ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್​ಎಡ್ಜ್ ರೇಟಿಂಗ್ಸ್ ವರದಿ

India's debt to GDP ratio set to decline to 71%: ಶೇ. 81ರಷ್ಟಿರುವ ಜಿಡಿಪಿ-ಸಾಲ ಅನುಪಾತ 2035ರಲ್ಲಿ ಶೇ. 71ಕ್ಕೆ ಇಳಿಯಬಹುದು ಎಂದು ಕೇರ್ ಎಡ್ಜ್ ರೇಟಿಂಗ್ಸ್ ವರದಿ ಹೇಳಿದೆ. ರಾಜ್ಯಗಳ ಮಟ್ಟದಲ್ಲಿ ಸಾಲ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಈ ವರದಿಯಲ್ಲಿ ಗುರುತಿಸಲಾಗಿದೆ. ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದರೂ, ರಾಜ್ಯಗಳ ಮಟ್ಟದಲ್ಲಿ ಹಣ ನಿರ್ವಹಣೆ ಬಗ್ಗೆ ಹುಷಾರ್ ಎಂದಿದೆ ಈ ವರದಿ.

ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್​ಎಡ್ಜ್ ರೇಟಿಂಗ್ಸ್ ವರದಿ
ಆರ್ಥಿಕತೆ

Updated on: Oct 10, 2025 | 7:25 PM

ನವದೆಹಲಿ, ಅಕ್ಟೋಬರ್ 10: ಮುಂದಿನ ಐದತ್ತು ವರ್ಷಗಳಾದ್ಯಂತ ಭಾರತ ಸರ್ಕಾರದ ಸಾಲದ ಬಾಧ್ಯತೆ ನಿರಂತರವಾಗಿ ತಗ್ಗಬಹುದು ಎಂದು ಅಂದಾಜು ಮಾಡಲಾಗಿದೆ. ಕೇರ್​ಎಡ್ಜ್ ರೇಟಿಂಗ್ಸ್ (CareEdge Ratings) ಸಂಸ್ಥೆ ಪ್ರಕಾರ ಮುಂದಿನ ಹತ್ತು ವರ್ಷದಲ್ಲಿ ಭಾರತದ ಜಿಡಿಪಿ ಮತ್ತು ಸಾಲ ನಡುವಿನ ಅನುಪಾತ (Debt to GDP) ಶೇ. 71ಕ್ಕೆ ಇಳಿಯಬಹುದು ಎಂದು ಹೇಳಲಾಗಿದೆ. ಪ್ರಸಕ್ತ ಈ ಅನುಪಾತವು ಶೇ. 81ರಷ್ಟಿದೆ. 2030-31ರಲ್ಲಿ ಈ ಅನುಪಾತ ಶೇ. 77ಕ್ಕೆ ಇಳಿಯಬಹುದು. 2034-35ರಲ್ಲಿ ಇದು ಶೇ. 71ಕ್ಕೆ ಇಳಿಯಬಹುದು ಎಂದು ಕೇರ್ ಎಡ್ಜ್ ರೇಟಿಂಗ್ಸ್ ಸಂಸ್ಥೆ ನಿರೀಕ್ಷಿಸಿದೆ.

ಜಿಡಿಪಿಯ ಗಾತ್ರಕ್ಕೆ ಹೋಲಿಸಿದರೆ ಎಷ್ಟು ಸಾಲ ಮಾಡಲಾಗಿದೆ ಎಂಬುದು ಜಿಡಿಪಿ ಮತ್ತು ಸಾಲದ ಅನುಪಾತ. ಭಾರತದ ಪ್ರಸಕ್ತ ಸಾಲದ ಮೊತ್ತ 181 ಲಕ್ಷ ಕೋಟಿ ರೂಗೂ ಅಧಿಕ ಇದೆ. ಅಂದರೆ ಎರಡು ಟ್ರಿಲಿಯನ್ ಡಾಲರ್​ಗೂ ಅಧಿಕ ಸಾಲದ ಬಾಧ್ಯತೆ ಸರ್ಕಾರಕ್ಕೆ ಇದೆ. ಜಿಡಿಪಿ ಮತ್ತು ಸಾಲದ ಅನುಪಾತ ಇಳಿಯುತ್ತದೆ ಎಂದಾಕ್ಷಣ ಮುಂಬರುವ ವರ್ಷಗಳಲ್ಲಿ ಸಾಲದ ಮೊತ್ತ ಇಳಿಯುತ್ತದೆ ಎಂದೇನಲ್ಲ. ಸಾಲ ಬೆಳೆದರೂ ಅದಕ್ಕಿಂತ ಹೆಚ್ಚು ವೇಗದಲ್ಲಿ ಜಿಡಿಪಿ ಬೆಳೆಯುತ್ತಾ ಹೋಗಬಹುದು. ಈ ರೀತಿಯಲ್ಲಿ ಜಿಡಿಪಿ-ಸಾಲ ಅನುಪಾತ ಕಡಿಮೆಗೊಳ್ಳಬಹುದು.

ಇದನ್ನೂ ಓದಿ: ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ

ಕೇರ್​ಎಡ್ಜ್ ರೇಟಿಂಗ್ಸ್ ವರದಿಯೂ ಈ ಅಂಶವನ್ನು ಎತ್ತಿ ತೋರಿಸಿದೆ. ಜಿಡಿಪಿ-ಸಾಲ ಅನುಪಾತ ಕಡಿಮೆ ಆದರೂ ಸಾಲದ ಮಟ್ಟ ಮಾತ್ರ ಅಧಿಕವಾಗಿಯೇ ಇರಲಿದೆ. ರಾಜ್ಯಗಳ ಸಾಲದ ವಿಚಾರದಲ್ಲಿ ಇದು ಎಚ್ಚರಿಸಿದೆ. ಕೆಲ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಉಚಿತ ಸ್ಕೀಮ್​ಗಳು ಸಾಲವನ್ನು ಹೆಚ್ಚಿಸುವಂತೆ ಮಾಡಿವೆ ಎಂದು ಈ ವರದಿ ಹೇಳುತ್ತದೆ.

ಹಾಗೆಯೇ, ಮತ್ತೊಂದು ಅಂಶವೆಂದರೆ, ಸರ್ಕಾರದ ಸಾಲದ ಅನುಪಾತ ಕಡಿಮೆ ಆಗುತ್ತದೆಯಾದರೂ ಬಡ್ಡಿ ಪಾವತಿ ಸಮಸ್ಯೆಯು ಸರ್ಕಾರವನ್ನು ಕಾಡಲಿದೆ. ಸರ್ಕಾರಕ್ಕೆ ಬರುವ ಆದಾಯದಲ್ಲಿ ಬಡ್ಡಿಗೆ ಸಂದಾಯವಾಗುವ ಪಾಲು ಹೆಚ್ಚುತ್ತಿರಲಿದೆ. ಸರ್ಕಾರಕ್ಕೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗಬಹುದು.

ಇದನ್ನೂ ಓದಿ: ಷೇರುಗಳ ರೀತಿಯಲ್ಲಿ ಮನೆ ಆಸ್ತಿ ಖರೀದಿಸಿ, ಮಾರಿ; ಬರುತ್ತಿದೆ ಫಿಂಟರ್ನೆಟ್ ಕ್ರಾಂತಿ; ನಂದನ್ ನಿಲೇಕಣಿ ಈ ಮೆಗಾ ಪ್ರಾಜೆಕ್ಟ್ ರೂವಾರಿ

ಭಾರತದ ಹಣಕಾಸು ನಿರ್ವಹಣೆ ಉತ್ತಮವಾಗಿರುತ್ತದೆ. ಆರ್ಥಿಕ ಪ್ರಗತಿಯೂ ಕೂಡ ಉತ್ತಮವಾಗಿರುತ್ತದೆ. ಆದರೆ, ರಾಜ್ಯ ಮಟ್ಟದಲ್ಲಿ ಹಣಕಾಸು ನಿರ್ವಹಣೆ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಈ ಕೇರ್ ಎಡ್ಜ್ ರೇಟಿಂಗ್ಸ್ ವರದಿಯಲ್ಲಿ ಸಲಹೆ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ