ಭಾರತದಲ್ಲಿ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳಿಂದ 2,400 ಕೋಟಿ ಚಿಪ್ ತಯಾರಿಕೆ ಸಾಧ್ಯ; ಬೇರೆ ದೇಶಗಳಿಗೆ ಹೋಲಿಸಿದರೆ?
India semiconductor mission: ಭಾರತದಲ್ಲಿ ಇತ್ತೀಚೆಗೆ ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಆರಂಭಿಸಿದ್ದು, ಬಹಳ ವೇಗದಲ್ಲಿ ಯೋಜನೆಗಳು ಸಾಗಿವೆ. ಈವರೆಗೆ 6 ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಒಂದು ವೇಫರ್ ಘಟಕ ಹಾಗೂ ಐದು ಪ್ಯಾಕೇಜಿಂಗ್ ಘಟಕಗಳಿವೆ. ಇವುಗಳಿಂದ ವರ್ಷಕ್ಕೆ 24 ಬಿಲಿಯನ್ ಚಿಪ್ಗಳನ್ನು ತಯಾರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನವದೆಹಲಿ, ಆಗಸ್ಟ್ 3: ಸರ್ಕಾರದಿಂದ ಇಲ್ಲಿಯವರೆಗೆ ಅನುಮೋದನೆ ನೀಡಲಾದ ಸೆಮಿಕಂಡಕ್ಟರ್ ಯೋಜನೆಗಳಿಂದ ವರ್ಷಕ್ಕೆ 24 ಬಿಲಿಯನ್ಗಿಂತಲೂ (ಸುಮಾರು 2,400 ಕೋಟಿ) ಹೆಚ್ಚು ಚಿಪ್ಗಳನ್ನು ತಯಾರಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೂ ಕೆಲ ಯೋಜನೆಗಳು ಅನುಮೋದನೆ ಪಡೆಯುವ ಹಾದಿಯಲ್ಲಿ ಇರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ಗಳ ತಯಾರಿಕೆಯ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.
ಫ್ರಾನ್ಹೋಫರ್ ಗಿಸೆಲ್ಶಾಫ್ಟ್ (Fraunhofer-Gesellschaft) ಎನ್ನುವ ಎಪ್ಲೈಡ್ ರಿಸರ್ಚ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾರತದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ನ ಸಿಇಒ ಆದ ಅಮಿತೇಶ್ ಸಿನ್ಹಾ, ಭಾರತದಲ್ಲಿ ಆರು ಸೆಮಿಕಂಡಕ್ಟರ್ ಪ್ರಾಜೆಕ್ಟ್ಗಳಿಗೆ ಅನುಮೋದನೆ ನೀಡಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ಈ ಆರು ಪ್ರಾಜೆಕ್ಟ್ಗಳಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ನಿಂದ ಒಂದು ವೇಫರ್ ಫ್ಯಾಬ್ರಿಕೇಶನ್ ಘಟಕವೂ ಸೇರಿದೆ. ಇತರ ಐದು ಪ್ರಾಜೆಕ್ಟ್ಗಳು ಪ್ಯಾಕೇಜಿಂಗ್ ಘಟಕಗಳಾಗಿವೆ.
ಇದನ್ನೂ ಓದಿ: ಎಲ್ಎಟಿ ಏರೋಸ್ಪೇಸ್: ಭಾರತದ್ದೇ ಸ್ವಂತ ವಿಮಾನ ಎಂಜಿನ್ ತಯಾರಿಸಲು ಹೊರಟಿದ್ದಾರೆ ಜೊಮಾಟೊ ಸಂಸ್ಥಾಪಕರು
‘ಟಾಟಾದ ವೇಫರ್ ಫ್ಯಾಬ್ ಘಟಕದಲ್ಲಿ ತಿಂಗಳಿಗೆ 50,000 ವೇಫರ್ಗಳನ್ನು ತಯಾರಿಸಲಾಗುತ್ತದೆ. ಇತರ ಐದು ಪ್ಯಾಕೇಜಿಂಗ್ ಯುನಿಟ್ಗಳಲ್ಲಿ ವರ್ಷಕ್ಕೆ 24 ಬಿಲಿಯನ್ಗೂ ಅಧಿಕ ಚಿಪ್ಗಳನ್ನು ತಯಾರಿಸಲಾಗುತ್ತದೆ. ಇನ್ನೂ ಹಲವು ಪ್ರಾಜೆಕ್ಟ್ ಪ್ರಸ್ತಾಪಗಳು ಸರ್ಕಾರದ ಪರಿಶೀಲನೆ ಅಡಿ ಇದ್ದು, ಹಲವು ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ’ ಎಂದು ಅಮಿತೇಶ್ ಸಿನ್ಹಾ ಹೇಳಿದ್ದಾರೆ.
ಜರ್ಮನಿಯ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಚಿಪ್ ಫ್ಯಾಬ್ ಕಾರ್ಯಗಳಿಗೆ ನೆರವು ನೀಡಬೇಕೆಂದು ಈ ವೇಳೆ ಹಿರಿಯ ಅಧಿಕಾರಿ ಮನವಿ ಮಾಡಿಕೊಂಡಿದ್ದಾರೆ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಚಿಪ್ ತಯಾರಿಕೆ ಶಕ್ತಿ ಎಷ್ಟಿದೆ?
ಭಾರತದಲ್ಲಿ ಸದ್ಯ ತಿಂಗಳಿಗೆ 50,000 ವೇಫರ್ಗಳನ್ನು ತಯಾರಿಸುವ ಸಾಮರ್ಥ್ಯ ಇದೆ. ಟಾಟಾ ಸಂಸ್ಥೆ ಮಾತ್ರ ವೇಫರ್ ತಯಾರಿಸುತ್ತದೆ. ಚೀನಾ, ತೈವಾನ್ ಹಾಗೂ ಇತರ ದೇಶಗಳು ಚಿಪ್ ತಯಾರಿಕೆಯಲ್ಲಿ ಭಾರತದಕ್ಕಿಂತ ದಶಕಗಳಷ್ಟು ಮುಂದಿವೆ.
ಚೀನಾದಲ್ಲಿ ತಿಂಗಳಿಗೆ ಒಂದು ಕೋಟಿ ವೇಫರ್ ತಯಾರಾಗುತ್ತದೆ. ತೈವಾನ್, ಸೌತ್ ಕೊರಿಯಾ, ಜಪಾನ್, ಅಮೆರಿಕ, ಯೂರೋಪ್ಗಳಲ್ಲಿ 20-60 ಲಕ್ಷ ವೇಫರ್ ತಯಾರಿಸುವ ಸಾಮರ್ಥ್ಯ ಇದೆ.
ಇನ್ನು, ಭಾರತದಲ್ಲಿ 24 ಬಿಲಿಯನ್ ಚಿಪ್ಗಳನ್ನು ತಯಾರಿಸಬಹುದು. ಚೀನಾದಲ್ಲಿ ಇದು 150 ಬಿಲಿಯನ್ಗೂ ಅಧಿಕ ಇದೆ. ಜಪಾನ್ನಲ್ಲಿ 30-50 ಬಿಲಿಯನ್ ಚಿಪ್ ತಯಾರಿಸಬಹುದು. ಚಿಪ್ ತಯಾರಿಕೆ ಪ್ರಮಾಣದಲ್ಲಿ ಭಾರತವು ಜಾಗತಿಕವಾಗಿ ಆರು ಅಥವಾ ಏಳನೇ ಸ್ಥಾನ ಪಡೆಯಬಹುದು. ಮುಂಬರುವ ವರ್ಷಗಳಲ್ಲಿ ಭಾರತವು ಚಿಪ್ ತಯಾರಿಕೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




