ಶಿ ಜಿನ್ಪಿಂಗ್ ಭಾರತಕ್ಕೆ ಬರೆದಿದ್ದರಾ ರಹಸ್ಯ ಪತ್ರ? ಭಾರತ-ಚೀನಾ ಸಂಬಂಧಕ್ಕೆ ಮರುಜೀವ ಕೊಟ್ಟಿತ್ತಾ ಆ ಪತ್ರ
India China relationship: ಭಾರತವನ್ನು ಗುರಿಯಾಗಿಸಿ ಅಮೆರಿಕ ವಿವಿಧ ನಡೆಗಳನ್ನು ಇಡುತ್ತಿದೆ. ಇದರ ಮಧ್ಯೆ ಭಾರತ ಮತ್ತು ಚೀನಾ ನಡುವಿನ ಸಂಬಂಧ ಮತ್ತೆ ಚಿಗುರತೊಡಗಿದೆ. ಭಾರತದ ಈ ನಡೆಯಲ್ಲಿ ಬದಲಾವಣೆ ಆಗಲು ಅಮೆರಿಕದ ಟ್ಯಾರಿಫ್ ಪ್ರಮುಖ ಕಾರಣ. ಚೀನಾ ಜೊತೆಗೆ ಭಾರತ ಸ್ನೇಹ ಬೆಳೆಸಲು ಪ್ರೇರೇಪಿಸಿದ್ದು ಕ್ಸಿ ಜಿನ್ಪಿಂಗ್ ಬರೆದ ಆ ಒಂದು ಪತ್ರ.

ನವದೆಹಲಿ, ಆಗಸ್ಟ್ 29: ಭಾರತದ ಮೇಲೆ ಅಮೆರಿಕ ಟ್ಯಾರಿಫ್ (US tariffs) ಸವಾರಿ ಮಾಡುತ್ತಿರುವ ಹೊತ್ತಿನಲ್ಲೇ ಜಾಗತಿಕ ಸಮೀಕರಣದಲ್ಲಿ ಸ್ಪಷ್ಟವಾಗಿ ಗೋಚರವಾಗುವ ರೀತಿಯಲ್ಲಿ ಸಮೀಕರಣ ಬದಲಾವಣೆ ಆಗತೊಡಗಿದೆ. ಚೀನಾ ಮತ್ತು ಭಾರತ ಸದ್ಯೋಭವಿಷ್ಯದಲ್ಲಿ ಉತ್ತಮ ಸಂಬಂಧ ಹೊಂದಲು ಸಾಧ್ಯವೇ ಇಲ್ಲ ಎಂಬಂತಿದ್ದ ಸ್ಥಿತಿಯಲ್ಲಿ ಬದಲಾವಣೆ ಆಗತೊಡಗಿದೆ. ಎರಡೂ ದೇಶಗಳು ತಮ್ಮ ವೈಮನಸ್ಸುಗಳನ್ನು ಬದಿಗಿಟ್ಟು ಹತ್ತಿರ ಬರಲು ಮನಸ್ಸು ಮಾಡಿವೆ. ಎರಡೂ ದೇಶಗಳಿಗೆ ರಷ್ಯಾ ಕೊಂಡಿಯಂತೆ ನಿಲ್ಲಲು ತಯಾರಾಗಿದೆ. ಈ ಬೆಳವಣಿಗೆಗೆ ಕಾರಣವಾಗಿದ್ದು ಅಮೆರಿಕದ ಟ್ಯಾರಿಫ್ ಹೇರಿಕೆ. ಬದಲಾವಣೆಯ ಮೊದಲ ಹೆಜ್ಜೆ ಇಡಲು ಕಾರಣವಾಗಿದ್ದು ಚೀನೀ ಅಧ್ಯಕ್ಷರ ರಹಸ್ಯ ಪತ್ರ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಗೆ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ (China president Xi Jinping) ರಹಸ್ಯವಾಗಿ ಕಳುಹಿಸಿದ ಪತ್ರವು ಎರಡೂ ದೇಶಗಳ ನಡುವಿನ ಸಂಬಂಧವನ್ನು ಬೆಸೆಯಲು ಪ್ರೇರೇಪಿಸಿದೆ ಎಂದು ಬ್ಲೂಮ್ಬರ್ಗ್ ವರದಿಯೊಂದರಲ್ಲಿ ಹೇಳಲಾಗಿದೆ.
ಚೀನಾ ಅಧ್ಯಕ್ಷರು ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದು ನಿನ್ನೆ ಮೊನ್ನೆಯಲ್ಲ, ಮಾರ್ಚ್ನಲ್ಲಿ. ಆಗ ಭಾರತವು ಅಮೆರಿಕದ ಜೊತೆ ಟ್ರೇಡ್ ಡೀಲ್ ಮಾಡಿಕೊಳ್ಳಲು ಹೆಣಗಾಡುತ್ತಿದ್ದ ಸಂದರ್ಭ. ಅಮೆರಿಕದ ವಿಪರೀತ ಬೇಡಿಕೆಗಳನ್ನು ಪೂರೈಸಲಾಗದ ಸ್ಥಿತಿಯಲ್ಲಿದ್ದ ಭಾರತವು ಹತಾಶೆಗೊಂಡ ಸಂದರ್ಭ ಅದು. ಆಗ ಚೀನೀ ಅಧ್ಯಕ್ಷರು ಭಾರತದ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಚೀನಾದ ಹಿತಾಸಕ್ತಿಗೆ ಧಕ್ಕೆ ತರುವಂತಹ ಒಪ್ಪಂದಗಳನ್ನು ಅಮೆರಿಕದೊಂದಿಗೆ ಭಾರತವೇನಾದರೂ ಮಾಡಿಕೊಂಡೀತು ಎಂದು ಆತಂಕ ತೋಡಿಕೊಂಡಿದ್ದ ಪತ್ರ ಅದು. ಭಾರತದ ಅಧಿಕಾರಿಯೊಬ್ಬರು ಈ ಬಗ್ಗೆ ಹೇಳಿದ್ದಾಗಿ ಬ್ಲೂಮ್ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪೆಪ್ಸಿ, ಮೆಕ್ಡೊನಾಲ್ಡ್, ಕೆಎಫ್ಸಿ ಬಾಯ್ಕಾಟ್ ಮಾಡಿ; ಅಮೆರಿಕಾ ತತ್ತರಿಸುವಂತೆ ಮಾಡಿ: ಬಾಬಾ ರಾಮದೇವ್
ಚೀನಾ ಅಧ್ಯಕ್ಷರು ಕಳುಹಿಸಿದ್ದ ಈ ರಹಸ್ಯ ಪತ್ರವು ಪ್ರಧಾನಿ ನರೇಂದ್ರ ಮೋದಿ ಅವರಿಗೂ ರವಾನೆಯಾಗಿತ್ತು. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಕುದುರಿಸಲು ಗಂಭೀರ ಪ್ರಯತ್ನ ನಡೆಸುತ್ತಿದ್ದ ಭಾರತವು ಚೀನಾ ಅಧ್ಯಕ್ಷರ ಪತ್ರದ ಬಗ್ಗೆ ಅಷ್ಟು ಗಮನ ಕೊಡಲಿಲ್ಲ. ಆದರೆ, ಆಪರೇಷನ್ ಸಿಂದೂರ್ ಬಳಿಕ ಅಮೆರಿಕದ ವರ್ತನೆ ಬದಲಾಗತೊಡಗಿತ್ತು. ಭಾರತಕ್ಕೆ ಕಿರಿಕಿರಿ ತರತೊಡಗಿತು. ಆಗ ಭಾರತವು ಚೀನಾದ ಕಡೆ ನೋಟ ಹರಿಸಲು ಆರಂಭಿಸಿತೆನ್ನಲಾಗಿದೆ.
ಅಷ್ಟರಲ್ಲಿ ಚೀನಾ ಕೂಡ ಪೂರಕ ವಾತಾವರಣ ನಿರ್ಮಾಣ ಮಾಡಿತ್ತು. ಕ್ಸಿ ಜಿನ್ಪಿಂಗ್ ಅವರು ಭಾರತದ ರಾಷ್ಟ್ರಪತಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಅಲ್ಲಿನ ಸರ್ಕಾರವು ಭಾರತ ಮತ್ತು ಚೀನಾ ನಡುವಿನ ಸ್ನೇಹ ಸಂಬಂಧವನ್ನು ಡ್ರ್ಯಾಗನ್ ಮತ್ತು ಆನೆಯ ಸಂಯೋಜನೆ ಎಂದು ಬಣ್ಣಿಸಲು ಆರಂಭಿಸಿತು.
ಇಷ್ಟಕ್ಕೆ ಸುಮ್ಮನಾಗದ ಚೀನಾ, ಭಾರತದೊಂದಿಗಿನ ಗಡಿ ವ್ಯಾಜ್ಯಗಳಿಗೆ ಬೇಗ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಪ್ರಯತ್ನಗಳಿಗೆ ಸಮ್ಮತಿಸಿತು. ಭಾರತಕ್ಕೆ ಬಹಳ ಅಗತ್ಯವಾಗಿದ್ದ ವಿರಳ ಭೂ ಖನಿಜಗಳು ಮತ್ತು ರಸಗೊಬ್ಬರಗಳ ರಫ್ತಿಗೆ ತಾನು ಇರಿಸಿದ್ದ ನಿರ್ಬಂಧಗಳನ್ನು ಚೀನಾ ಸಡಿಲಿಸಿತು.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ಹೊಡೆತ ತಪ್ಪಿಸಲು ಯತ್ನ; 40 ದೇಶಗಳ ಮಾರುಕಟ್ಟೆಗಳತ್ತ ಭಾರತ ಚಿತ್ತ
ಆಪರೇಷನ್ ಸಿಂದೂರ್ ವೇಳೆ ಭಾರತದ ಬಗ್ಗೆ ಟ್ರಂಪ್ ತುಚ್ಛವಾಗಿ ಮಾತನಾಡಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದರು. ರಷ್ಯನ್ ತೈಲವನ್ನು ಭಾರತ ಖರೀದಿಸುತ್ತಿರುವುದಕ್ಕೆ ಆಕ್ಷೇಪಿಸಿದರು. ಭಾರತದ ಮೇಲೆ ಟ್ಯಾರಿಫ್ಗಳ ಬರೆ ಹಾಕತೊಡಗಿದರು. ಇವೆಲ್ಲವೂ ಭಾರತದ ಆತ್ಮಾಭಿಮಾನವನ್ನು ಕೆಣಕಿದಂತಾಗಿತ್ತು. ಇದೇ ಹೊತ್ತಲ್ಲಿ ಚೀನಾ ಕೂಡ ಭಾರತದ ಪರವಾಗಿ ಧ್ವನಿ ಎತ್ತಿತು. ಚೀನಾದ ಇಂಥ ಒಂದೊಂದೇ ಪೂರಕ ನಡೆಯು ಭಾರತವನ್ನು ಹತ್ತಿರಕ್ಕೆ ತರತೊಡಗಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Fri, 29 August 25




