ಎಜಿಎಂ ಸಭೆಯಲ್ಲಿ ರಿಲಾಯನ್ಸ್ ಮಹಾ ಶಕ್ತಿ ಅನಾವರಣ; ಎಐ, ದೈತ್ಯ ಗಿಗಾ ಎನರ್ಜಿ ಕಾಂಪ್ಲೆಕ್ಸ್, ದಾಖಲೆಯ ಐಪಿಒ ಇತ್ಯಾದಿ
Mukesh Ambani reveals big plans during RIL's 48th AGM meet: ರಿಲಾಯನ್ಸ್ ಇಂಡಸ್ಟ್ರೀಸ್ನ 48ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಮಾತನಾಡಿ, ತಮ್ಮ ಸಂಸ್ಥೆಯ ಭವಿಷ್ಯದ ಹೆಜ್ಜೆಗಳ ಝಲಕ್ ನೀಡಿದ್ದಾರೆ. ಟೆಸ್ಲಾದ ಗಿಗಾ ಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಾದ ಎನರ್ಜಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿರುವುದನ್ನು ತಿಳಿಸಿದ್ದಾರೆ. ರಿಲಾಯನ್ಸ್ ಜಿಯೋದ ಐಪಿಒ, ರಿಲಾಯನ್ಸ್ ಇಂಟೆಲಿಜೆನ್ಸ್ ಸ್ಥಾಪನೆ ಇತ್ಯಾದಿಯನ್ನೂ ಅವರು ಘೋಷಿಸಿದ್ದಾರೆ.

ಮುಂಬೈ, ಆಗಸ್ಟ್ 29: ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಸಂಸ್ಥೆಯ 48ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಭಾರೀ ದೊಡ್ಡ ಗುರಿ ಮತ್ತು ಯೋಜನೆಗಳನ್ನು ಘೋಷಿಸಲಾಗಿದೆ. ಎಜಿಎಂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ (Mukesh Ambani), ತಮ್ಮ ಕಂಪನಿಯ ಮುಂದಿನ ಯೋಜನೆಗಳನ್ನು ವಿವರಿಸಿದ್ದಾರೆ. ಎಐನಿಂದ ಹಿಡಿದು ಐಪಿಒವರೆಗೆ ಎಲ್ಲವೂ ಕೂಡ ಆಕರ್ಷಕ ಯೋಜನೆಗಳೇ ಇವೆ.
ಟೆಸ್ಲಾದ ಗಿಗಾ ಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದ ಎನರ್ಜಿ ಕಾಂಪ್ಲೆಕ್ಸ್
ಟೆಸ್ಲಾದ ಗೀಗಾ ಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಿರುವ ಗಿಗಾ ಎನರ್ಜಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಗುಜರಾತ್ನ ಜಾಮನಗರ್ನಲ್ಲಿ ನಿರ್ಮಾಣವಾಗುತ್ತಿರುವ ಧೀರೂಭಾಯಿ ಅಂಬಾನಿ ಗಿಗಾ ಎನರ್ಜಿ ಕಾಂಪ್ಲೆಕ್ಸ್ ವಿಶ್ವದಲ್ಲೇ ಅತಿದೊಡ್ಡ ನ್ಯೂ ಎನರ್ಜಿ ಮತ್ತು ಸಾಂಪ್ರದಾಯಿಕ ಎನರ್ಜಿ ಕಾಂಪ್ಲೆಕ್ಸ್ ಎನಿಸಲಿದೆ. ರಿಲಾಯನ್ಸ್ನ ಸೌರ ವಿದ್ಯುತ್ ಘಟಕವು ಸಿಂಗಾಪುರಕ್ಕಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಿರಲಿದೆ. 44 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಗೀಗಾ ಎನರ್ಜಿ ಕಾಂಪ್ಲೆಕ್ಸ್ ನಿರ್ಮಾಣ ಆಗುತ್ತಿದೆ.
ಇದನ್ನೂ ಓದಿ: ಭಾರತ ಜಪಾನ್ ನಡುವೆ ಹಿಂದೆಂದಿಗಿಂತಲೂ ಗಾಢ ವ್ಯಾಪಾರ ಸಂಬಂಧ; 2 ವರ್ಷದಲ್ಲಿ ಏರ್ಪಟ್ಟ ಬರೋಬ್ಬರಿ 170 ಒಪ್ಪಂದಗಳು
ಜಿಯೋ ಐಪಿಒ ಷೇರುಪೇಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ
ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ರಿಲಾಯನ್ಸ್ ಜಿಯೋ ಸಂಸ್ಥೆ ಮುಂದಿನ ವರ್ಷ ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಮುಕೇಶ್ ಅಂಬಾನಿ ಈ ಸಂಗತಿಯನ್ನು ಆರ್ಐಎಲ್ ಎಜಿಎಂ ಸಭೆಯಲ್ಲಿ ತಿಳಿಸಿದ್ದಾರೆ. 2026ರ ಮೊದಲಾರ್ಧದಲ್ಲಿ ರಿಲಾಯನ್ಸ್ ಜಿಯೋ ಐಪಿಒ ಬಿಡುಗಡೆ ಆಗಬಹುದು. ಅದಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡುತ್ತಿರುವುದಾಗಿ ಅಂಬಾನಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ರಿಲಾಯನ್ಸ್ ಜಿಯೋದ್ದು ಅತಿದೊಡ್ಡ ಐಪಿಒ ಆಗಬಹುದು.
ಎಐ ಕ್ಷೇತ್ರಕ್ಕೆ ರಿಲಾಯನ್ಸ್ ದೊಡ್ಡ ಹೆಜ್ಜೆ
ಮುಕೇಶ್ ಅಂಬಾನಿ ಅವರು ಎಜಿಎಂ ಸಭೆಯಲ್ಲಿ ಮಾಡಿದ ಮತ್ತೊಂದು ಮುಖ್ಯ ಘೋಷಣೆ ಎಐ ಸೆಕ್ಟರ್ನದ್ದು. ರಿಲಾಯನ್ಸ್ ಇಂಟೆಲಿಜೆನ್ಸ್ ಎನ್ನುವ ಹೊಸ ಅಂಗ ಸಂಸ್ಥೆಯ ಸ್ಥಾಪನೆಯನ್ನು ಅವರು ಘೋಷಿಸಿದ್ದಾರೆ. ಈ ಸಂಸ್ಥೆಯು ಗೂಗಲ್ ಮತ್ತು ಮೆಟಾ ಜೊತೆ ಸಹಭಾಗಿತ್ವ ಹೊಂದಿರಲಿದೆ.
ಇದನ್ನೂ ಓದಿ: ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ತಲುಪಲು ಭಾರತ ಸ್ಪ್ರಿಂಗ್ಬೋರ್ಡ್ ಇದ್ದಂತೆ: ನರೇಂದ್ರ ಮೋದಿ
ಅಂಬಾನಿ ಅವರ ಎಐ ಅನ್ನು ಕಾಮಧೇನು ಎಂದು ಬಣ್ಣಿಸಿದ್ದಾರೆ. ಮುಂದಿನ ತಲೆಮಾರಿನ ಎಐ ಇನ್ಫ್ರಾಸ್ಟ್ರಕ್ಚರ್ ಅನ್ನು ದೇಶೀಯವಾಗಿ ನಿರ್ಮಿಸಲಾಗುತ್ತದೆ. ಗಿಗಾವ್ಯಾಟ್ ಮಟ್ಟದಲ್ಲಿ ಡಾಟಾ ಸೆಂಟರ್ಗಳನ್ನು ನಿರ್ಮಿಸಲಿದೆ. ಇದಕ್ಕೆ ಹಸಿರು ಇಂಧನದ ವಿದ್ಯುತ್ ಶಕ್ತಿ ಒದಗಿಸಲಾಗುವುದು ಎಂದಿದ್ದಾರೆ. ಜಾಮ್ನಗರದಲ್ಲಿ ಈ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣವಾಗುತ್ತಿದೆ.
ರಿಲಾಯನ್ಸ್ನ ಅತ್ಯುತ್ತಮ ಶಕ್ತಿ ಇನ್ನೂ ಹೊರಹೊಮ್ಮಿಲ್ಲ…
ರಿಲಾಯನ್ಸ್ ಇಂಡಸ್ಟ್ರೀಸ್ನ 48ನೇ ಎಜಿಎಂ ಸಭೆಯಲ್ಲಿ ಅಂಬಾನಿ ಅವರು ತಮ್ಮ ಸಂಸ್ಥೆಯ ಅತ್ಯುತ್ತಮ ಶಕ್ತಿ ಇನ್ನಷ್ಟೇ ಬರಬೇಕಿದೆ ಎಂದು ಹೇಳುವ ಮೂಲಕ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ. 2027ರೊಳಗೆ ರಿಲಾಯನ್ಸ್ ಎರಡು ಪಟ್ಟು ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




