ಭಾರತದಲ್ಲಿ ಮೈಕ್ರೋನ್ನ ಬೃಹತ್ ಸೆಮಿಕಂಡಕ್ಟರ್ ಘಟಕ; ವಿಡಿಯೋ ಹಂಚಿಕೊಂಡ ಸಚಿವ ವೈಷ್ಣವ್
Union minister Ashwini Vaishnaw shares video of Micron's semiconductor unit in Sanand: ಅಮೆರಿಕದ ಮೈಕ್ರೋನ್ ಟೆಕ್ನಾಲಜಿ ಸಂಸ್ಥೆ ಗುಜರಾತ್ನ ಸಾನಂದ್ನಲ್ಲಿ ನಿರ್ಮಿಸುತ್ತಿರುವ ಘಟಕದ ಮೊದಲ ಹಂತವು ಪೂರ್ಣಗೊಳ್ಳುತ್ತಿದೆ. ಇದರ ಒಂದು ವಿಡಿಯೋವನ್ನು ಸಚಿವ ಅಶ್ವಿನಿ ವೈಷ್ಣವ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷಾಂತ್ಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಚಿಪ್ ತಯಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ನವದೆಹಲಿ, ಆಗಸ್ಟ್ 28: ಗುಜರಾತ್ನ ಸಾನಂದ್ ಜಿಲ್ಲೆಯಲ್ಲಿ ಅಮೆರಿಕ ಮೂಲದ ಮೈಕ್ರಾನ್ ಸಂಸ್ಥೆಯಿಂದ ಬೃಹತ್ ಸೆಮಿಕಂಡಕ್ಟರ್ ಫ್ಯಾಬ್ರಿಫಿಕೇಶನ್ ಘಟಕ (Micron chip fab unit) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದು ವಿಶ್ವದ ಅತಿದೊಡ್ಡ ಬ್ಯಾಕೆಂಡ್ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ಗಳಲ್ಲಿ ಒಂದೆನಿಸಿದೆ. ಭಾರತದಲ್ಲಿ ಸದ್ಯ ಇದೇ ಅತಿದೊಡ್ಡ ಫ್ಯಾಬ್ ಘಟಕ ಎನಿಸಿದೆ. ಇದೇ ವೇಳೆ ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ವಿಶಾಲ ಸ್ಥಳವನ್ನು ತೋರಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸಾನಂದ್ನ ಕೈಗಾರಿಕಾ ಪ್ರದೇಶದಲ್ಲಿರುವ ಈ ಘಟಕದ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. 2025ರ ಡಿಸೆಂಬರ್ ತಿಂಗಳಲ್ಲಿ ಈ ಯೋಜನೆಯ ಮೊದಲ ಹಂತವು ಪೂರ್ಣಗೊಳ್ಳಲಿದ್ದು ಸದ್ಯದಲ್ಲೇ ಚಿಪ್ ತಯಾರಿಕೆಯೂ ಆರಂಭವಾಗಬಹುದು.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ಹೊಡೆತ ತಪ್ಪಿಸಲು ಯತ್ನ; 40 ದೇಶಗಳ ಮಾರುಕಟ್ಟೆಗಳತ್ತ ಭಾರತ ಚಿತ್ತ
ವಿಶ್ವದ ಅತಿದೊಡ್ಡ ಚಿಪ್ ತಯಾರಕ ಸಂಸ್ಥೆಗಳಲ್ಲಿ ಒಂದೆನಿಸಿದ ಮೈಕ್ರಾನ್ ಎರಡು ಹಂತದಲ್ಲಿ ಘಟಕಗಳನ್ನು ಸ್ಥಾಪಿಸಲಿದೆ. ಎರಡೂ ಹಂತ ಸೇರಿ 825 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಸರ್ಕಾರದ ನೆರವೂ ಸೇರಿದರೆ ಈ ಸೆಮಿಕಂಡಕ್ಟರ್ ಘಟಕಕ್ಕೆ 2.75 ಬಿಲಿಯನ್ ಡಾಲರ್ ಬಂಡವಾಳ ಹರಿದುಬರುತ್ತಿದೆ.
ಸಚಿವ ಎ ವೈಷ್ಣವ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್
In making…
Micron semiconductor plant 📍Sanand, Gujarat pic.twitter.com/dkG3zLivVu
— Ashwini Vaishnaw (@AshwiniVaishnaw) August 28, 2025
ಮೊದಲ ಹಂತದ ಸೆಮಿಕಂಡಕ್ಟರ್ ಘಟಕವನ್ನು ಮೈಕ್ರೋನ್ ಸಂಸ್ಥೆ 2024ರ ಡಿಸೆಂಬರ್ನೊಳಗೆ ಪೂರ್ಣಗೊಳಿಸಿ ಚಿಪ್ ತಯಾರಿಕೆ ಮಾಡುವ ಗುರಿ ಇಟ್ಟಿತ್ತು. ಆದರೆ, ಕಾಮಗಾರಿಯಲ್ಲಿ ತುಸು ವಿಳಂಬವಾಗಿದೆ. ಈ ವರ್ಷಾಂತ್ಯದೊಳಗೆ ಇಲ್ಲಿ ಚಿಪ್ ತಯಾರಿಕೆ ಆರಂಭವಾಗಬಹುದು. ಮೊದಲ ಹಂತದ ಘಟಕ ಪೂರ್ಣಗೊಳ್ಳುವ ಮೊದಲೇ ಎರಡನೇ ಹಂತದ ಯೋಜನೆಯನ್ನೂ ಮೈಕ್ರೋನ್ ಘೋಷಿಸಿದೆ. ಮುಂದಿನ ವರ್ಷ ಇದರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: 2038ಕ್ಕೆ ಆರ್ಥಿಕ ಶಕ್ತಿಯಲ್ಲಿ ಅಮೆರಿಕವನ್ನೇ ಮೀರಲಿಸದೆ ಭಾರತ: ಐಎಂಎಫ್ ಅಂದಾಜು
ಈಗಾಗಲೇ ಕ್ಲೀನ್ ರೂಮ್ ವ್ಯಾಲಿಡೇಶನ್ ಕಾರ್ಯ ನಡೆದಿದೆ. ಇದು ಪೂರ್ಣಗೊಂಡಿತೆಂದರೆ ಚಿಪ್ ತಯಾರಿಕೆ ಕೆಲಸ ಯಾವಾಗ ಬೇಕಾದರೂ ಶುರುವಾದಂತೆ. ಕ್ಲೀನ್ ರೂಮ್ ನಿರ್ಮಾಣ ಸೆಮಿಕಂಡಕ್ಟರ್ ಘಟಕದಲ್ಲಿ ಅತಿಮುಖ್ಯವಾದುದು. ನೂರಕ್ಕೆ ನೂರು ಸ್ವಚ್ಛತೆ ಇಲ್ಲಿರಬೇಕು. ಒಂದೇ ಒಂದು ಧೂಳು ಕಣ ಅಥವಾ ಅನವಶ್ಯಕ ರಾಸಾಯನಿಕ ಇಲ್ಲಿ ತಾಕಿತೆಂದರೆ ಚಿಪ್ ತಯಾರಿಕೆಯ ಪ್ರಕ್ರಿಯೆಗೆ ಧಕ್ಕೆ ತಗುಲುತ್ತದೆ. ದೋಷಪೂರಿತ ಚಿಪ್ಗಳು ತಯಾರಾಗುತ್ತವೆ. ಹೀಗಾಗಿ, ಬಹಳ ಜಾಗ್ರತೆಯಿಂದ ಕ್ಲೀನ್ರೂಮ್ ನಿರ್ಮಾಣ ಮತ್ತು ವ್ಯಾಲಿಡೇಶನ್ ಮಾಡಲಾಗುತ್ತಿದೆ. ಟಾಟಾ ಪ್ರಾಜೆಕ್ಟ್ಸ್ ಸಂಸ್ಥೆಯು ಮೈಕ್ರೋನ್ ಟೆಕ್ನಾಲಜಿಯ ಈ ಘಟಕದ ನಿರ್ಮಾಣದ ಹೊಣೆ ಹೊತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




