AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಟ್ಯಾರಿಫ್ ಹೊಡೆತ ತಪ್ಪಿಸಲು ಯತ್ನ; 40 ದೇಶಗಳ ಮಾರುಕಟ್ಟೆಗಳತ್ತ ಭಾರತ ಚಿತ್ತ

India focussing on 40 countries for textile exports: ರಫ್ತಿನ ಮೇಲೆ ಅವಲಂಬಿತವಾಗಿರುವ ಭಾರತದ ಜವಳಿ ಉದ್ದಿಮೆಗಳು ಅಮೆರಿಕದ ಟ್ಯಾರಿಫ್​ನಿಂದ ಸಂಕಷ್ಟಕ್ಕೆ ಸಿಲುಕುವ ಅಪಾಯದಲ್ಲಿವೆ. ಅಮೆರಿಕದ ಮಾರುಕಟ್ಟೆಗೆ ಪರ್ಯಾಯವಾಗಿ ಭಾರತವು ಬೇರೆ ಮಾರುಕಟ್ಟೆಗಳತ್ತ ಗಮನ ಹೆಚ್ಚಿಸುತ್ತಿದೆ. ಜವಳಿ ಉತ್ಪನ್ನಗಳನ್ನು ಅತಿಹೆಚ್ಚು ಆಮದು ಮಾಡಿಕೊಳ್ಳುವ ಬ್ರಿಟನ್, ಜಪಾನ್, ಜರ್ಮನಿ ಇತ್ಯಾದಿ 40 ದೇಶಗಳ ಮಾರುಕಟ್ಟೆಳತ್ತ ಭಾರತದ ಚಿತ್ತ ನೆಟ್ಟಿದೆ.

ಅಮೆರಿಕದ ಟ್ಯಾರಿಫ್ ಹೊಡೆತ ತಪ್ಪಿಸಲು ಯತ್ನ; 40 ದೇಶಗಳ ಮಾರುಕಟ್ಟೆಗಳತ್ತ ಭಾರತ ಚಿತ್ತ
ಜವಳಿ ಉದ್ಯಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2025 | 11:47 AM

Share

ನವದೆಹಲಿ, ಆಗಸ್ಟ್ 28: ಅಮೆರಿಕದ ಟ್ಯಾರಿಫ್​ಗಳಿಂದ (US tariffs) ಅತಿಹೆಚ್ಚು ಬಾಧಿತವಾಗುವ ಸೆಕ್ಟರ್​ಗಳಲ್ಲಿ ಜವಳಿ ಉದ್ಯಮವೂ ಒಂದು. ಭಾರತದ ಜವಳಿ ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆ ಅಮೆರಿಕವೇ ಆಗಿದೆ. ಶೇ. 60ಕ್ಕಿಂತಲೂ ಹೆಚ್ಚು ಟ್ಯಾರಿಫ್ ಅನ್ವಯ ಆಗುತ್ತಿರುವುದರಿಂದ ಬಾಂಗ್ಲಾದೇಶ, ವಿಯೆಟ್ನಾಂ ಇತ್ಯಾದಿ ದೇಶಗಳ ಸರಕುಗಳೊಂದಿಗೆ ಭಾರತದ ಉದ್ಯಮಗಳು ಪೈಪೋಟಿ ನೀಡಲು ಆಗುವುದಿಲ್ಲ. ಹೀಗಾಗಿ ಹಲವು ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಕಳೆದುಕೊಳ್ಳುವ ಭೀತಿಯಲ್ಲಿ ಭಾರತದ ಜವಳಿ ಉದ್ಯಮ ಇದೆ. ಇದನ್ನು ತಪ್ಪಿಸಲು ಭಾರತ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಮೆರಿಕಕ್ಕೆ ಪರ್ಯಾಯವಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ.

ವರದಿಗಳ ಪ್ರಕಾರ ಭಾರತವು ಜವಳಿ ಉತ್ಪನ್ನಗಳ ರಫ್ತಿಗಾಗಿ 40 ದೇಶಗಳ ಮೇಲೆ ಗಮನ ಹರಿಸಿದೆ. ಬ್ರಿಟನ್, ಜಪಾನ್, ಸೌತ್ ಕೊರಿಯಾ, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ನೆದರ್​ಲ್ಯಾಂಡ್ಸ್, ಪೋಲ್ಯಾಂಡ್, ಕೆನಡಾ, ಮೆಕ್ಸಿಕೋ, ರಷ್ಯಾ, ಬೆಲ್ಜಿಯಂ, ಟರ್ಕಿ, ಯುಎಇ, ಆಸ್ಟ್ರೇಲಿಯಾ ಇತ್ಯಾದಿ ಮಾರುಕಟ್ಟೆಗಳಿಗೆ ರಫ್ತು ಹೆಚ್ಚಿಸುವ ಸಾಧ್ಯಾಸಾಧ್ಯತೆಯನ್ನು ಭಾರತ ಅವಲೋಕಿಸುತ್ತಿದೆ.

ಭಾರತದ ಜವಳಿ ಉತ್ಪನ್ನಗಳು ವಿಶ್ವದ ಬಹುತೇಕ ಎಲ್ಲಾ ದೇಶಗಳಿಗೂ ರಫ್ತಾಗುತ್ತಿವೆ. ಆದರೆ, ಸುಮಾರು 40-50 ದೇಶಗಳು ಅತಿಹೆಚ್ಚು ಉಡುಪುಗಳನ್ನು ಆಮದು ಮಾಡಿಕೊಳ್ಳುತ್ತವೆ. ಈ ಪೈಕಿ ಭಾರತವು ಅಮೆರಿಕಕ್ಕೆ ಪರ್ಯಾಯವಾಗಿ 40 ದೇಶಗಳ ಮಾರುಕಟ್ಟೆಯನ್ನು ಆಯ್ದುಕೊಂಡಿದೆ. ಈ 40 ದೇಶಗಳು ಒಂದು ವರ್ಷದಲ್ಲಿ ಆಮದು ಮಾಡಿಕೊಳ್ಳುವ ಜವಳಿ ಉತ್ಪನ್ನಗಳ ಮೌಲ್ಯ 590 ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ಶೇ. 5-6 ಮಾತ್ರವೇ ಎನ್ನಲಾಗಿದೆ. ಹೀಗಾಗಿ, ಈ ಮಾರುಕಟ್ಟೆಗಳಿಗೆ ಭಾರತ ಮತ್ತಷ್ಟು ರಫ್ತು ಮಾಡಲು ಹೆಚ್ಚು ಅವಕಾಶ ಇದೆ.

ಇದನ್ನೂ ಓದಿ: ಅಮೆರಿಕದ ಶೇ. 50 ಟ್ಯಾರಿಫ್ ಚಾಲ್ತಿಗೆ; ಬಾಧಿತವಾಗುವ ಭಾರತೀಯ ಸೆಕ್ಟರ್​ಗಳ್ಯಾವುವು? ಇಲ್ಲಿದೆ ಡೀಟೇಲ್ಸ್

2024-24ರಲ್ಲಿ ಭಾರತದ ಒಟ್ಟಾರೆ ಜವಳಿ ಉದ್ಯಮದ ಗಾತ್ರ 179 ಬಿಲಿಯನ್ ಡಾಲರ್​ನಷ್ಟು ಇದೆ. ಇದರಲ್ಲಿ ಅತಿಹೆಚ್ಚು ಬ್ಯುಸಿನೆಸ್ ಆಗುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲೇ. ರಫ್ತಾಗುತ್ತಿರುವುದು 37 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳು ಮಾತ್ರವೇ. ಜಾಗತಿಕವಾಗಿ ವಿವಿಧ ದೇಶಗಳು ಆಮದು ಮಾಡಿಕೊಳ್ಳುತ್ತಿರುವುದು 800.77 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು. ಈ ಜಾಗತಿಕ ಜವಳಿ ರಫ್ತಿನಲ್ಲಿ ಭಾರತದ ಪಾಲು ಶೇ. 4.1 ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ