AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಟ್ಯಾರಿಫ್​ನಿಂದ ಕಳೆದುಕೊಳ್ಳೋದು 0.5, ಗಳಿಸೋದು 2-3 ಪರ್ಸೆಂಟ್: ಪ್ರೊ| ಮಾಧವ್ ನಲಪತ್

Prof Madhav Das Nalapat on tariff effect on Indian economy: ಅಮೆರಿಕದ ಟ್ಯಾರಿಫ್​ನಿಂದ ಭಾರತಕ್ಕೆ ತಾತ್ಕಾಲಿಕವಾಗಿ ಹಿನ್ನಡೆಯಾಗಬಹುದು. ಆದರೆ, ದೀರ್ಘಾವಧಿಯಲ್ಲಿ ಲಾಭವೇ ಹೆಚ್ಚು ಎನ್ನಲಾಗುತ್ತಿದೆ. ರಿಪಬ್ಲಿಕ್ ಟಿವಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪ್ರೊ| ಮಾಧವ್ ದಾಸ್ ನಲಪತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಪಾವಧಿಯಲ್ಲಿ ಜಿಡಿಪಿ ದರದಲ್ಲಿ ಶೇ. 0.5 ಕುಂಠಿತವಾಗಬಹುದು. ಆದರೆ, ವಿವಿಧ ಸುಧಾರಣಾ ಕ್ರಮಗಳಿಂದ ದೀರ್ಘಾವಧಿಯಲ್ಲಿ ಲಾಭವಾಗಬಹುದು ಎಂಬುದು ಅವರ ಅನಿಸಿಕೆ.

ಟ್ರಂಪ್ ಟ್ಯಾರಿಫ್​ನಿಂದ ಕಳೆದುಕೊಳ್ಳೋದು 0.5, ಗಳಿಸೋದು 2-3 ಪರ್ಸೆಂಟ್: ಪ್ರೊ| ಮಾಧವ್ ನಲಪತ್
ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2025 | 3:44 PM

Share

ನವದೆಹಲಿ, ಆಗಸ್ಟ್ 29: ಅಮೆರಿಕ ಹೇರಿರುವ ಶೇ. 50 ಟ್ಯಾರಿಫ್​ನಿಂದ ಭಾರತದ ಆರ್ಥಿಕತೆಗೆ ದೊಡ್ಡ ಘಾಸಿಯಾಗಬಹುದು ಎಂದು ಹಲವರು ಶಂಕಿಸುತ್ತಿದ್ದಾರೆ. ಜಿಡಿಪಿ ಬೆಳವಣಿಗೆ ವೇಗದಲ್ಲಿ 2 ಪ್ರತಿಶತ ಕಡಿಮೆ ಆಗಬಹುದು ಎನ್ನುವ ಲೆಕ್ಕಾಚಾರ ಇದೆ. ಆದರೆ ಟ್ಯಾರಿಫ್ ಕ್ರಮವು (US tariffs) ಭಾರತಕ್ಕೆ ಅನುಕೂಲವಾಗಿಯೂ ಪರಿಣಮಿಸಬಹುದು ಎನ್ನುವ ಅಭಿಪ್ರಾಯಗಳೂ ಇದೇ ಸಂದರ್ಭದಲ್ಲಿ ವ್ಯಕ್ತವಾಗುತ್ತಿವೆ. ಜಿಯೋಪೊಲಿಟಿಕ್ಸ್ ವಿಚಾರದಲ್ಲಿ ಪರಿಣತರಾಗಿರುವ ಪ್ರೊ| ಮಾಧವ್ ದಾಸ್ ನಲಪತ್ (Prof Madhav Das Nalapat) ಅವರು ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.

ಸುದ್ದಿ ವಾಹಿನಿಯೊಂದರಲ್ಲಿ ನಡೆದ ಡಿಬೇಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಧವ್ ನಲಪತ್, ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತಕ್ಕೆ ಶೇ. 0.5 ನಷ್ಟ ಆಗಬಹುದು. ಆದರೆ, ಅದರಿಂದ ಶೇ. 2-3ರಷ್ಟು ಜಿಡಿಪಿ ವೃದ್ಧಿಯಾಗಲೂ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ, ಟ್ಯಾರಿಫ್ ಪರಿಣಾಮದಿಂದ ಭಾರತದ ಆರ್ಥಿಕತೆಗೆ ತಾತ್ಕಾಲಿಕ ಹಿನ್ನಡೆಯಾಗಬಹುದಾದರೂ ದೀರ್ಘಾವಧಿಯಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳುವ ಸದವಕಾಶ ಸಿಕ್ಕಿದೆ.

ಇದನ್ನೂ ಓದಿ: ಶಿ ಜಿನ್​ಪಿಂಗ್ ಭಾರತಕ್ಕೆ ಬರೆದಿದ್ದರಾ ರಹಸ್ಯ ಪತ್ರ? ಭಾರತ-ಚೀನಾ ಸಂಬಂಧಕ್ಕೆ ಮರುಜೀವ ಕೊಟ್ಟಿತ್ತಾ ಆ ಪತ್ರ

ಸುಧಾರಣಾ ಕ್ರಮಗಳಿಂದ ಮತ್ತು ಹೊಸ ನೀತಿಗಳಿಂದ ಉನ್ನತಿ ಸಾಧ್ಯ

‘ಕಿರು ಅವಧಿಯಲ್ಲಿ ರಫ್ತು ವ್ಯತ್ಯಯಗಳಿಂದಾಗಿ ಜಿಡಿಪಿ ಬೆಳವಣಿಗೆ ಪ್ರಮಾಣದಲ್ಲಿ ಶೇ. 0.5ರಷ್ಟು ಕಡಿಮೆ ಆಗಬಹುದು. ಆದರೆ, ರಫ್ತು ಮಾರುಕಟ್ಟೆ ವಿಸ್ತರಿಸುವುದು, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಚುರುಕು ಮುಟ್ಟಿಸುವುದು, ದೇಶೀಯವಾಗಿ ಉತ್ಪಾದನೆ ಹೆಚ್ಚಿಸುವುದು, ಈ ಕ್ರಮಗಳಿಂದ ದೀರ್ಘಾವಧಿಯಲ್ಲಿ ಭಾರತ ಶೇ. 2-3ರಷ್ಟು ಹೆಚ್ಚು ಬೆಳವಣಿಗೆ ಹೊಂದಬಹುದು’ ಎಂದು ಯುನೆಸ್ಕೋ ಪೀಸ್​ನ ಛೇರ್ಮನ್ ಕೂಡ ಆಗಿರುವ ಪ್ರೊ| ಮಾಧವ್ ದಾಸ್ ನಲಪತ್ ವಿವರಿಸಿದ್ದಾರೆ.

ತಿರುಗೇಟು ಕೊಡದೆಯೇ ಅಮೆರಿಕಕ್ಕೆ ಪಾಠ ಕಲಿಸುವ ತಂತ್ರ ಭಾರತದ್ದು

ಭಾರತದ ಮೇಲೆ ಅಮೆರಿಕ ತೋರುತ್ತಿರುವ ಬೆದರಿಕೆ ತಂತ್ರ, ಹಾಗೂ ‘ಅಮೆರಿಕ ಫಸ್ಟ್’ ನೀತಿಯು ಆ ದೇಶಕ್ಕೆ ತಿರುಗುಬಾಣವಾಗುತ್ತದೆ. ಅಮೆರಿಕದ ಕ್ರಮಕ್ಕೆ ಭಾರತ ಪ್ರತಿಕ್ರಮ ತೋರದೆ ತಂತ್ರಾತ್ಮಕವಾಗಿ ವ್ಯಾಪಾರ ವಿಸ್ತರಣೆ ಮಾಡುವ ಮೂಲಕ ಅಮೆರಿಕಕ್ಕೆ ಉತ್ತರ ಕೊಡುತ್ತಿದೆ. ಬ್ರಿಕ್ಸ್ ಮತ್ತು ಇತರ ದೇಶಗಳೊಂದಿಗೆ ಒಪ್ಪಂದಗಳ ಮೂಲಕ ಅಮೆರಿಕಕ್ಕೆ ಭಾರತ ಚುರುಕು ಮುಟ್ಟಿಸಬಹುದು ಎಂಬುದು ಪ್ರೊ| ಮಾಧವ್ ಅಭಿಪ್​ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪೆಪ್ಸಿ, ಮೆಕ್​ಡೊನಾಲ್ಡ್, ಕೆಎಫ್​ಸಿ ಬಾಯ್ಕಾಟ್ ಮಾಡಿ; ಅಮೆರಿಕಾ ತತ್ತರಿಸುವಂತೆ ಮಾಡಿ: ಬಾಬಾ ರಾಮದೇವ್

ಭಾರತ ಉತ್ತಮ ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಅಂತಾರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಗಳು ಭಾರತಕ್ಕೆ ರೇಟಿಂಗ್ ಕಡಿಮೆ ಮಾಡಿಲ್ಲ. ಅಮೆರಿಕದ ಕಂಪನಿಗಳು ಭಾರತದಲ್ಲಿ ಹೂಡಿಕೆ ವಿಸ್ತರಿಸಲು ಆದ್ಯತೆ ನೀಡುತ್ತಿರುವುದು ಇವೇ ಮುಂತಾದ ಅಂಶಗಳು ಭಾರತಕ್ಕೆ ಉತ್ತಮ ಬೆಳವಣಿಗೆ ವೇಗ ತಂದುಕೊಡುತ್ತವೆ ಎಂದು ನಲಪತ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ