
ಟೋಕಿಯೋ, ಆಗಸ್ಟ್ 29: ಜಪಾನ್ ದೇಶಕ್ಕೆ ಎರಡು ದಿನದ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ದೇಶಗಳ ಸಹಭಾಗಿತ್ವದಿಂದ ಜಗತ್ತಿಗೆ ಲಾಭ ಆಗುವ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದಾರೆ. ಜಪಾನ್ ಮತ್ತು ಭಾರತ ದೇಶಗಳು ಜಂಟಿಯಾಗಿ ಏಷ್ಯನ್ ಪ್ರದೇಶವನ್ನು ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಯತ್ತ ಕೊಂಡೊಯ್ಯಬಲ್ಲವು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ಚೀನಾ ಎಕನಾಮಿಕ್ ಫೋರಂ ಉದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ (Narendra Modi), ಭಾರತದ ಮಾರುಕಟ್ಟೆ ನೀಡುವ ಅವಕಾಶಗಳನ್ನು ಜಪಾನೀಯರ ಮುಂದೆ ತೆರೆದಿಟ್ಟಿದ್ದಾರೆ.
‘ಭಾರತದಲ್ಲಿ ಬಂಡವಾಳ ಕೇವಲ ಹೆಚ್ಚುವುದಷ್ಟೇ ಅಲ್ಲ, ಅದು ದ್ವಿಗುಣಗೊಳ್ಳುತ್ತದೆ. ಕಳೆದ 11 ವರ್ಷದಲ್ಲಿ ಭಾರತದಲ್ಲಿ ಯಾವ ರೀತಿ ಅಭಿವೃದ್ಧಿ ಮತ್ತು ಪರಿವರ್ತನೆ ಆಗಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಭಾರತದಲ್ಲಿ ರಾಜಕೀಯ ಸ್ಥಿರತೆ, ಪಾರದರ್ಶಕತೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿ ಎನಿಸುತ್ತೇವೆ’ ಎಂದು ಪ್ರಧಾನಿಗಳು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದೊಂದಿಗಿನ ಉದ್ವಿಗ್ನತೆ ನಡುವೆ ಟೋಕಿಯೋಗೆ ಹೋದ ಪ್ರಧಾನಿ ಮೋದಿ ಹೇಳಿದ್ದೇನು?
ಜಪಾನ್ ದೇಶದ ತಂತ್ರಜ್ಞಾನವು ಭಾರತದ ಪ್ರತಿಭೆಯೊಂದಿಗೆ ಸೇರಿದಾಗ ಈ ಶತಮಾನದ ತಂತ್ರಜ್ಞಾನ ಅಭಿವೃದ್ಧಿಗೆ ಪುಷ್ಟಿ ಸಿಗಬಹುದು. ಈ ಸಮಾಗಮವು ಎರಡೂ ದೇಶಗಳಿಗೆ ಪರಸ್ಪರ ಅನುಕೂಲವಾಗಬಲ್ಲುದು. ಅದು ಪರಿಪಕ್ವವಾದ ಜೊತೆಗಾರಿಕೆಯಾಗಬಲ್ಲುದು ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
‘ಆಟೊಮೊಬೈಲ್ ಸೆಕ್ಟರ್ನಲ್ಲಿ ನಮ್ಮ ಜೊತೆಗಾರಿಕೆಯು ಒಳ್ಳೆಯ ಯಶಸ್ಸು ಕಂಡಿದೆ. ಬ್ಯಾಟರಿ, ರೋಬೋಟಿಕ್ಸ್, ಸೆಮಿಕಂಡಕ್ಟರ್ ಮತ್ತು ನೂಕ್ಲಿಯಾರ್ ಎನರ್ಜಿಯಲ್ಲೂ ಇದೇ ಮ್ಯಾಜಿಕ್ ನಾವು ಸೃಷ್ಟಿಸಬಹುದು. ಗ್ಲೋಬಲ್ ಸೌತ್ (ತೃತೀಯ ಜಗತ್ತಿನ ದೇಶಗಳು) ಬೆಳವಣಿಗೆಗೆ ಜಂಟಿಯಾಗಿ ಕೊಡುಗೆ ನೀಡಬಹುದು’ ಎಂದು ಭಾರತದ ಪ್ರಧಾನಿಗಳು ಟೋಕಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಕಳೆದುಕೊಳ್ಳೋದು 0.5, ಗಳಿಸೋದು 2-3 ಪರ್ಸೆಂಟ್: ಪ್ರೊ| ಮಾಧವ್ ನಲಪತ್
ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ಅನ್ನು ಮುಟ್ಟಲು ಭಾರತವೇ ಸ್ಪ್ರಿಂಗ್ ಬೋರ್ಡ್ ಆಗಬಲ್ಲುದು ಎಂದು ಹೇಳಿದ ಅವರು, ಭಾರತದಲ್ಲಿ ನಿರ್ಮಿಸಿ, ವಿಶ್ವಕ್ಕೆ ನಿರ್ಮಿಸಿ ಎಂದು ಕರೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ