ಚೀನಾದಿಂದ ಬ್ಯಾಕ್ಟೀರಿಯಾ ಬಳಸಿ ಬ್ಯಾಟರಿ; ಭಾರತದಿಂದ ಗಾಳಿಯಿಂದಲೇ ಬ್ಯಾಟರಿ; ಹೊಸ ಆವಿಷ್ಕಾರ?

Zinc-Air battery tech by IISc scientists: ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನ ಸಂಶೋಧಕರು ವಿನೂತನ ಬ್ಯಾಟರಿಯೊಂದನ್ನು ಆವಿಷ್ಕರಿಸಿದ್ದಾರೆ. ಇದು ಜಿಂಕ್ ಮತ್ತು ಆಕ್ಸಿಜನ್ ರಿಯಾಕ್ಷನ್ ಬಳಸಿ ವಿದ್ಯುತ್ ಶಕ್ತಿ ಒದಗಿಸಬಲ್ಲುದು. ಈ ಬ್ಯಾಟರಿಯ ವಿಶೇಷತೆ ಎಂದರೆ, ಇದು ಉಪ ಉತ್ಪನ್ನವಾಗಿ ನೀರಿನ ಬದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಒದಗಿಸುತ್ತದೆ.

ಚೀನಾದಿಂದ ಬ್ಯಾಕ್ಟೀರಿಯಾ ಬಳಸಿ ಬ್ಯಾಟರಿ; ಭಾರತದಿಂದ ಗಾಳಿಯಿಂದಲೇ ಬ್ಯಾಟರಿ; ಹೊಸ ಆವಿಷ್ಕಾರ?
ಬ್ಯಾಟರಿಯ ಸಾಂದರ್ಭಿಕ ಚಿತ್ರ ಇದು...

Updated on: Sep 11, 2025 | 8:13 PM

ಬೆಂಗಳೂರು, ಸೆಪ್ಟೆಂಬರ್ 11: ಚೀನಾ ವಿಜ್ಞಾನಿಗಳು ಬ್ಯಾಕ್ಟಿಯಾಗಳನ್ನು ಬಳಸಿ ಪರಿಸರಕ್ಕೆ ಹೆಚ್ಚು ಹಾನಿಯಾಗದಂತಹ ಬ್ಯಾಟರಿಯನ್ನು ಕಂಡು ಹಿಡಿದಿರುವ ಸುದ್ದಿ ವಿಜ್ಞಾನ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಬೆಂಗಳೂರಿನ ಐಐಎಸ್​ಸಿ ವಿಜ್ಞಾನಿಗಳು (IISc scientists) ಗಾಳಿಯನ್ನು ಬಳಸಿ ಪರಿಸರಸ್ನೇಹಿ ಎನಿಸುವ ಬ್ಯಾಟರಿ ಕಂಡು ಹಿಡಿದಿದ್ದಾರೆ. ಜಿಂಕ್ ಮತ್ತು ಗಾಳಿಯನ್ನು (Zinc-air) ಬಳಸಿ ಇದನ್ನು ತಯಾರಿಸಲಾಗಿದೆ. ಈ ಬ್ಯಾಟರಿ ಪ್ರಕ್ರಿಯೆಯಲ್ಲಿ ಹೊರಬರುವ ಬೈಪ್ರಾಡಕ್ಟ್ ನೀರು ಬದಲು ಹೈಡ್ರೋಜನ್ ಪೆರಾಕ್ಸೈಡ್ (H2O2 – Hydrogen Peroxide) ಆಗಿರುತ್ತದೆ ಎಂಬುದು ಈ ಬ್ಯಾಟರಿಯ ವಿಶೇಷತೆ ಆಗಿದೆ.

ಗಾಳಿಯಿಂದ ಬ್ಯಾಟರಿ ಶಕ್ತಿ ಹೇಗೆ ಸಾಧ್ಯ?

ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನ ಸಂಶೋಧಕಿ ಅನಿಂದಾ ಜೆ ಭಟ್ಟಾಚಾರ್ಯ ಮತ್ತವರ ತಂಡದವರು ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

ಇದನ್ನೂ ಓದಿ: ಎಚ್​ಎಎಲ್​ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು

ಈ ಬ್ಯಾಟರಿಯಲ್ಲಿ ಜಿಂಕ್ ಅನ್ನು ಆನೋಡ್ ಆಗಿಯೂ, ಗಾಳಿಯಲ್ಲಿರುವ ಆಮ್ಲಜನಕವನ್ನು ಕ್ಯಾತೋಡ್ ಆಗಿಯೂ ಬಳಸಿಕೊಳ್ಳಲಾಗುತ್ತದೆ. ಬ್ಯಾಟರಿ ಡಿಸ್​ಚಾರ್ಜ್ ಆದಾಗ ಕ್ಯಾತೋಡ್​ನಲ್ಲಿರುವ ಆಕ್ಸಿಜನ್ ತಗ್ಗುತ್ತದೆ. ಸಾಮಾನ್ಯವಾಗಿ ಇದು ನೀರಾಗಿ ಪರಿವರ್ತಿತವಾಗುತ್ತದೆ. ಐಐಎಸ್​​ಸಿ ವಿಜ್ಞಾನಿಗಳು ಕೆಲ ಕೆಟಲಿಸ್ಟ್​ಗಳನ್ನು ಬಳಸಿ, ಆಕ್ಸಿಜನ್​ನ ಕೆಲ ಭಾಗವು ಹೈಡ್ರೋಜನ್ ಪೆರಾಕ್ಸೈಡ್ ಆಗಿ ಪರಿವರ್ತನೆಗೊಳ್ಳುವಂತೆ ಮಾಡುತ್ತದೆ. ಇದು ಈ ಬ್ಯಾಟರಿಯ ವಿಶೇಷತೆ.

ಹೈಡ್ರೋಜನ್ ಪೆರಾಕ್ಸೈಡ್ ಆದರೆ ಏನು ಉಪಯೋಗ?

ನೀರಿನ ಶುದ್ಧೀಕರಣ, ಜವಳಿ ತ್ಯಾಜ್ಯ ಶುದ್ಧೀಕರಣ ಇತ್ಯಾದಿ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಹೈಡ್ರೋಜನ್ ಪೆರಾಕ್ಸೈಡ್ ಪಡೆಯಲು ಪಲ್ಲಾಡಿಯಂ ಇತ್ಯಾದಿ ದುಬಾರಿ ಮತ್ತು ಅಮೂಲ್ಯ ಲೋಹಗಳ ಅವಶ್ಯಕತೆ ಇರುತ್ತದೆ. ಆದರೆ, ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಬ್ಯಾಟರಿಯು ಪಲ್ಲಾಡಿಯಂ ಬಳಕೆ ಇಲ್ಲದೇ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಪ ಉತ್ಪನ್ನವಾಗಿ ನೀಡುತ್ತದೆ.

ಇದನ್ನೂ ಓದಿ: ಇಲಾನ್ ಮಸ್ಕ್ ಔಟ್; ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ ಲ್ಯಾರಿ ಎಲಿಸನ್

ಈ ಜಿಂಕ್-ಏರ್ ಬ್ಯಾಟರಿ ಮಾರುಕಟ್ಟೆಗೆ ಬಂದಿದೆಯಾ?

ಇಲ್ಲ, ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ನಿರ್ಮಾಣ ಮಾಡುವುದನ್ನು ವಿಜ್ಞಾನಿಗಳು ಇನ್ನೂ ಲ್ಯಾಬ್ ಹಂತದಲ್ಲಿ ಆವಿಷ್ಕರಿಸಿದ್ಧಾರೆ. ಈ ಸಾಧ್ಯತೆ ಇರುವುದು ದೃಢಪಟ್ಟಿದೆ. ಆದರೆ, ಇನ್ನೂ ಸಾಕಷ್ಟು ಪ್ರಾಯೋಗಿಕ ಪರೀಕ್ಷೆಗಳಾಗಬೇಕಿದೆ. ಆದರೆ, ಇದೇನಾದರೂ ಯಶಸ್ವಿಯಾದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರದಲ್ಲಿ ಭಾರತವೂ ಗಂಭೀರ ಆಟಗಾರ ಎನಿಸಿಕೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ