ನವದೆಹಲಿ, ಡಿಸೆಂಬರ್ 15: ಕೋವಿಡ್ ನಂತರ ಭಾರತದ ಹೆಚ್ಚಿನ ರಾಜ್ಯಗಳು ತಕ್ಕಮಟ್ಟಿಗೆ ಬೆಳವಣಿಗೆ ಹೊಂದಿವೆ. ಪಿಎಚ್ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ (PHD CCI) ವರದಿ ಪ್ರಕಾರ 2021-22 ಮತ್ತು 2022-23ರ ವೇಳೆ 25 ರಾಜ್ಯಗಳ ಜಿಎಸ್ಡಿಪಿ ಬೆಳವಣಿಗೆ ದರ ಶೇ. 7ಕ್ಕಿಂತಲೂ ಹೆಚ್ಚಿದೆ. 17 ರಾಜ್ಯಗಳು ಶೇ. 9ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಹೊಂದಿವೆ ಎಂಬುದು ಗಮನಾರ್ಹ. ಈ ಸೂಪರ್ ವೇಗಿಗಳಲ್ಲಿ ಕರ್ನಾಟಕವೂ ಇದೆ. ಕರ್ನಾಟಕದ ಜೊತೆಗೆ ಗುಜರಾತ್, ಕೇರಳ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳು ಈ ಎರಡು ವರ್ಷದಲ್ಲಿ ಶೇ. 9ರ ವಾರ್ಷಿಕ ದರದಲ್ಲಿ ಜಿಎಸ್ಡಿಪಿ ಪ್ರಗತಿ ಹೊಂದಿದ ರಾಜ್ಯಗಳಾಗಿವೆ.
ಜಿಎಸ್ಡಿಪಿ ಎಂದರೆ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್. ರಾಜ್ಯವೊಂದರ ಒಟ್ಟಾರೆ ಆಂತರಿಕ ಉತ್ಪನ್ನ. ಜಿಡಿಪಿ ಎಂಬುದು ಇಡೀ ರಾಷ್ಟ್ರದ ಉತ್ಪಾದನೆಯ ಮಾಪಕವಾದರೆ, ಜಿಎಸ್ಡಿಪಿ ಎಂಬುದು ರಾಜ್ಯದ ಉತ್ಪಾದನೆಯ ಮಾಪಕವಾಗಿದೆ.
ಪಿಎಚ್ಡಿಸಿಸಿಐ ವರದಿ ಪ್ರಕಾರ ದೇಶದ ಜಿಡಿಪಿಯ ಖಜಾನೆ ಹೆಚ್ಚಾಗಿ ತುಂಬುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಇದೆ. ಮಹಾರಾಷ್ಟ್ರ, ಗುಜರಾತ್ ಮತ್ಉತ ಕರ್ನಾಟಕ ರಾಜ್ಯಗಳು ಉದ್ಯಮ ಮತ್ತು ತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸಿದ್ದು, ಅದರ ಪರಿಣಾಮವಾಗಿ ದೇಶದ ಜಿಡಿಪಿ ಉಬ್ಬಲು ಪ್ರಮುಖ ಕಾರಣವಾಗಿವೆ.
ಇದನ್ನೂ ಓದಿ: ದೇಶದ 6,44,131 ಹಳ್ಳಿಗಳಲ್ಲಿ ಮೊಬೈಲ್ ಕವರೇಜ್ ಎಷ್ಟಿದೆ? 4ಜಿ ಕನೆಕ್ಟಿವಿಟಿ ಎಷ್ಟು ಗ್ರಾಮಗಳಿಗಿದೆ? ಇಲ್ಲಿದೆ ಡೀಟೇಲ್ಸ್
ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳು ಕೃಷಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ. ದೇಶದ ಆಹಾರ ಭದ್ರತೆ ಸಾಧನೆಗೆ ಈ ರಾಜ್ಯಗಳ ಕೊಡುಗೆ ಗಮನಾರ್ಹ.
ಇನ್ನು, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳು ಕೈಗಾರಿಕೆಗಳ ಬೆಳವಣಿಗೆಗೆ ಮುಖ್ಯ. ಛತ್ತೀಸ್ಗಡ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಈ ಅಗತ್ಯ ಸಂಪನ್ಮೂಲಗಳೂ ಸಾಕಷ್ಟಿವೆ. ಹೀಗಾಗಿ, ಕೈಗಾರಿಕೆಗಳ ಬೆಳವಣಿಗೆಯಲ್ಲಿ ಈ ರಾಜ್ಯಗಳ ಕೊಡುಗೆ ಗಮನಾರ್ಹವಾದುದು ಎಂದು ಪಿಎಚ್ಡಿಸಿಸಿ ವರದಿಯಲ್ಲಿ ಎತ್ತಿ ಹೇಳಲಾಗಿದೆ.
ಕೇರಳ, ರಾಜಸ್ಥಾನ ಮತ್ತು ಗೋವಾ ರಾಜ್ಯಗಳು ಪ್ರವಾಸೋದ್ಯಮದಲ್ಲಿ ಗಟ್ಟಿಯಾಗಿವೆ. ಇದರಿಂದ ವಿದೇಶೀ ವಿನಿಮಯ ಗಳಿಕೆ ಹೆಚ್ಚುತ್ತಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಹೊಂದಿವೆ. ನವೀಕರಣ ಇಂಧನ ಉಪಕ್ರಮಗಳಲ್ಲಿ ರಾಜಸ್ಥಾನ ಮತ್ತು ಗುಜರಾತ್ ಮುಂಚೂಣಿಯಲ್ಲಿವೆ.
ಇದನ್ನೂ ಓದಿ: ನವೆಂಬರ್ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ
ಈಶಾನ್ಯ ರಾಜ್ಯಗಳು ಸಾಧಿಸುತ್ತಿರುವ ಬೆಳವಣಿಗೆ ಬಗ್ಗೆಯೂ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ. ಈ ರಾಜ್ಯಗಳಲ್ಲಿ ಕನೆಕ್ಟಿವಿಟಿ ಸುಧಾರಿಸಿದ್ದು, ಇದರಿಂದ ಇಡೀ ಪ್ರದೇಶವು ವ್ಯಾಪಾರ ಮತ್ತು ಪ್ರವಾಸದ ಕೇಂದ್ರವಾಗಿ ಬದಲಾಗುತ್ತಿದೆ. ಇದರಿಂದ ದೇಶದ ಒಟ್ಟಾರೆ ಆರ್ಥಿಕತೆಗೆ ಪುಷ್ಟಿ ಕೊಟ್ಟಂತಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ