ಇಲಾನ್ ಮಸ್ಕ್ ಔಟ್; ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ ಲ್ಯಾರಿ ಎಲಿಸನ್
Larry Ellison overtakes Elon Musk to become richest person in the world: ಕಳೆದ ಒಂದು ವರ್ಷದಿಂದ ಸತತವಾಗಿ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ್ದ ಇಲಾನ್ ಮಸ್ಕ್ ಈಗ ಆ ಪಟ್ಟ ಕಳೆದುಕೊಂಡಿದ್ದಾರೆ. ಒರೇಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಒರೇಕಲ್ ಷೇರುಬೆಲೆ ಗಣನೀಯವಾಗಿ ಏರಿಕೆಯಾದ ಪರಿಣಾಮ ಎಲಿಸನ್ ಶ್ರೀಮಂತಿಕೆಯೂ ಏರಿದೆ.

ನವದೆಹಲಿ, ಸೆಪ್ಟೆಂಬರ್ 11: ಒರೇಕಲ್ ಕಾರ್ಪೊರೇಶನ್ನ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ (Larry Ellison) ಇದೀಗ ವಿಶ್ವದ ನಂಬರ್ ಒನ್ ಶ್ರೀಮಂತ ವ್ಯಕ್ತಿ (Richest Person) ಎನಿಸಿದ್ದಾರೆ. ತಮ್ಮ ಜೀವಮಾನದಲ್ಲಿ ಲ್ಯಾರಿ ಇದೇ ಮೊದಲ ಬಾರಿಗೆ ಈ ಹೆಗ್ಗಳಿಕೆ ಪಡೆದಿದ್ದಾರೆ. 2021ರಿಂದ ಹೆಚ್ಚಿನ ಅವಧಿ ವಿಶ್ವದ ಅತಿ ಶ್ರೀಮಂತರೆನಿಸಿದ್ದ ಇಲಾನ್ ಮಸ್ಕ್ ಅವರನ್ನು ಲ್ಯಾರಿ ಎಲಿಸನ್ ಹಿಂದಿಕ್ಕಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಲ್ಯಾರಿ ಎಲಿಸನ್ ಅವರ ಒಟ್ಟಾರೆ ಆಸ್ತಿಮೌಲ್ಯ ಬುಧವಾರ 393 ಬಿಲಿಯನ್ ಡಾಲರ್ಗೆ ಏರಿತ್ತು. ಅದೇ ವೇಳೆ, ಇಲಾನ್ ಮಸ್ಕ್ ಅವರ ಶ್ರೀಮಂತಿಕೆ 385 ಬಿಲಿಯನ್ ಡಾಲರ್ನಷ್ಟಿತ್ತು.
81 ವರ್ಷದ ಲ್ಯಾರಿ ಎಲಿಸನ್ ಅವರು ಒರೇಕಲ್ ಕಾರ್ಪೊರೇಶನ್ ಕಂಪನಿಯ ಸಹ-ಸಂಸ್ಥಾಪಕರು. ಅದರ ಸಿಟಿಒ ಮತ್ತು ಛೇರ್ಮನ್ ಕೂಡ ಆಗಿದ್ದಾರೆ. ಕಂಪನಿಯಲ್ಲಿ ಸಾಕಷ್ಟು ಷೇರು ಪಾಲು ಹೊಂದಿದ್ದಾರೆ. ಅವರ ಶ್ರೀಮಂತಿಕೆ ಹೆಚ್ಚಲು ಇದೇ ಕಾರಣ.
ಡಾಟಾಬೇಸ್ ಮ್ಯಾನೇಜ್ಮೆಂಟ್ ಸಾಫ್ಟ್ವೇರ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಒರೇಕಲ್ ಕಂಪನಿಯ ಇತ್ತೀಚಿನ ತ್ರೈಮಾಸಿಕ ವರದಿ ಅಚ್ಚರಿ ಫಲಿತಾಂಶ ನೀಡಿತ್ತು. ನಿರೀಕ್ಷೆಮೀರಿದ ಆದಾಯ ಹೆಚ್ಚಳವಾಗಿತ್ತು. ಅದರ ಪರಿಣಾಮವಾಗಿ ಕಂಪನಿಯ ಷೇರುಬೆಲೆ ಗಣನೀಯವಾಗಿ ಹೆಚ್ಚಿತ್ತು. ಬುಧವಾರ ಒಮ್ಮೆಗೇ ಒರೇಕಲ್ ಷೇರು ಬೆಲೆ ಶೇ. 41ರಷ್ಟು ಹೆಚ್ಚಿತ್ತು.
ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ
ಇದಕ್ಕೂ ಮೊದಲು ಈ ವರ್ಷ ಅದರ ಷೇರುಬೆಲೆ ಶೇ. 45ರಷ್ಟು ಹೆಚ್ಚಿರುವುದನ್ನು ಪರಿಗಣಿಸಿದರೆ, ಈ ವರ್ಷ ಶೇ. 85ಕ್ಕಿಂತಲೂ ಹೆಚ್ಚು ಷೇರುಬೆಲೆ ಎರಿಕೆಯಾಗಿದೆ. ಲ್ಯಾರಿ ಎಲಿಸನ್ ಅವರ ಆಸ್ತಿಮೌಲ್ಯ ಕೂಡ 101 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ತತ್ಪಿರಿಣಮವಾಗಿ ಅವರು ಇಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಅತಿ ಶ್ರೀಮಂತ ಎನಿಸಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್: ಟಾಪ್ 10 ಪಟ್ಟಿ
- ಲ್ಯಾರಿ ಎಲಿಸನ್: 393 ಬಿಲಿಯನ್ ಡಾಲರ್
- ಇಲಾನ್ ಮಸ್ಕ್: 385 ಬಿಲಿಯನ್ ಡಾಲರ್
- ಮಾರ್ಕ್ ಜುಕರ್ಬರ್ಗ್: 264 ಬಿಲಿಯನ್ ಡಾಲರ್
- ಜೆಫ್ ಬೇಜೋಸ್: 252 ಬಿಲಿಯನ್ ಡಾಲರ್
- ಲ್ಯಾರಿ ಪೇಜ್: 210 ಬಿಲಿಯನ್ ಡಾಲರ್
- ಸೆರ್ಗೇ ಬ್ರಿನ್: 196 ಬಿಲಿಯನ್ ಡಾಲರ್
- ಸ್ಟೀವ್ ಬಾಲ್ಮರ್: 172 ಬಿಲಿಯನ್ ಡಾಲರ್
- ಬರ್ನಾಡ್ ಆರ್ನಾಲ್ಟ್: 162 ಬಿಲಿಯನ್ ಡಾಲರ್
- ಜೆನ್ಸೆನ್ ಹುವಾಂಗ್: 154 ಬಿಲಿಯನ್ ಡಾಲರ್
- ಮೈಕೇಲ್ ಡೆಲ್: 151 ಬಿಲಿಯನ್ ಡಾಲರ್
ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?
ಭಾರತೀಯರ ಪೈಕಿ ಮುಕೇಶ್ ಅಂಬಾನಿ ನಂಬರ್ ಒನ್ ಶ್ರೀಮಂತರಾಗಿದ್ದಾರೆ. 97.9 ಬಿಲಿಯನ್ ಡಾಲರ್ ಆಸ್ತಿಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ 21ನೇ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




