Share Market: ಸೋಮವಾರ ಗರಿಗೆದರಿದ ಷೇರುಪೇಟೆ ಮತ್ತು ರುಪಾಯಿ

Sensex and Nifty Go Higher: ಇವತ್ತಿನ ಷೇರುಪೇಟೆಯ ವಹಿವಾಟಿನಲ್ಲಿ ಮಾಧ್ಯಮ, ಪಿಎಸ್​ಯು ಬ್ಯಾಂಕ್, ವಾಹನ, ಬ್ಯಾಂಕ್ ಮತ್ತು ಎಫ್​ಎಂಸಿಜಿ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಐಟಿಸಿ, ಹಿಂದೂಸ್ತಾನ್ ಲಿವರ್, ಭಾರ್ತಿ ಏರ್ಟೆಲ್, ಪವರ್​ಗ್ರಿಡ್, ಹೆಚ್​ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ಹೆಚ್ಚು ಬೆಲೆಗೆ ಬಿಕರಿಯಾಗಿವೆ.

Share Market: ಸೋಮವಾರ ಗರಿಗೆದರಿದ ಷೇರುಪೇಟೆ ಮತ್ತು ರುಪಾಯಿ
ಸಾಂದರ್ಭಿಕ ಚಿತ್ರ
Image Credit source: Money Control

Updated on: Feb 20, 2023 | 10:34 AM

ಮುಂಬೈ: ಕೆಲ ತಜ್ಞರ ನಿರೀಕ್ಷೆಯಂತೆ ಭಾರತದ ಷೇರುಮಾರುಕಟ್ಟೆಗಳು ಅದಾನಿ ಪ್ರಕರಣದ (Adani Hindenburg Row) ಶಾಕ್​ನಿಂದ ಹೊರಬಂದಂತಿವೆ. ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ (Indian Stock Markets) ಎರಡೂ ಕೂಡ ಸೋಮವಾರ ಶುಭಾರಂಭ ಮಾಡಿವೆ. ಸೆನ್ಸೆಕ್ಸ್ 142.87 ಅಂಕಗಳಷ್ಟು (ಶೇ. 0.35) ಹೆಚ್ಚಳ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೂಚ್ಯಂಕವು 61,145.44 ಅಂಕಗಳ ಮಟ್ಟ ತಲುಪಿದೆ. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ ಶೇ. 0.13ರಷ್ಟು (22.75 ಅಂಕಗಳು) ಹೆಚ್ಚಳವಾಗಿ 17,966.95 ಮಟ್ಟ ಮುಟ್ಟಿದೆ. ಷೇರುಪೇಟೆಗಳು ಮಾತ್ರವಲ್ಲ ಫೋರೆಕ್ಸ್ ಮಾರುಕಟ್ಟೆಯಲ್ಲೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ ಬೆಳಗಿನ ವಹಿವಾಟಿನಲ್ಲಿ 16 ಪೈಸೆಯಷ್ಟು ಬಲಗೊಂಡಿದೆ. ಈಗ ಪ್ರತೀ ಡಾಲರ್​ಗೆ 82.66 ಡಾಲರ್ ಇದೆ.

ಇವತ್ತಿನ ಷೇರುಪೇಟೆಯ ವಹಿವಾಟಿನಲ್ಲಿ ಮಾಧ್ಯಮ, ಪಿಎಸ್​ಯು ಬ್ಯಾಂಕ್, ವಾಹನ, ಬ್ಯಾಂಕ್ ಮತ್ತು ಎಫ್​ಎಂಸಿಜಿ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಐಟಿಸಿ, ಹಿಂದೂಸ್ತಾನ್ ಲಿವರ್, ಭಾರ್ತಿ ಏರ್ಟೆಲ್, ಪವರ್​ಗ್ರಿಡ್, ಹೆಚ್​ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ಹೆಚ್ಚು ಬೆಲೆಗೆ ಬಿಕರಿಯಾಗಿವೆ.

ಆರೋಗ್ಯ, ಫಾರ್ಮ ಮತ್ತು ಲೋಹ ಕ್ಷೇತ್ರಗಳ ಕಂಪನಿಗಳ ಷೇರುಗಳು ತುಸು ಹಿನ್ನಡೆ ಕಂಡಿವೆ. ವಿಪ್ರೋ, ಟಾಟಾ ಸ್ಟೀಲ್, ಟೈಟಾನ್ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಮಾರಾಟ ಕಂಡಿವೆ.

ಇದನ್ನೂ ಓದಿ: Meta Verified: ಹಣ ಕೊಟ್ಟು ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಬ್ಲೂ ಟಿಕ್ ಪಡೆದುಕೊಳ್ಳಿ: ಮೆಟಾದಿಂದ ಮಹತ್ವದ ಘೋಷಣೆ

ಷೇರುಪೇಟೆ ತಜ್ಞರು ಇವತ್ತು ಮದರ್​ಸನ್, ಸನ್ ಫಾರ್ಮ, ಹಿಂದೂಸ್ತಾನ್ ಯುನಿಲಿವರ್, ದಿಲೀಪ್ ಬಿಲ್ಡ್​ಕಾನ್, ಸಿಪ್ಲಾ ಮತ್ತು ಝೈಡಸ್ ಕಂಪನಿಗಳ ಷೇರುಗಳ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ. ಅದಾನಿ ಪ್ರಕರಣ ಹೊರಬಂದ ಬಳಿಕ ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆಯನ್ನು ಎಫ್​ಐಐ (ವಿದೇಶೀ ಸಾಂಸ್ಥಿಕ ಹೂಡಿಕೆದಾರರು) ಸಾಕಷ್ಟು ಹಿಂಪಡೆದಿದ್ದವು. ಆದರೆ, ಈಗ ಮತ್ತೆ ಭಾರತದತ್ತ ವಿದೇಶೀ ಹೂಡಿಕೆಗಳು ಬರತೊಡಗಿವೆ. ಅಂತೆಯೇ ಷೇರುಪೇಟೆಯಲ್ಲಿ ಮುಂಬರುವ ದಿನಗಳಲ್ಲೂ ಒಳ್ಳೆಯ ವಹಿವಾಟು ನಡೆಯುವ ನಿರೀಕ್ಷೆ ಇದೆ.

ಕಳೆದ ವಾರ ಷೇರುಪೇಟೆ ಕೆಲವೊಂದಿಷ್ಟು ಏರಿಳಿತ ಕಂಡಿತ್ತು. ಸತತ ಮೂರು ದಿನಗಳ ಕಾಲ ಬೆಳವಣಿಗೆ ಕಂಡಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು, ಶುಕ್ರವಾರ ಸುಮಾರು ಶೇ. 0.50ರಷ್ಟು ಕುಸಿತ ಕಂಡಿದ್ದವು. ಈ ವಾರ ಮತ್ತೆ ಲಯಕ್ಕೆ ಬಂದಿದಂತೆ ತೋರುತ್ತಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

Published On - 10:34 am, Mon, 20 February 23