ಎಲ್ಎಟಿ ಏರೋಸ್ಪೇಸ್: ಭಾರತದ್ದೇ ಸ್ವಂತ ವಿಮಾನ ಎಂಜಿನ್ ತಯಾರಿಸಲು ಹೊರಟಿದ್ದಾರೆ ಜೊಮಾಟೊ ಸಂಸ್ಥಾಪಕರು
LAT Aerospace to build India's first Indigenous Gas Turbine Engine: ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಈ ವರ್ಷ ಆರಂಭಿಸಿರುವ ಎಲ್ಎಟಿ ಏರೋಸ್ಪೇಸ್ ಸಂಸ್ಥೆ ಹೊಸ ಸಾಹಸಕ್ಕೆ ಕೈಹಾಕಿದೆ. ಗ್ಯಾಸ್ ಟರ್ಬೈನ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಈ ಕಂಪನಿ. ಇದು ಸಾಧ್ಯವಾದರೆ ಭಾರತಕ್ಕೆ ಹೊಸ ಇತಿಹಾಸ ಎನಿಸುತ್ತದೆ. ಅಮೆರಿಕ ಸೇರಿದಂತೆ ಏಳು ದೇಶಗಳಿಗೆ ಮಾತ್ರ ಈ ಎಂಜಿನ್ ತಯಾರಿಸುವ ಸಾಮರ್ಥ್ಯ ಇರುವುದು.

ಬೆಂಗಳೂರು, ಆಗಸ್ಟ್ 1: ಭಾರತದ ರಕ್ಷಣಾ ಕ್ಷೇತ್ರವನ್ನು ರೋಮಾಂಚನಗೊಳಿಸುವ ಬೆಳವಣಿಗೆ ನಡೆಯುತ್ತಿದೆ. ಜೊಮಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ (Deepinder Goyal) ಅವರು ಎಲ್ಎಟಿ ಏರೋಸ್ಪೇಸ್ (LAT Aerospace) ಎನ್ನುವ ಕಂಪನಿಯನ್ನು ಸ್ಥಾಪಿಸಿದ್ದಾರೆ. ಭಾರತದ ಡಿಆರ್ಡಿಒಗೂ ಸಾಧ್ಯವಾಗದ ಸಾಹಸವನ್ನು ಈ ಕಂಪನಿ ಮಾಡಲು ಹೊರಟಿದೆ. ಸ್ವಂತವಾಗಿ ಗ್ಯಾಸ್ ಟರ್ಬೈನ್ ಎಂಜಿನ್ (Gas Turbine Engine) ಅನ್ನು ತಯಾರಿಸಲಿದೆ. ಇದೇನಾದರೂ ಯಶಸ್ವಿಯಾದಲ್ಲಿ ಭಾರತದ ಮೊದಲ ದೇಶೀಯ ನಿರ್ಮಿತ (Indigenously built) ಗ್ಯಾಸ್ ಟರ್ಬೈನ್ ಎಂಜಿನ್ ಇದಾಗಲಿದೆ. ವಿಶ್ವದ ಆರೇಳು ದೇಶಗಳು ಮಾತ್ರ ಈ ಇಂಜಿನ್ ತಯಾರಿಸುವ ಸಾಮರ್ಥ್ಯ ಇರುವುದು.
ದೀಪಿಂದರ್ ಗೋಯಲ್ 2008ರಲ್ಲಿ ಜೊಮಾಟೋ ಕಟ್ಟಿದ್ದರು. ನಂತರ, ಬ್ಲಿಂಕಿಟ್, ಡಿಸ್ಟ್ರಿಕ್ಟ್, ಹೈಪರ್ಪ್ಯೂರ್, ಫೀಡಿಂಗ್ ಇಂಡಿಯಾ, ಟೆಂಪಲ್ ಅನ್ನೂ ಕಟ್ಟಿದ್ಧಾರೆ. ಇದೀಗ ಜೊಮಾಟೊದ ಮಾಜಿ ಸಿಒಒ ಸುರಭಿ ದಾಸ್ ಅವರ ಜೊತೆ ಸೇರಿ ಎಲ್ಎಟಿ ಏರೋಸ್ಪೇಸ್ ಸ್ಥಾಪಿಸಿದ್ದಾರೆ. ಇದು ಸುಮಾರು 12ರಿಂದ 25 ಸೀಟುಗಳಿರುವ ಸಣ್ಣ ವಿಮಾನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಅಗ್ಗದ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಕಲ್ಪ ಹೊಂದಿದೆ.
ಇದೇ ಕಂಪನಿಯು ಗ್ಯಾಸ್ ಟರ್ಬೈನ್ ಎಂಜಿನ್ ಅನ್ನೂ ಅಭಿವೃದ್ಧಿಪಡಿಸಲು ಹೊರಟಿದೆ. ಇವೆರಡೂ ಕಾರ್ಯಗಳು ಯಶಸ್ವಿಯಾದಲ್ಲಿ ಭಾರತದ ಏರೋಸ್ಪೇಸ್ ಉದ್ಯಮ ಇಡೀ ವಿಶ್ವವನ್ನೇ ಬೆರಗುಳಿಸಬಹುದು. ವಿಮಾನಗಳು ಪ್ರತೀ ಪಟ್ಟಣಗಳನ್ನೂ ತಲುಪಬಹುದು. ಪೂರ್ಣವಾಗಿ ವಿಮಾನದ ತಯಾರಿಕೆ ಮಾಡಬಹುದು.
ಬೆಂಗಳೂರಿನಲ್ಲಿ ಎಲ್ಎಟಿ ಎರೋಸ್ಪೇಸ್ನ ರಿಸರ್ಚ್ ಸೆಂಟರ್ ಸ್ಥಾಪನೆಯಾಗಿದೆ. ಇಲ್ಲಿ ಬಹಳಷ್ಟು ಎಂಜಿನಿಯರುಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಗ್ಯಾಸ್ ಟರ್ಬೈನ್ ಎಂಜಿನ್ ತಯಾರಿಸಲು ಡಿಆರ್ಡಿಒ ಈ ಹಿಂದೆ ಪ್ರಯತ್ನ ಮಾಡಿದ್ದಿದೆ. ಕಾವೇರಿ ಎಂಜಿನ್ ತಯಾರಿಸಲಾಯಿತಾದರೂ ಅದು ಯಶಸ್ವಿಯಾಗಲಿಲ್ಲ. ಈಗ ಎಲ್ಎಟಿ ಏರೋಸ್ಪೇಸ್ ಪ್ರಯತ್ನ ಅಡಿ ಇಟ್ಟಿದೆ.
ಗೋಯಲ್ ಲಿಂಕ್ಡ್ಇನ್ ಪೋಸ್ಟ್
‘ನೀವೆಂದಾದರೂ ಟರ್ಬೈನ್, ರೋಟರ್, ಕಂಟ್ರೋಲ್ ಸಿಸ್ಟಂ ಅಥವಾ ಆ ರೀತಿಯಂತಹದ್ದೇನಾದರೂ ನಿರ್ಮಿಸಿದ್ದರೆ, ಮತ್ತು ಹೊಸ ಇತಿಹಾಸ ನಿರ್ಮಾಣದಲ್ಲಿ ಪಾಲುದಾರನಾಗಲು ಬಯಸುತ್ತಿದ್ದರೆ ನಮ್ಮನ್ನು ಸಂಪರ್ಕಿಸಿ’ ಎಂದು ದೀಪಿಂದರ್ ಗೋಯಲ್ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ
‘ಬ್ಯುಸಿನೆಸ್ ಜನರಿಂದ ಅನುಮೋದನೆಗೆ ಕಾಯಬೇಕಿಲ್ಲ. ಮೀಟಿಂಗ್ ಮೇಲೆ ಮೀಟಿಂಗ್ ಮಾಡಬೇಕಿಲ್ಲ. ಪ್ರಾಬ್ಲಮ್ ಸಾಲ್ವಿಂಗ್ ಮಾಡುವುದು, ಬೆಂಚ್ ಟೆಸ್ಟ್ ಮಾಡುವುದು, ಸಪ್ಲಯರ್ಗಳ ಜೊತೆ ಕೆಲಸ ಮಾಡುವುದು, ಹಾರ್ಡ್ವೇರ್ ಅನ್ನು ಮೊದಲಿಂದ ನಿರ್ಮಿಸುವುದು ಇವೆಲ್ಲವೂ ಆಗುತ್ತಿರುತ್ತದೆ’ ಎಂದು ಅವರು ಬರೆದಿದ್ದಾರೆ.
ಕೆಲವೇ ದೇಶಗಳಿಗೆ ಗೊತ್ತು ಈ ಎಂಜಿನ್
ಅಂದಹಾಗೆ, ಹ್ಯಾಸ್ ಟರ್ಬೈನ್ ಎಂಜಿನ್ ತಯಾರಿಸುವುದು ಅಷ್ಟು ಸುಲಭದ್ದಲ್ಲ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಜಪಾನ್ ದೇಶಗಳ ಕೆಲ ಕಂಪನಿಗಳು ಮಾತ್ರವೇ ಈ ಎಂಜಿನ್ ತಯಾರಿಸುತ್ತವೆ. ಭಾರತದಲ್ಲಿ ಸದ್ಯ ವಿಮಾನ ತಯಾರಿಸಲು ಯತ್ನಗಳಾಗುತ್ತಿವೆಯಾದರೂ ಎಂಜಿನ್ ಅನ್ನು ಆಮದು ಮಾಡಿಕೊಳ್ಳಬೇಕು. ಈಗ ಎಲ್ಎಟಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಭಾರತ ಪೂರ್ಣ ಸ್ವಾವಲಂಬನೆ ಪಡೆಯಲು ಸಾಧ್ಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




