ಒಂದೂವರೆ ಲಕ್ಷ ರೂನಲ್ಲಿ ಸ್ವಲ್ಪವೂ ಉಳಿಸಲು ಆಗಲ್ವ? ಮೂರು ಜನರ ಕುಟುಂಬಕ್ಕೆ ಎಲ್ಲಿ ಸಾಲುತ್ತೆ ಈ ಸಂಬಳ? ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ
Investor Saurav Dutta X post: ಮೂರು ಜನರ ಕುಟುಂಬಕ್ಕೆ ವರ್ಷಕ್ಕೆ 25 ಲಕ್ಷ ರೂ ಆದಾಯ ಸಾಕಾಗುವುದಿಲ್ಲ. ಹೂಡಿಕೆ ಮಾಡಲು ಹಣ ಉಳಿಸಲು ಆಗುವುದಿಲ್ಲ ಎಂದು ಹಣಕಾಸು ಸಲಹೆಗಾರರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಮನೆ ಬಾಡಿಗೆ, ಇಎಂಐ, ಒಟಿಟಿ, ಆಸ್ಪತ್ರೆ, ಎಮರ್ಜೆನ್ಸಿ, ಹೋಟೆಲ್ ಊಟ ಇತ್ಯಾದಿಗಳಿಗೆ ಎಲ್ಲವೂ ಖರ್ಚಾಗಿ ಹೋಗುತ್ತೆ ಎನ್ನುವುದು ಸೌರವ್ ದತ್ತ ವಾದ. ಅವರ ಈ ಪೋಸ್ಟ್ಗೆ ನಾನಾ ಪ್ರತಿಕ್ರಿಯೆಗಳು ಬಂದಿದ್ದು, ಹೆಚ್ಚಿನವರು ಟ್ರೋಲ್ ಮಾಡಿದ್ದಾರೆ.
ಬೆಂಗಳೂರಿನಂಥ ನಗರದಲ್ಲಿ ಬದುಕಬೇಕಾದರೆ ಎಷ್ಟು ಆದಾಯ ಬರಬೇಕು? ಅವರವರ ಆದ್ಯತೆ, ಅಭಿರುಚಿ, ಜೀವನಶೈಲಿಗೆ ಅನುಗುಣವಾಗಿ ಖರ್ಚುವೆಚ್ಚಗಳು ಇರುತ್ತವೆ. ಒಂದು ಸಾಮಾನ್ಯ ಕುಟುಂಬದ ನಿರ್ವಹಣೆಗೆ ವರ್ಷಕ್ಕೆ 25 ಲಕ್ಷ ರೂ ಸಾಕಾಗಲ್ಲ ಎಂದು ಹೂಡಿಕೆದಾರರೊಬ್ಬರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಇದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಮೂರು ಜನರ ಕುಟುಂಬಕ್ಕೆ ಅದ್ಯಾವ್ಯಾವ ಖರ್ಚುಗಳು ಬರಬಹುದು, ಅದಕ್ಕೆ ಈ ಹಣ ಯಾತಕ್ಕೆ ಸಾಲುತ್ತೆ, ಹೂಡಿಕೆ ಮಾಡಲು ಇನ್ನೆಲ್ಲಿ ಉಳೀಯುತ್ತೆ ಹಣ ಎಂದು ಸೌರವ್ ದತ್ತ ಎಂಬುವವರು ತಮ್ಮ ಪೋಸ್ಟ್ನಲ್ಲಿ ಬಿಡಿಬಿಡಿಯಾಗಿ ವಿವರಿಸಿದ್ದಾರೆ.
‘ಒಂದು ಕುಟುಂಬ ನಿರ್ವಹಿಸಲು ವರ್ಷಕ್ಕೆ 25 ಲಕ್ಷ ರೂ ಸಂಬಳ ಬಹಳ ಕಡಿಮೆ ಆಯಿತು. 25 ಲಕ್ಷ ಎಂದರೆ ತಿಂಗಳಿಗೆ ಕೈಗೆ ಸಿಗುವುದು ಒಂದೂವರೆ ಲಕ್ಷ ರೂ. ಮೂರು ಜನರ ಕುಟುಂಬಕ್ಕೆ ಮನೆ ಬಾಡಿಗೆ, ಇಎಂಐ ಹಾಗೂ ಇತರ ಅಗತ್ಯ ಖರ್ಚುಗಳಿಗೆ 1 ಲಕ್ಷ ರೂ ಆಗುತ್ತದೆ. ಹೊರಗೆ ತಿನ್ನಲು, ಒಟಿಟಿ ಸಬ್ಸ್ಕ್ರಿಪ್ಷನ್, ಪ್ರವಾಸಗಳಿಗೆ 25,000 ರೂ ಆಗುತ್ತದೆ. ವೈದ್ಯಕೀಯ ಹಾಗೂ ಇತರ ತುರ್ತು ವೆಚ್ಚಗಳಿಗೆ 25,000 ರೂ ಆಗುತ್ತದೆ. ಹೂಡಿಕೆ ಮಾಡಲು ಏನೂ ಉಳಿಯುವುದಿಲ್ಲ,’ ಎಂದು ಸೌರವ್ ದತ್ತ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಹುಟ್ಟಿಸಿದವರ ಅಹಂ..! ಪೇಟಿಎಂ, ಬೈಜುಸ್ ವೈಫಲ್ಯಕ್ಕೆ ಕಾರಣ ಹುಡುಕಿದ ಸಂಜಯ್ ನಾಯರ್
ಸೌರವ್ ದತ್ತ ಅವರ ಈ ಪೋಸ್ಟ್ಗೆ ಬಹಳಷ್ಟು ಜನರು ರಿಯಾಕ್ಟ್ ಮಾಡಿದ್ದು, ಹೆಚ್ಚಿನವರು ಟೀಕಾ ಪ್ರಹಾರವನ್ನೇ ನಡೆಸಿ ಟ್ರೋಲ್ ಮಾಡಿದ್ದಾರೆ. ಸುಮ್ಮನೆ ಪ್ರಚಾರಕ್ಕೆ ಈ ಪೋಸ್ಟ್ ಹಾಕಿದ್ದೀರಿ ಎಂದು ಹಲವು ಟೀಕಿಸಿದ್ದಾರೆ. ವೆಚ್ಚದ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ ಎಂದು ಸೌರವ್ ದತ್ತ ತಮ್ಮ ಪ್ರತಿಕ್ರಿಯೆಯೊಂದರಲ್ಲಿ ಸಲಹೆ ನೀಡಿದ್ದಾರೆ.
25LPA is too little for running a family.
25 LPA = in hand 1.5L per month.
Family of 3 would spend 1L on essentials, EMI / rent.
25K for eating out, movies, OTT, day trips.
25K for emergency and medical.
Nothing left to invest.
— Sourav Dutta (@Dutta_Souravd) August 11, 2024
ಕೂತು ತಿನ್ನೋರಿಗೆ ಕುಡಿಕೆ ಹೊನ್ನೂ ಸಾಲದು…
ಈ ಮೇಲಿನದು ಗಾದೆ ಮಾತು. ಅಪ್ಪಟ ಹಣಕಾಸು ಸಲಹೆ ಅದು. ಲಕ್ಷ್ಮೀ ಒಲಿಯಬೇಕೆಂದರೆ ದುಡಿಯುತ್ತಿರಬೇಕು, ಆದಾಯ ಹರಿದುಬರುತ್ತಿರಬೇಕು. ಸಂಪಾದನೆ ಎಷ್ಟು ಮುಖ್ಯವೋ ಆ ಸಂಪಾದನೆಯಲ್ಲಿ ಎಷ್ಟು ಹಣ ಉಳಿಸುತ್ತೇವೆ ಎಂಬುದು ಅಷ್ಟೇ ಮುಖ್ಯ. ಅಂತೆಯೇ, ಪ್ರತಿಯೊಂದು ಉಳಿತಾಯ ಹಣವೂ ಗಳಿಕೆಗೆ ಸಮ ಎನ್ನುವುದು.
ಇದನ್ನೂ ಓದಿ: ನಿಮ್ಮ 10 ಲಕ್ಷ ರೂ ಸಂಬಳಕ್ಕೆ ಪೂರ್ಣ ಟ್ಯಾಕ್ಸ್ ಉಳಿಸುವುದು ಹೇಗೆ? ಇಲ್ಲಿದೆ ಐಡಿಯಾ
ಆದಾಯ ಮತ್ತು ಉಳಿತಾಯದಷ್ಟೇ ಮುಖ್ಯವಾದ ಮೂರನೇ ಸಂಗತಿ ಎಂದರೆ ಅದು ಹೂಡಿಕೆ. ಹಣದುಬ್ಬರ ಹೆಚ್ಚಿರುವ ಈ ದಿನಗಳಲ್ಲಿ ವರ್ಷಕ್ಕೆ ಶೇ. 7ಕ್ಕಿಂತಲೂ ಹೆಚ್ಚು ದರದಲ್ಲಿ ಹಣ ಬೆಳೆಸಬಲ್ಲಂತಹ ಸಾಧನಗಳಲ್ಲಿ ಹೂಡಿಕೆ ಆಗಬೇಕು.
ಒಟ್ಟಾರೆ, ಆದಾಯ ಹೆಚ್ಚಾಗಬೇಕು, ಉಳಿತಾಯ ಹೆಚ್ಚಾಗಬೇಕು, ಹೂಡಿಕೆ ಹೆಚ್ಚಾಗಬೇಕು. ಈ ತ್ರಿ ಸೂತ್ರಗಳನ್ನು ಪಾಲಿಸಿದರೆ ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ