
ನವದೆಹಲಿ, ಜೂನ್ 9: ಎಲ್‌ಪಿಜಿ (LPG) ಅನಿಲ ಪೂರೈಕೆಯಲ್ಲಿನ ನಿರ್ಬಂಧ ಮತ್ತು ಸುರಕ್ಷತೆಯ ದೃಷ್ಟಿಯಿಂದ, ರೈಲುಗಳಲ್ಲಿ ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಲು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ (IRCTC) ಮುಂದಾಗಿವೆ. ಇನ್ನು ಮುಂದೆ ರೈಲು ಪ್ರಯಾಣಿಕರಿಗೆ ಒದಗಿಸಲು ಆಹಾರ ತಯಾರಿಕೆಗೆ ಎಲ್‌ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಸುವ ಪ್ರಸ್ತಾಪ ಇದೆ. ಹಾಗೆಯೇ, ರೈಲುಗಳ ಅಡುಗೆ ಕೋಣೆಯಲ್ಲೂ (ಪ್ಯಾಂಟ್ರಿ ರೂಮ್) ಇಂಡಕ್ಷನ್ ಸ್ಟೌವ್‌ಗಳನ್ನು (Induction Stoves) ಬಳಸಲು ನಿರ್ಧರಿಸಲಾಗಿದೆ. ಇದರೊಂದಿಗೆ ವರ್ಷಗಳ ನಂತರ ರೈಲು ಪ್ಯಾಂಟ್ರಿಯಲ್ಲಿ ಅಡುಗೆ ಭಾಗ್ಯ ಮರಳಿದಂತಾಗಿದೆ.
ರೈಲುಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒಯ್ಯುವುದು ಅಗ್ನಿ ಅವಘಡಗಳ ದೃಷ್ಟಿಯಿಂದ ಅಪಾಯಕಾರಿ. ಈ ಕಾರಣಕ್ಕೆ ರೈಲಿನೊಳಗೆ ಎಲ್‌ಪಿಜಿ ಇಡುವುದನ್ನು ಇಲಾಖೆ ನಿರ್ಬಂಧಿಸಿತ್ತು. ಈಗ ಗ್ಯಾಸ್ ಸಿಲಿಂಡರ್ಗೆ ಪರ್ಯಾಯವಾಗಿರುವ ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್ ಬಳಸಲು ಅನುಮತಿಸುತ್ತಿದೆ. ಅಲ್ಲದೆ, ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆಯ ಸಮಸ್ಯೆ ಇರುವುದರಿಂದ ಎಲೆಕ್ಟ್ರಿಕ್ ಸ್ಟೌವ್ಗೆ ಮಣೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್ಲೈನ್ನಲ್ಲೇ ವಾಹನ ಮಾಲಕತ್ವ ವರ್ಗಾವಣೆ
ರೈಲ್ವೆ ಅಡುಗೆ ವ್ಯವಸ್ಥೆಯನ್ನು ಹೆಚ್ಚು ಸುಸ್ಥಿರ ಮತ್ತು ಆಧುನಿಕವನ್ನಾಗಿ ಮಾಡುವ ಉದ್ದೇಶದಿಂದ ಈ ಬದಲಾವಣೆಯನ್ನು ತರಲಾಗುತ್ತಿದೆ. ಆರಂಭಿಕ ಹಂತದಲ್ಲಿ ಆಯ್ಕೆಮಾಡಿದ ಮಾರ್ಗಗಳಲ್ಲಿ ಮತ್ತು ರೈಲುಗಳಲ್ಲಿ ಇಂಡಕ್ಷನ್ ಆಧಾರಿತ ಅಡುಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅಡುಗೆ ಮಾಡುವ ಸ್ಥಳದಲ್ಲಿನ ಬಿಸಿಯನ್ನು ಕಡಿಮೆ ಮಾಡಲು ಮತ್ತು ಅಡುಗೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ಸದ್ಯ ಇರುವ ವ್ಯವಸ್ಥೆಯಲ್ಲಿ ರೈಲುಗಳ ಪ್ಯಾಂಟ್ರಿಯಲ್ಲಿ ಹಲವು ವರ್ಷಗಳಿಂದ ಗ್ಯಾಸ್ ಸ್ಟೌವ್ ಬಳಸಲಾಗುತ್ತಿಲ್ಲ. ಅಡುಗೆ ಕೂಡ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಊಟ ಸರಬರಾಜು ಮಾಡಲು ನಿರ್ದಿಷ್ಟ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರೀಕೃತ ಅಡುಗೆ ಕೋಣೆಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಸ್ಟೇಷನ್ಗಳಲ್ಲಿರುವ ಅಡುಗೆ ಕೋಣೆಗಳಲ್ಲಿ ತಯಾರಾಗುವ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಈಗ ಈ ಸೆಂಟ್ರಲೈಸ್ಡ್ ಕಿಚನ್ಗಳಲ್ಲೂ ಎಲ್‌ಪಿಜಿ ಬದಲು ಇಂಡಕ್ಷನ್ ಸ್ಟೌವ್ ತರುವ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?
ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸುವುದು ಸುಲಭವಾಗಿದ್ದು, ರೈಲುಗಳಲ್ಲಿನ ವಿದ್ಯುತ್ ವ್ಯವಸ್ಥೆಯನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಈ ಬದಲಾವಣೆಯು ಪ್ರಯಾಣಿಕರಿಗೆ ನೀಡುವ ಆಹಾರದ ತಯಾರಿಕೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ