AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಮೇಡ್ ಇನ್ ಇಂಡಿಯಾ ಮಾರುತಿ ಕಾರು

Maruti Suzuki Fronx car: ಭಾರತದ ಮಾರುತಿ ಸುಜುಕಿ ಸಂಸ್ಥೆ ತಯಾರಿಸುವ ಫ್ರಾಂಕ್ಸ್ ಮಾಡಲ್ ಕಾರುಗಳು ಜಪಾನ್ ಮಾರುಕಟ್ಟೆಗೆ ರಫ್ತಾಗುತ್ತಿವೆ. ಗುಜರಾತ್​ನಿಂದ 1,600 ಫ್ರಾಂಕ್ಸ್ ಕಾರುಗಳ ಮೊದಲ ಕನ್ಸೈನ್ಮೆಂಟ್ ಜಪಾನ್​ಗೆ ಸಾಗಣೆ ಆಗುತ್ತಿದೆ. 2016ರಲ್ಲಿ ಬಲೇನೋ ಕಾರನ್ನು ಜಪಾನ್​ಗೆ ಕಳುಹಿಸಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿಯ ಕಾರೊಂದು ಜಪಾನ್​ಗೆ ರಫ್ತಾಗುತ್ತಿರುವುದು.

ಜಪಾನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಮೇಡ್ ಇನ್ ಇಂಡಿಯಾ ಮಾರುತಿ ಕಾರು
ಮಾರುತಿ ಸುಜುಕಿ ಫ್ರಾಂಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2024 | 2:49 PM

Share

ನವದೆಹಲಿ, ಆಗಸ್ಟ್ 13: ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಹೊಸ ಎಸ್​ಯುವಿ ಕಾರ್ ಆದ ಫ್ರಾಂಕ್ಸ್ (Maruti Suzuki Fronx) ಅನ್ನು ಜಪಾನ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಗುಜರಾತ್​ನಲ್ಲಿರುವ ಮಾರುತಿ ಸುಜುಕಿ ಘಟಕದಲ್ಲಿ ತಯಾರಾದ ಫ್ರಾಂಕ್ಸ್ ಕಾರುಗಳನ್ನು ಜಪಾನ್​ಗೆ ಕಳುಹಿಸುವ ಕಾರ್ಯ ಇಂದಿನಿಂದ ನಡೆಯುತ್ತಿದೆ. ಮೊದಲ ಪ್ಯಾಕೇಜ್ ಆಗಿ 1,600 ಮಾರುತಿ ಫ್ರಾಂಕ್ಸ್ ಕಾರುಗಳು ಗುಜರಾತ್​ನ ಪಿಪವಾವ್ ಬಂದರಿನಿಂದ ಜಪಾನ್​ಗೆ ಹೊರಡುತ್ತಿವೆ. ಅಂತಾರಾಷ್ಟ್ರೀಯವಾಗಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರುಗಳ ಮಾರಾಟ ಈ ಮೊದಲೇ ನಡೆಯುತ್ತಿದೆಯಾದರೂ ಜಪಾನ್ ಮಾರುಕಟ್ಟೆಗೆ ಹೋಗುತ್ತಿರುವುದು ಇದೇ ಮೊದಲು. ಇದರಲ್ಲಿ ವಿಶೇಷತೆ ಎಂದರೆ, ಜಪಾನೀಯರು ಗುಣಮಟ್ಟಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ. ಇಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರುಗಳ ರಫ್ತಿಗೆ ಅನುಮತಿ ಸಿಕ್ಕಿರುವುದೂ ಕೂಡ ಗಮನಾರ್ಹದ ಸಂಗತಿ.

ಮಾರುತಿ ಸುಜುಕಿಯಿಂದ ಜಪಾನ್​ಗೆ ರಫ್ತಾಗುತ್ತಿರುವುದು ಇದು ಎರಡನೇ ಕಾರು. 2016ರಲ್ಲಿ ಬಲೇನೋ ಕಾರನ್ನು ಜಪಾನ್ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಎಂಟು ವರ್ಷದ ಬಳಿಕ ಮತ್ತೊಂದು ಕಾರು ಜಪಾನ್​ಗೆ ಹೋಗುತ್ತಿದೆ. ಫ್ರಾಂಕ್ಸ್ ಜಪಾನ್​ಗೆ ರಫ್ತಾಗುತ್ತಿರುವ ಮಾರುತಿ ಸುಜುಕಿಯ ಮೊದಲ ಎಸ್​ಯುವಿ ಕಾರು.

ಇದನ್ನೂ ಓದಿ: ಅದಾನಿ ಗ್ರೂಪ್​ನ ಸಾಲ ಎಷ್ಟಿದೆ, ಯಾವ್ಯಾವ ಬ್ಯಾಂಕುಗಳು ಎಷ್ಟು ಸಾಲ ಕೊಟ್ಟಿವೆ? ಇಲ್ಲಿದೆ ವಿವರ

ಜಪಾನ್ ದೇಶದ ಸುಜುಕಿ ಕಾರ್ಪೊರೇಶನ್ ಸಂಸ್ಥೆ ಮಾರುತಿ ಸುಜುಕಿಯಲ್ಲಿ ಹೆಚ್ಚಿನ ಪಾಲು ಹೊಂದಿದೆ. ಜಪಾನ್ ಮಾರುಕಟ್ಟೆಯಲ್ಲಿ ಸುಜುಕಿ ಕಾರುಗಳ ಪಾರಮ್ಯ ಇದೆಯಾದರೂ ಅವುಗಳು ಸ್ಥಳೀಯವಾಗಿ ಉತ್ಪಾದನೆಯಾಗುತ್ತವೆ. ಭಾರತದ ಮಾರುತಿ ಸುಜುಕಿ ಘಟಕಗಳಿಂದ ತಯಾರಾಗುವ ಕಾರುಗಳು ಜಪಾನ್ ಮಾರುಕಟ್ಟೆ ಪ್ರವೇಶಿಸುವುದು ವಿರಳ. ಈಗ ಫ್ರಾಂಕ್ಸ್ ಕಾರುಗಳು ಜಪಾನೀಯರಿಗೆ ಸಿಗಲಿದ್ದು, ಮಾರುತಿ ಸುಜುಕಿಯ ಗುಣಮಟ್ಟಕ್ಕೆ ಅಗ್ನಿಪರೀಕ್ಷೆ ಕಾದಿದೆ.

ಕಳೆದ ವರ್ಷ (2023) ಭಾರತದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಮೊದಲಿಗೆ ಪರಿಚಯವಾಗಿದೆ. ಇದರ ಆನ್​ರೋಡ್ ಪ್ರೈಸ್ 9 ಲಕ್ಷ ರೂನಿಂದ 16 ಲಕ್ಷ ರೂವರೆಗೆ ಇದೆ. ಒಂದು ವರ್ಷದೊಳಗೆ ಒಂದು ಲಕ್ಷಕ್ಕೂ ಹೆಚ್ಚು ಮಾರಾಟ ಆಗಿದೆ. ಭಾರತದಲ್ಲಿ ಅತಿಬೇಗನೇ ಒಂದು ಲಕ್ಷ ಕಾರುಗಳು ಮಾರಾಟವಾದ ದಾಖಲೆ ಮಾರುತಿ ಫ್ರಾಂಕ್ಸ್​ಗೆ ಸಿಗುತ್ತದೆ.

ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ

ಮೆಕ್ಸಿಕೋ ಇತ್ಯಾದಿ ಲ್ಯಾಟಿನ್ ಅಮೆರಿಕನ್ ಪ್ರದೇಶ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೂ ಫ್ರಾಂಕ್ಸ್ ರಫ್ತಾಗುತ್ತಿದೆ. ಇಲ್ಲಿಯವರೆಗೆ ಭಾರತವೂ ಸೇರಿ ಜಾಗತಿಕವಾಗಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರುಗಳು ಮಾರಾಟವಾಗಿರುವುದು ಎರಡು ಲಕ್ಷಕ್ಕೂ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ