ನವದೆಹಲಿ: ಭಾರತದ ಬಂಡವಾಳ ಮಾರುಕಟ್ಟೆಯ ಪ್ರಮುಖ ಸೂಚಿಗಳೆಂದು ಪರಿಗಣಿಸಲಾದ ಬಿಎಸ್ಇ ಸೆನ್ಸೆಕ್ಸ್ (BSE Sensex) ಮತ್ತು ಎನ್ಎಸ್ಇ ನಿಫ್ಟಿ (NSE Nifty) ಜೂನ್ 28ರ ಬೆಳಗ್ಗೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ. ಅದಾನಿ ಗ್ರೂಪ್ನ ಕಂಪನಿಗಳ ಷೇರು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಉತ್ತಮವಾಗಿ ವಹಿವಾಟು ಕಂಡ ಪರಿಣಾಮ ಈ ಎರಡು ಸೂಚ್ಯಂಕಗಳು ಹೆಚ್ಚಳ ಕಂಡಿವೆ. ಬೆಳಗ್ಗೆ 9:30ರ ಸಮಯದಲ್ಲಿ ನಿಫ್ಟಿ50 ಸೂಚ್ಯಂಕ 18,908.15 ಅಂಕಗಳ ಮಟ್ಟಕ್ಕೆ ಹೋಗಿತ್ತು. ಇದು ಎನ್ಎಸ್ಇ ಇತಿಹಾಸದಲ್ಲೇ ಆ ಸೂಚ್ಯಂಕ ಏರಿದ ಗರಿಷ್ಠ ಮಟ್ಟವಾಗಿದೆ.
ಇನ್ನು ಬಿಎಸ್ಇ ವಿನಿಮಯ ಕೇಂದ್ರದ ಸೆನ್ಸೆಕ್ಸ್ ಸೂಚ್ಯಂಕ ಕೂಡ ಜೂನ್ 28, ಬುಧವಾರದ ಬೆಳಗಿನ ವಹಿವಾಟಿನಲ್ಲಿ ಶೇ. 0.47ರಷ್ಟು ಹೆಚ್ಚಳ ಕಂಡು 63,716 ಅಂಕಗಳ ಮಟ್ಟ ತಲುಪಿತ್ತು. ಇದೂ ಸಹ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರವಾಗಿದೆ.
ನಿಫ್ಟಿ ಸೂಚ್ಯಂಕದಲ್ಲಿರುವ 50 ಕಂಪನಿಗಳ ಪೈಕಿ ಅದಾನಿ ಎಂಟರ್ಪ್ರೈಸಸ್ ಸಂಸ್ಥೆ ಆತಿಹೆಚ್ಚು ಲಾಭ ಮಾಡಿತು. ಈ ಅದಾನಿ ಕಂಪನಿ ಷೇರು ಬುಧವಾರ ಬೆಳಗಿನ ವಹಿವಾಟಿನಲ್ಲಿ ಶೇ. 4.6ರಷ್ಟು ಹೆಚ್ಚಾಗಿದೆ. ಇನ್ನು ವಿಲೀನಕ್ಕೆ ಹೊರಟಿರುವ ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕು ಈ ಎರಡೂ ಕಂಪನಿಗಳ ಷೇರುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ. ಇವೆರಡೂ ಕೂಡ ನಿಫ್ಟಿ ಮತ್ತು ಸೆನ್ಸೆಕ್ಸ್ನಲ್ಲಿ ಲಿಸ್ಟ್ ಆಗಿವೆ. ಎರಡೂ ಸೂಚ್ಯಂಕಗಳ ಏರಿಕೆಯಲ್ಲಿ ಎಚ್ಡಿಎಫ್ಸಿ ಕೊಡುಗೆಯೂ ಇದೆ.
ಸೆನ್ಸೆಕ್ಸ್ ಕಳೆದ ವಾರವೂ ದಾಖಲೆ ಮಟ್ಟಕ್ಕೆ ಹೋಗಿತ್ತು. ಈ ಬಾರಿ ಆ ದಾಖಲೆಯನ್ನೂ ಮೀರಿಸಿ ಬೆಳೆದಿದೆ. ಅದರ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕ ಕೂಡ ಗರಿಷ್ಠ ಮಟ್ಟದಲ್ಲಿವೆ. ಇನ್ನು ವಿವಿಧ ವಲಯವಾರು ಇರುವ 13 ಸೂಚ್ಯಂಕಗಳೂ ಕೂಡ ಉತ್ತಮ ಏರಿಕೆ ಕಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ