
ಬೆಂಗಳೂರು, ಆಗಸ್ಟ್ 11: ಭಾರತದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮದ ಮೌಲ್ಯ 12 ಲಕ್ಷ ಕೋಟಿ ರೂ ಮುಟ್ಟಿದೆ. ಅಮೆರಿಕಕ್ಕೆ ಸ್ಮಾರ್ಟ್ಫೋನ್ ಸರಬರಾಜುದಾರರಲ್ಲಿ (smartphone suppliers) ಭಾರತ ಮುಂಚೂಣಿಗೆ ಬಂದಿದೆ ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ (electronics manufacturing) ಕಳೆದ 11 ವರ್ಷದಲ್ಲಿ ಆರು ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಎಂಟು ಪಟ್ಟು ಹೆಚ್ಚಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
‘ನಮ್ಮ ಎಲೆಕ್ಟ್ರಾನಿಕ್ಸ್ ತಯಾರಿಕೆಯು ಕಳೆದ 11 ವರ್ಷದಲ್ಲಿ ಆರು ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ 12 ಲಕ್ಷ ಕೋಟಿ ರೂ ತಲುಪಿದೆ. ಎಲೆಕ್ಟ್ರಾನಿಕ್ಸ್ ರಫ್ತು ಎಂಟು ಪಟ್ಟು ಬೆಳೆದಿದೆ. ಇವತ್ತು ಇದರ ರಫ್ತು 3 ಲಕ್ಷ ಕೋಟಿ ರೂನಷ್ಟಿದೆ. ಭಾರತವು ಈ ವಿಶ್ವದಲ್ಲಿ ಎರಡನೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ದೇಶವೆನಿಸಿದೆ’ ಎಂದು ಎ ವೈಷ್ಣವ್ ವಿವರಿಸಿದ್ದಾರೆ.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ
2014ರಲ್ಲಿ ಭಾರತದಲ್ಲಿ ಎರಡೇ ಎರಡು ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳಿದ್ದುವು. ಇವತ್ತು 300ಕ್ಕೂ ಹೆಚ್ಚು ಘಟಕಗಳಿವೆ. 2014-15ರಲ್ಲಿ ಭಾರತದಲ್ಲಿ ಮಾರಾಟವಾಗುತ್ತಿದ್ದ ಮೊಬೈಲ್ ಫೋನ್ಗಳಲ್ಲಿ ಶೇ. 26ರಷ್ಟು ಮಾತ್ರವೇ ದೇಶೀಯವಾಗಿ ನಿರ್ಮಾಣವಾದಂಥವಾಗಿದ್ದುವು. ಉಳಿದವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇವತ್ತು ಭಾರತದಲ್ಲಿ ಮಾರಾಟವಾಗುತ್ತಿರುವ ಶೇ. 99.2ರಷ್ಟು ಫೋನ್ಗಳು ಮೇಡ್ ಇನ್ ಇಂಡಿಯಾದ್ದಾಗಿವೆ.
ಭಾರತ ಜಾರಿಗೆ ತಂದ ಪಿಎಲ್ಐ ಸ್ಕೀಮ್, ಆರಂಭದಲ್ಲಿ ಮೊಬೈಲ್ ಫೋನ್ ತಯಾರಿಕೆಗೆ ಒತ್ತುಕೊಟ್ಟಿತ್ತು. ಫೋನ್ ಮ್ಯಾನುಫ್ಯಾಕ್ಚರಿಂಗ್ಗೆ ಇರುವ ಪಿಎಲ್ಐ ಸ್ಕೀಮ್ನಿಂದ ಬರೋಬ್ಬರಿ 12,390 ಕೋಟಿ ರೂ ಹೂಡಿಕೆ ಹರಿದುಬಂದಿದೆ. ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಇತ್ತೀಚೆಗೆ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಮೊಬೈಲ್ ತಯಾರಿಕೆಗೆಂದು ರೂಪಿಸಲಾದ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಎಂಟೂವರೆ ಲಕ್ಷ ಕೋಟಿ ರೂ ಸಮೀಪದಷ್ಟು ಮೌಲ್ಯದ ಉತ್ಪಾದನೆ ಆಗಿದೆ. 1,30,330 ನೇರ ಉದ್ಯೋಗಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಬರೆ, ಭಾರತಕ್ಕೆ ಸಿಕ್ಕಿರುವ ದೊಡ್ಡ ಅವಕಾಶ: ಅಮಿತಾಭ್ ಕಾಂತ್
ಐಟಿ ಹಾರ್ಡ್ವೇರ್ಗಾಗಿ ರೂಪಿಸಲಾದ ಪಿಎಲ್ಐ ಸ್ಕೀಮ್ನಲ್ಲಿ ಈವರೆಗೆ 717 ಕೋಟಿ ರೂ ಹೂಡಿಕೆ ಬಂದಿದೆ. ಈ ಯೋಜನೆ ಅಡಿ 12,195 ಕೋಟಿ ರೂ ಮೌಲ್ಯದ ಸರಕುಗಳ ಉತ್ಪಾದನೆ ಆಗಿದೆ. 5,056 ನೇರ ಉದ್ಯೋಗಗಳು ಸೃಷ್ಟಿಯಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ