭದ್ರತೆ ಒದಗಿಸುವುವರು ಬಂದೂಕು ಇಟ್ಟುಕೊಳ್ಳಬಹುದು. ಇನ್ನು, ವಿವಿಐಪಿಗಳು ಮತ್ತು ರಾಜಕಾರಣಿಗಳ ಗನ್ಮ್ಯಾನ್ಗಳು ಬಂದೂಕು ಇಟ್ಟುಕೊಳ್ಳಬಹುದಾಗಿದೆ.
ಬೆಳೆ ರಕ್ಷಣೆ: ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕೃಷಿಕರು ಬಂದೂಕು ಇಟ್ಟುಕೊಳ್ಳಬಹುದಾಗಿದೆ.
ಕ್ರೀಡೆ: ಕ್ರೀಡಾ ಉದ್ದೇಶಗಳಿಗಾಗಿ ಬಂದೂಕು ಇಟ್ಟುಕೊಳ್ಳಬಹುದು.
ಅನಿವಾಸಿ ಭಾರತೀಯರು: ಭಾರತಕ್ಕೆ ಹಿಂದಿರುಗುತ್ತಿರುವ ಯಾವುದೇ ಭಾರತೀಯರು ವಿದೇಶದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಬಂದೂಕು ಹೊಂದಿದ್ದರೇ, ಅವರು ಭಾರತೀಯ ಪರವಾನಗಿಗೆ ಅರ್ಜಿ ಸಲ್ಲಿಸಬೇಕು. ಪರವಾನಿಗೆ ಪಡೆದ ಬಳಿಕ, ಇಲ್ಲಿ ಬಂದೂಕು ಇಟ್ಟುಕೊಳ್ಳಬಹುದಾಗಿದೆ. ಅಲ್ಲದೇ, ಯಾವುದೇ ವಿದೇಶಿ ಪ್ರಜೆ ಕರ್ನಾಟಕದಲ್ಲಿ ಮಾನ್ಯ ಕಾರಣಗಳನ್ನು ನೀಡಿದರೆ ಅಂತವರು ಗರಿಷ್ಠ ಆರು ತಿಂಗಳವರೆಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶವಿದೆ.
ಕರ್ನಾಟಕದಲ್ಲಿ ಬಂದೂಕು ಪರವಾನಗಿ ಪಡೆಯಲು ಮಾನದಂಡಗಳೇನು?
ಅರ್ಜಿದಾರರು ಯಾವುದೇ ರೀತಿಯ ಅಪರಾಧ ಹಿನ್ನಲೆ ಹೊಂದಿರಬಾರದು. ಬಂದೂಕು ಪರವಾನಗಿ ನೀಡುವ ಮುನ್ನ ಪೊಲೀಸರು ಅರ್ಜಿದಾರರ ಬಗ್ಗೆ ಮಾಹಿತಿ ಪಡೆಯುತ್ತಾರೆ. ಉದಾಹರಣೆಗೆ, ಅರ್ಜಿದಾರ ವಾಸಿಸುವ ಪ್ರದೇಶದ ಸುತ್ತಮುತ್ತಲಿನ ಅಥವಾ ನೆರೆಹೊರೆಯ ಜನರಿಂದ ಮಾಹಿತಿ ಪಡೆಯುತ್ತಾರೆ. ವ್ಯಕ್ತಿಯು ಮಾನಸಿಕವಾಗಿ ಅಥವಾ ದೈಹಿಕವಾಗಿ ಸ್ವಸ್ಥನಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಅರ್ಜಿದಾರರೊಂದಿಗೆ ಪೊಲೀಸರು ಸಂದರ್ಶನ ನಡೆಸುತ್ತಾರೆ.
ಬಂದೂಕು ಪರವಾನಗಿ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು?
- ಅರ್ಜಿದಾರರ ಇತ್ತೀಚಿನ ಭಾವಚಿತ್ರದ ಎರಡು ಪಾಸ್‌ಪೋರ್ಟ್ ಗಾತ್ರದ ಪ್ರತಿಗಳು (ಬಿಳಿ ಹಿನ್ನೆಲೆಯಲ್ಲಿ)
- ಗುರುತಿನ ಪುರಾವೆ: ಆಧಾರ್ ಕಾರ್ಡ್ ಅಥವಾ ಅರ್ಜಿದಾರರ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಅಥವಾ ಉದ್ಯೋಗಿಗಳಿಗೆ ನೀಡಲಾದ ಗುರುತಿನ ಚೀಟಿಯನ್ನು ನೀಡಬಹುದಾಗಿದೆ.
- ನಿವಾಸದ ಪುರಾವೆ: ಅರ್ಜಿದಾರರು ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಹೊಂದಿಲ್ಲದಿದ್ದರೆ, ಮತದಾರರ ಗುರುತಿನ ಚೀಟಿ ಅಥವಾ ವಿದ್ಯುತ್ ಬಿಲ್ ಅಥವಾ ಬಾಡಿಗೆ ಪತ್ರ ಅಥವಾ ಗುತ್ತಿಗೆ ಪತ್ರ ಅಥವಾ ಆಸ್ತಿ ದಾಖಲೆಗಳನ್ನು ನೀಡಬಹುದು.
- ಬಂದೂಕು ತರಬೇತಿ ಪ್ರಮಾಣಪತ್ರ
- ಬಂದೂಕು ಬಳಕೆ ಉದ್ದೇಶ ಮತ್ತು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೀರಿ ಎಂಬುವುದನ್ನು ಧೃಡಪಡಿಸಬೇಕು.
- 2016 ರ ಶಸ್ತ್ರಾಸ್ತ್ರ ನಿಯಮಗಳ ನಿಯಮ 12 ರ ಉಪ-ನಿಯಮ (3) ರ ಷರತ್ತು (ಎ) ರಲ್ಲಿ ನಿರ್ದಿಷ್ಟಪಡಿಸಿದಂತೆ ವೃತ್ತಿಪರ ವರ್ಗದ ಅರ್ಜಿದಾರರು ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತಾ ಪ್ರಮಾಣ ಪತ್ರ ನೀಡಬೇಕು.
- ನೋಂದಾಯಿತ ಎಂಬಿಬಿಎಸ್ ವೈದ್ಯರು ನೀಡಿದ ಮಾನಸಿಕ ಆರೋಗ್ಯ ಮತ್ತು ದೈಹಿಕ ಸದೃಢತೆಯ ಪ್ರಮಾಣ ಪತ್ರ ಸಲ್ಲಿಸಬೇಕು.
- ಬರ್ತ್ ಸರ್ಟಿಫಿಕೇಟ್ (ಉದಾ: ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಅಥವಾ ಶಾಲೆ ಬಿಡುವ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿ).
ಬಂದೂಕು ಪರವಾನಗಿ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು ಪರವಾನಗಿಯ ಅಗತ್ಯವಿರುವ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಉದಾಹರಣೆ: ಕೃಷಿ, ಆತ್ಮ ರಕ್ಷಣೆ ಇತ್ಯಾದಿ.
ಬಂದೂಕು ಪರವಾನಗಿ ಸಲ್ಲಿಸಲು ಏನು ಮಾಡಬೇಕು?
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಗತ್ಯವಿರುವ ಪ್ರತಿಯೊಂದು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಿಡಿಎಫ್ ಸ್ವರೂಪದಲ್ಲಿ (ಪ್ರತಿ ಪಿಡಿಎಫ್ 1 mb ಮೀರಬಾರದು) ಮತ್ತು ಛಾಯಾಚಿತ್ರವನ್ನು ಜೆಪಿಜಿ ಸ್ವರೂಪದಲ್ಲಿ (ಪ್ರತಿ ಜೆಪಿಜಿ 50 ಕೆಬಿ ಮೀರಬಾರದು) ಇರಿಸಿ.
- ಆನ್‌ಲೈನ್ ನೋಂದಣಿಯ ನಂತರ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಹಾಕಿದ ಪ್ರತಿ ಪ್ರಿಂಟ್ ತೆಗೆದುಕೊಳ್ಳಿ.
- ಯಾವುದೇ ಮಹತ್ವದ ಸಂಗತಿಗಳನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿಯನ್ನು ಸಲ್ಲಿಸಿದರೇ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ
- ಶಸ್ತ್ರಾಸ್ತ್ರ ಪರವಾನಗಿ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ .
- “Apply” ಮೇಲೆ ಕ್ಲಿಕ್ ಮಾಡಿ.
- ರಾಜ್ಯ ಗೃಹ ಇಲಾಖೆ/DM/SDM/ಇತರೆ/MHA ಆಯ್ಕೆಮಾಡಿ.
- ಅರ್ಜಿಯ ವರ್ಗವನ್ನು ಭರ್ತಿ ಮಾಡಿ (ತಯಾರಕ, ವ್ಯಕ್ತಿ, ಸಂಸ್ಥೆ, ಕ್ರೀಡೆ, ಡೀಲರ್)
- ರಾಜ್ಯ, ಜಿಲ್ಲೆ ಆಯ್ಕೆ ಮಾಡಿ.
- ಅರ್ಜಿದಾರರ ಹೆಸರು, ವಿಳಾಸ ಇತ್ಯಾದಿ ಮೂಲಭೂತ ವಿವರಗಳನ್ನು ನಮೂದಿಸಿ.
- ಅರ್ಜಿಯನ್ನು ಪೂರ್ಣಗೊಳಿಸಲು ನೀವು ಹೆಚ್ಚುವರಿ ವಿವರಗಳು ಮತ್ತು ಪರವಾನಗಿ ನಿರ್ದಿಷ್ಟ ವಿವರಗಳನ್ನು ಒದಗಿಸಬೇಕು.
- ಅರ್ಜಿಯನ್ನು ಸಲ್ಲಿಸಿದ ನಂತರ, ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸಲು ಪೊಲೀಸರು ಆ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
- ಅದು ಸ್ಪಷ್ಟವಾದ ನಂತರ, ಪೊಲೀಸರು ವರದಿಯನ್ನು ಕ್ರೈಂ ಬ್ರಾಂಚ್ ಮತ್ತು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಎರಡಕ್ಕೂ ಕಳುಹಿಸುತ್ತಾರೆ.
- ಬಳಿಕ, ವರದಿಯನ್ನು ಆಯಾ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗುತ್ತದೆ. ವರದಿ ತೃಪ್ತಿಕರವಾಗಿದ್ದರೆ ಪರವಾನಗಿಯನ್ನು ನೀಡಲಾಗುತ್ತದೆ.
- ಬಂದೂಕು ಪರವಾನಗಿ ಪಡೆದ ನಂತರ, ಅರ್ಜಿದಾರರು ಬಂದೂಕು ಖರೀದಿಗಾಗಿ ಡೀಲರ್ ಅನ್ನು ಸಂಪರ್ಕಿಸಬೇಕು. ಬಳಿಕ ಗ್ರಾಹಕರು ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಖರೀದಿಸಬಹುದು.
ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು?
- ನೀಡಲಾದ ಪರವಾನಗಿಯು ಮಾನ್ಯ ದಿನಾಂಕ ಮತ್ತು ಸ್ಥಳದೊಂದಿಗೆ ಮತ್ತು ಅದು ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕು.
- ಬಂದೂಕು ಪರವಾನಗಿಯ ಛಾಯಾಚಿತ್ರ.
- ಕಾರ್ಖಾನೆ ಮಾಲೀಕರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಯ ಒಂದು ಪ್ರತಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎನ್ಒಸಿಯ ಒಂದು ಪ್ರತಿ ನೀಡಬೇಕು. (ಬಂದೂಕು ಪರವಾನಗಿ ಭಾರತದಾದ್ಯಂತ ಮಾನ್ಯವಾಗಿದ್ದರೆ, NOC ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿಲ್ಲ).
- ಕಾರ್ಖಾನೆ ಇರುವ ಸ್ಥಳದ ಸಾರಿಗೆ ಪರವಾನಗಿಯ ಅಗತ್ಯವೂ ಇದೆ.
ಬಂದೂಕು ಪರವಾನಗಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಿ
- ಆನ್‌ಲೈನ್ ಶಸ್ತ್ರಾಸ್ತ್ರ ಪರವಾನಗಿ ವೆಬ್‌ಸೈಟ್‌ಗೆ ಭೇಟಿ ನೀಡಿ .
- ಅರ್ಜಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಂಖ್ಯೆಯನ್ನು ನಮೂದಿಸಿ ನಂತರ ಅರ್ಜಿ ದಿನಾಂಕ/ಜನ್ಮ ದಿನಾಂಕವನ್ನು ನಮೂದಿಸಿ.
- ಕೋಡ್ ನಮೂದಿಸಿ.
- ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
ಬಂದೂಕು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಶಸ್ತ್ರಾಸ್ತ್ರ ಪರವಾನಗಿ ನವೀಕರಣಕ್ಕಾಗಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಅವಧಿ ಮುಗಿಯುವ ದಿನಾಂಕಕ್ಕಿಂತ ಒಂದು ತಿಂಗಳ ಮೊದಲು ಸಲ್ಲಿಸಬೇಕು.
- ಶಸ್ತ್ರಾಸ್ತ್ರ ಪರವಾನಗಿ ವೆಬ್‌ಸೈಟ್‌ನಿಂದ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ .
- ನವೀಕರಣದ ಸಮಯದಲ್ಲಿ ಪರವಾನಗಿದಾರರು ತಮ್ಮ ಬಂದೂಕು ಮತ್ತು ಪರವಾನಗಿಯನ್ನು ಪರಿಶೀಲನೆಗಾಗಿ ನೀಡಬೇಕು ಮತ್ತು ನವೀಕರಣ ಶುಲ್ಕವನ್ನು ಪಾವತಿಸಬೇಕು.
- ಪರವಾನಗಿದಾರರು ಹಿರಿಯ ನಾಗರಿಕರಾಗಿದ್ದರೆ, ಸಕ್ಷಮ ಪ್ರಾಧಿಕಾರವು ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಪರಿಶೀಲಿಸಬಹುದು.
- ನಂತರ, ನವೀಕರಣವನ್ನು ತಕ್ಷಣವೇ ಮಾಡಲಾಗುವುದು ಮತ್ತು ನವೀಕರಣದ ಬಗ್ಗೆ ಅಗತ್ಯ ಮಾಹಿತಿಯನ್ನು ಪರವಾನಗಿಯಲ್ಲಿ ನೀಡಲಾಗುತ್ತದೆ.