ನೂರು ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆದಿದ್ದ 30,000 ಕೋಟಿ ರೂ ಟೆಂಡರ್ ರದ್ದು; ಫ್ರೆಂಚ್ ಸಂಸ್ಥೆಗೆ ನಿರಾಸೆ

|

Updated on: Aug 13, 2024 | 9:12 PM

Vande Bharat train manufacturing: ರೈಲ್ವೆ ಇಲಾಖೆ 2023ರ ಮೇನಲ್ಲಿ 100 ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆಯಲಾಗಿದ್ದ ಟೆಂಡರ್ ಅನ್ನು ಈಗ ರದ್ದುಗೊಳಿಸಿದೆ. ಸಮಾಧಾನವಾಗುವಂತಹ ಬೆಲೆ ಸಿಕ್ಕದ ಹಿನ್ನೆಲೆಯಲ್ಲಿ ಟೆಂಡರ್ ಹಿಂಪಡೆಯಲಾಗಿರುವುದು ತಿಳಿದುಬಂದಿದೆ. ಎರಡು ಕಂಪನಿಗಳು ಮಾತ್ರವೇ ಬಿಡ್ ಸಲ್ಲಿಸಿದ್ದವು. ಈ ಪೈಕಿ ಫ್ರಾನ್ಸ್ ಮೂಲದ ಆಲ್​ಸ್ಟೋಮ್ ಇಂಡಿಯಾ ಒಂದು ಟ್ರೈನ್ ಸೆಟ್​ಗೆ 150.9 ಕೋಟಿ ರೂ ಬೆಲೆ ಹಾಕಿತ್ತು. ಇಲಾಖೆ ಮತ್ತೊಮ್ಮೆ ಬಿಡ್ ಆಹ್ವಾನಿಸುವ ಸಾಧ್ಯತೆ ಇದೆ.

ನೂರು ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆದಿದ್ದ 30,000 ಕೋಟಿ ರೂ ಟೆಂಡರ್ ರದ್ದು; ಫ್ರೆಂಚ್ ಸಂಸ್ಥೆಗೆ ನಿರಾಸೆ
ವಂದೇ ಭಾರತ್ ರೈಲು
Follow us on

ನವದೆಹಲಿ, ಆಗಸ್ಟ್ 13: ನೂರು ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ನಿರ್ವಹಣೆಗೆ ಕಳೆದ ವರ್ಷ ಕರೆಯಲಾಗಿದ್ದ 30,000 ಕೋಟಿ ರೂ ಮೊತ್ತದ ಟೆಂಡರ್ ಅನ್ನು ಭಾರತೀಯ ರೈಲ್ವೇಸ್ ರದ್ದುಗೊಳಿಸಿದೆ. ಟೆಂಡರ್​ನಲ್ಲಿ ಭಾಗಿಯಾಗಿದ್ದ ಎರಡು ಕಂಪನಿಗಳಲ್ಲಿ ಅತಿಕಡಿಮೆಗೆ ಬಿಡ್ ಮಾಡಿದ್ದು ಫ್ರಾನ್ಸ್ ಮೂಲದ ಆಲ್ಸ್​ಟಾಮ್ ಇಂಡಿಯಾ ಸಂಸ್ಥೆ. ಟೆಂಡರ್ ರದ್ದುಗೊಳಿಸಲಾಗಿರುವುದನ್ನು ಈ ಫ್ರೆಂಚ್ ಸಂಸ್ಥೆಯ ಎಂಡಿ ಓಲಿವಿಯರ್ ಲೋಯ್ಸನ್ ಹೇಳಿದ್ದಾರೆ. ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಮತ್ತೆ ಬಿಡ್ ಸಲ್ಲಿಸಿ ವಂದೇ ಭಾರತ್ ರೈಲುಗಳನ್ನು ತಯಾರಿಸುವುದಾಗಿ ಅವರು ಹೇಳಿದ್ದಾರೆ.

ಟೆಂಡರ್ ರದ್ದುಗೊಳಿಸಲು ಅಧಿಕ ಬೆಲೆ ಕಾರಣ

2023ರ ಮೇ 30ರಂದು ಅಲೂಮಿನಿಯಮ್​ನಿಂದ 100 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಐದಾರು ಕಂಪನಿಗಳು ಆಸಕ್ತಿ ತೋರಿದವರಾದರೂ ತಾಂತ್ರಿಕ ಅರ್ಹತೆ ಗಿಟ್ಟಿಸಲು ಹೆಚ್ಚಿನವು ವಿಫಲವಾಗಿದ್ದವು. ಅಂತಿಮವಾಗಿ ಫ್ರಾನ್ಸ್​ನ ಆಲ್​ಸ್ಟೋಮ್ ಇಂಡಿಯಾ ಮತ್ತು ಸ್ವಿಟ್ಜರ್​ಲ್ಯಾಂಡ್ ಮೂಲದ ಸ್ಟಾಡ್ಲರ್ ರೈಲ್ ಸಂಸ್ಥೆ ಮಾತ್ರವೆ ಬಿಡ್ ಸಲ್ಲಿಸಿದ್ದು. ಹೈದರಾಬಾದ್​ನ ಮೇಧಾ ಸರ್ವೋ ಡ್ರೈವ್ಸ್ ಮತ್ತು ಸ್ಟಾಡ್ಲರ್ ರೈಲ್ ಜಂಟಿಯಾಗಿ ಬಿಡ್ ಸಲ್ಲಿಸಿದ್ದವು. ಫ್ರೆಂಚ್ ಕಂಪನಿ ಒಂದು ರೈಲಿಗೆ 150.9 ಕೋಟಿ ರೂ ಬೆಲೆ ಪಟ್ಟಿ ಕೊಟ್ಟಿತ್ತು. ಸ್ವಿಸ್ ಕಂಪನಿ ನಿಗದಿ ಮಾಡಿದ ಬೆಲೆ 170 ರೂ ಆಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ: 111 ಕಿಲೋಮೀಟರ್ ಕನ್ವರ್ ಮಾರ್ಗ ನಿರ್ಮಾಣಕ್ಕಾಗಿ 1 ಲಕ್ಷ ಮರ ಕಡಿಯಲಾಗಿತ್ತೇ?

ಆದರೆ, ರೈಲ್ವೆ ಇಲಾಖೆ ಒಂದು ರೈಲಿಗೆ 140 ಕೋಟಿ ರೂನಂತೆ ಗುತ್ತಿಗೆ ಪಡೆಯುವ ಗುರಿ ಹೊಂದಿದೆ. ಎರಡು ಬಿಡ್​ಗಳಲ್ಲಿ ಅತಿಕಡಿಮೆ ಬೆಲೆ 150 ರೂ ಆಗಿತ್ತು. ಇದು ದುಬಾರಿ ಎನಿಸಿದ್ದರಿಂದ ರೈಲ್ವೆ ಇಲಾಖೆ ಟೆಂಡರ್ ಅನ್ನು ರದ್ದುಗೊಳಿಸಲು ನಿರ್ಧರಿಸಿತು ಎನ್ನಲಾಗಿದೆ.

ಮತ್ತೆ ಹೊಸದಾಗಿ ಬಿಡ್ ಕರೆಯಲು ಇಲಾಖೆ ಸಜ್ಜು

ಕಳೆದ ವರ್ಷ ಕರೆಯಲಾಗಿದ್ದ ಟೆಂಡರ್​ನಲ್ಲಿ ಹೆಚ್ಚು ಕಂಪನಿಗಳು ತಾಂತ್ರಿಕ ಕಾರಣಕ್ಕೆ ಬಿಡ್ ಸಲ್ಲಿಸಲು ಆಗಿರಲಿಲ್ಲ. ಟ್ರೈನ್ ತಯಾರಿಸುವ ಸಂಸ್ಥೆ ಆರ್ ಅಂಡ್ ಡಿ ಘಟಕ ಹೊಂದಿರಬೇಕು. ವರ್ಷಕ್ಕೆ ಕನಿಷ್ಠ ಐದು ಟ್ರೈನ್ ಸೆಟ್​ಗಳನ್ನು ಹೊಂದಿಸುವ ಸಾಮರ್ಥ್ಯ ಇರಬೇಕು ಎಂಬುದು ತಾಂತ್ರಿಕ ಅರ್ಹತೆಗೆ ಇರುವ ಮಾನದಂಡ.

ರಷ್ಯಾದ ಟ್ರಾನ್ಸ್​ಮ್ಯಾಷ್ ಹೋಲ್ಡಿಂಗ್ ಮತ್ತು ರೈಲ ವಿಕಾಸ್ ನಿಗಮ್; ಜರ್ಮನಿಯ ಸೀಮನ್ಸ್ ಮತ್ತು ಬೆಮೆಲ್ ಮೊದಲಾದ ಕಂಪನಿಗಳು ಕಳೆದ ವರ್ಷದ ಬಿಡ್ಡಿಂಗ್​ನಲ್ಲಿ ವಿಫಲಗೊಂಡಿದ್ದವು. ಈಗ ಅವುಗಳಿಗೆ ತಾಂತ್ರಿಕ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಕಾಲಾವಕಾಶ ಕೊಟ್ಟು ಬಿಡ್ಡಿಂಗ್ ಸಲ್ಲಿಸುವಂತೆ ರೈಲ್ವೆ ಇಲಾಖೆ ಉತ್ತೇಜಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಹುಟ್ಟಿಸಿದವರ ಅಹಂ..! ಪೇಟಿಎಂ, ಬೈಜುಸ್ ವೈಫಲ್ಯಕ್ಕೆ ಕಾರಣ ಹುಡುಕಿದ ಸಂಜಯ್ ನಾಯರ್

ಅಲೂಮಿನಿಯನ್ ಟ್ರೈನ್ ಯಾಕೆ?

ಹಿಂದೆ ಸ್ಟೈನ್ಲೆಸ್ ಸ್ಟೀಲ್​ನ 200 ವಂದೇ ಭಾರತ್ ಟ್ರೈನ್​ಗಳ ತಯಾರಿಕೆಗೆ ಗುತ್ತಿಗೆ ಕೊಡಲಾಗಿತ್ತು. ಇದರ ಒಂದು ಟ್ರೈನ್ ಸೆಟ್ ತಯಾರಿಕೆಗೆ 160 ಕೋಟಿ ರೂಗೂ ಹೆಚ್ಚು ವೆಚ್ಚವಾಗುತ್ತದೆ. ಅಲೂಮಿನಿಯಮ್​ನ ಟ್ರೈನುಗಳು ಹೆಚ್ಚು ಹಗುರವಾಗಿರುತ್ತವೆ. ಹೆಚ್ಚು ವೇಗದಲ್ಲಿ ಹೋಗಬಲ್ಲುವು.

ಹೊಸ ವಂದೇ ಭಾರತ್ ರೈಲುಗಳು ಬಹಳ ಕಡಿಮೆ ಸಮಯದಲ್ಲಿ ಗರಿಷ್ಠ ವೇಗ ಪಡೆದುಕೊಳ್ಳುವಷ್ಟು ಸಮರ್ಥವಾಗಿರಲಿವೆ. ಗಂಟೆಗೆ 160 ಕಿಮೀ ವೇಗ ಪಡೆಯಲು ಕೇವಲ 140 ಸೆಕೆಂಡ್ ಸಾಕಾಗುತ್ತದೆ. ಈ ರೈಲುಗಳನ್ನು ನಿಲ್ಲಿಸಲು ಆಗುವ ಅವಧಿ ಕೂಡ ಬಹಳ ಕಡಿಮೆ ಹಿಡಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ