ನವದೆಹಲಿ, ಆಗಸ್ಟ್ 13: ಭಾರತದ ಸ್ಟಾರ್ಟಪ್ ಜಗತ್ತಿನಲ್ಲಿ ನಕ್ಷತ್ರದಂತೆ ಮಿಂಚಿ ಹಾಗೆಯೇ ಮಂದಗೊಂಡ ಕಂಪನಿಗಳೆಂದರೆ ಅದು ಪೇಟಿಎಂ ಮತ್ತು ಬೈಜುಸ್. ಪೇಟಿಎಂ ಸಂಸ್ಥೆ ನಾನಾ ಅಡೆತಡೆ, ಸಂಕಷ್ಟಗಳ ಮಧ್ಯೆ ಭಾರವಾದ ಹೆಜ್ಜೆಗಳನ್ನು ಇಟ್ಟು ಸಾಗುತ್ತಿದೆ. ಬೈಜುಸ್ ಸಂಕಷ್ಟಗಳ ಹೊರೆಗೆ ಬಹುತೇಕ ಕುಸಿದುಹೋಗಿದೆ. ಇವೆರಡು ಕಂಪನಿಗಳು ಒಂದು ಕಾಲದಲ್ಲಿ ಸ್ಟಾರ್ಟಪ್ಗಳಿಗೆ ಮಾದರಿಯಾಗಿದ್ದವು. ಕಂಪನಿ ಕಟ್ಟಿದರೆ ಹೀಗೆ ಕಟ್ಟಬೇಕು ಎಂದು ಬಹಳಷ್ಟು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿತ್ತು. ಈಗ ಹೆಚ್ಚೂಕಡಿಮೆ ಬಾಗಿಲು ಮುಚ್ಚುವ ಸ್ಥಿತಿಗೆ ಬರಲು ಏನು ಕಾರಣ? ಖ್ಯಾತ ಹೂಡಿಕೆದಾರ ಮತ್ತು ಸೋರಿನ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆಯ ಸಂಸ್ಥಾಪಕ ಸಂಜಯ್ ನಾಯರ್ ಅವರು ಇದಕ್ಕೆ ಒಂದೆರಡು ಕಾರಣಗಳನ್ನು ನೀಡಿದ್ದಾರೆ.
ಅತಿಯಾದ ಆತ್ಮವಿಶ್ವಾಸ ಹೊಂದಿರುವುದು ಮತ್ತು ವಿಮರ್ಶಾತ್ಮಕ ಸಲಹೆಗಳನ್ನು ಸ್ವೀಕರಿಸುವ ಮನೋಭಾವ ಹೊಂದಿಲ್ಲದೇ ಇರುವುದು ಈ ಎರಡು ಸ್ವಭಾವಗಳು ಈ ಕಂಪನಿಗಳ ಸಂಸ್ಥಾಪಕರಲ್ಲಿ ಇವೆ. ಇದು ಇವುಗಳ ಈ ದೀನ ಸ್ಥಿತಿಗೆ ಕಾರಣ ಎಂದು ನಾಯರ್ ಅವರು ಮನಿಕಂಟ್ರೋಲ್ನ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
‘ಸಂಸ್ಥಾಪಕರಿಗೆ ಸಹಜವಾಗಿಯೇ ಒಂದು ರೀತಿಯ ಆತ್ಮವಿಶ್ವಾಸ ಬಂದು ಬಿಟ್ಟಿರುತ್ತದೆ. ನನಗೆ ಎಲ್ಲಾ ಗೊತ್ತು. ನನ್ನ ತೀರ್ಮಾನವೇ ಅಂತಿಮ. ನನ್ನನ್ನು ಪ್ರಶ್ನಿಸಬೇಡಿ. ನನಗೆ ಸವಾಲು ಹಾಕಬೇಡಿ… ಇಂಥ ಧೋರಣೆಗಳು ಬಂದಿರುತ್ತದೆ,’ ಎಂದು ಪೇಟಿಎಂ ಮತ್ತು ಬೈಜೂಸ್ ಹಿನ್ನಡೆಗೆ ಸಂಜಯ್ ನಾಯರ್ ಕಾರಣಗಳನ್ನು ಹುಡುಕಿದ್ದಾರೆ
ಈ ರೀತಿಯ ಧೋರಣೆಯು ಒಬ್ಬ ವ್ಯಕ್ತಿಯ ಶಕ್ತಿಯನ್ನು ಕುಗ್ಗಿಸಬಹುದು. ನೀವು ಕೇಳಿಸಿಕೊಳ್ಳುತ್ತೀರಿ, ಆದರೆ ಸ್ವೀಕರಿಸುವುದಿಲ್ಲ. ಇಂಥ ಸಂಸ್ಥಾಪಕರ ಸುತ್ತ ಇರುವ ವ್ಯವಸ್ಥೆಯು ಇವರಿಗೆ ಕೆಟ್ಟ ವರ್ತಮಾನ ಕೊಡಲು ಬಯಸುವುದಿಲ್ಲ. ಅವರನ್ನು ಪ್ರಶ್ನಿಸಲು ಹೋಗುವುದಿಲ್ಲ ಎಂದು ಹೇಳುವ ಸಂಜಯ್ ನಾಯರ್, ಕಂಪನಿಗಳ ಸಂಸ್ಥಾಪಕರು ಮತ್ತು ಹೂಡಿಕೆದಾರರ ಮಧ್ಯೆ ಮುಕ್ತ ಸಂವಹನ ಇರುವ ಅಗತ್ಯತೆ ಇದೆ ಎಂದಿದ್ದಾರೆ.
ಸಂಜಯ್ ನಾಯರ್ ಅವರು ಪೇಟಿಎಂ ಮತ್ತು ಬೈಜೂಸ್ ಹೆಸರನ್ನು ನೇರವಾಗಿ ಎತ್ತಲಿಲ್ಲ. ಪೇಟಿಎಂ, ಬೈಜೂಸ್ನಂತಹ ಸ್ಟಾರ್ ಸ್ಟಾರ್ಟಪ್ಗಳ ಹಿನ್ನಡೆಗೆ ಕಾರಣವೇನೆಂದು ಕೇಳಲಾದ ಪ್ರಶ್ನೆಗೆ ಅವರು ಮೇಲಿನ ಕಾರಣಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಅದಾನಿ ಗ್ರೂಪ್ನ ಸಾಲ ಎಷ್ಟಿದೆ, ಯಾವ್ಯಾವ ಬ್ಯಾಂಕುಗಳು ಎಷ್ಟು ಸಾಲ ಕೊಟ್ಟಿವೆ? ಇಲ್ಲಿದೆ ವಿವರ
ಬೈಜೂಸ್ ಅನ್ನು ಬೈಜು ರವೀಂದ್ರನ್ ಸ್ಥಾಪನೆ ಮಾಡಿದ್ದರು. ಇವತ್ತು ಇದು ಸಾಲದ ಸುಳಿಗೆ ಸಿಕ್ಕಿ ವಿಲವಿಲ ಒದ್ದಾಡುತ್ತಿದೆ. ಪೇಟಿಎಂ ಸ್ಥಾಪನೆ ಮಾಡಿದ್ದು ವಿಜಯ್ ಶೇಖರ್ ಶರ್ಮ. ಡಿಜಿಟಲ್ ಇಂಡಿಯಾಗೆ ಭವ್ಯ ಉದಾಹರಣೆಯಾಗಿದ್ದ ಪೇಟಿಎಂ ಈಗ ಲಾಭ ಕಂಡುಕೊಳ್ಳಲು ಹೆಣಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ