ಎಟರ್ನಲ್ ಎಂದು ಹೆಸರು ಬದಲಿಸಿಕೊಂಡ ಜೊಮಾಟೊ; ಅದರ ಆ್ಯಪ್ ಹೆಸರಲ್ಲಿ ಇರೋದಿಲ್ಲ ಬದಲಾವಣೆ
Zomato name changed to Eternal: ಫೂಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಬಿಸಿನೆಸ್ಗಳನ್ನು ಹೆಚ್ಚಿಸುವುದರ ಜೊತೆಗೆ ಈಗ ಹೆಸರು ಬದಲಾವಣೆ ಕೂಡ ಮಾಡಿಕೊಂಡಿದೆ. ಜೊಮಾಟೊದ ಕಾರ್ಪೊರೇಟ್ ಹೆಸರು ಎಟರ್ನಲ್ ಎಂದಾಗಿರಲಿದೆ. ಎಟರ್ನಲ್ ಲಿಮಿಟೆಡ್ ಕಂಪನಿಯ ಅಡಿಯಲ್ಲಿ ಜೊಮಾಟೊ, ಬ್ಲಿಂಕಿಟ್, ಹೈಪರ್ಪ್ಯೂರ್ ಮತ್ತು ಡಿಸ್ಟ್ರಿಕ್ಟ್ ಕಂಪನಿಗಳು ಬರಲಿವೆ. ಈ ನಾಲ್ಕು ಬಿಸಿನೆಸ್ಗಳಿಗೂ ಪ್ರತ್ಯೇಕ ಸಿಇಒಗಳಿದ್ದಾರೆ. ದೀಪಿಂದರ್ ಗೋಯಲ್ ಅವರು ಇಡೀ ಗ್ರೂಪ್ಗೆ ಸಿಇಒ ಆಗಿ ಮುಂದುವರಿಯಲಿದ್ದಾರೆ.

ನವದೆಹಲಿ, ಫೆಬ್ರುವರಿ 6: ಜೊಮಾಟೊ ಲಿ ಎಂದಿದ್ದ ಕಂಪನಿಯ ಹೆಸರನ್ನು ಎಟರ್ನಲ್ ಲಿ ಎಂದು ಬದಲಿಸಲಾಗಿದೆ. ಈ ನಾಮ ಬದಲಾವಣೆಗೆ ಜೊಮಾಟೊದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಆ ಸಂಸ್ಥೆ ಇಂದು ಗುರುವಾರ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಜೊಮಾಟೋದ ಕಾರ್ಪೊರೇಟ್ ಹೆಸರು ಬದಲಾಗಿದೆ. ಆದರೆ, ಅದರ ಫೂಡ್ ಆ್ಯಪ್ನಲ್ಲಿನ ಜೊಮಾಟೋ ಹೆಸರು ಹಾಗೇ ಇರುತ್ತದೆ. ಅಂದರೆ, ಜೊಮಾಟೋ ಆ್ಯಪ್ನ ಹೆಸರಲ್ಲಿ ಬದಲಾವಣೆ ಇರುವುದಿಲ್ಲ.
ಯಾಕೆ ಈ ಹೆಸರು ಬದಲಾವಣೆ?
ಜೊಮಾಟೋ ಸಂಸ್ಥೆ ಮೂಲತಃ ಫೂಡ್ ಟೆಕ್ ಕಂಪನಿ. ನಂತರ ಅದರ ಕಾರ್ಯಕ್ಷೇತ್ರ ವಿಸ್ತರಿಸುತ್ತಾ ಬಂದಿದೆ. ಬ್ಲಿಂಕಿಟ್ ಎನ್ನುವ ಕ್ವಿಕ್ ಕಾಮರ್ಸ್ ಕಂಪನಿಯನ್ನು ಖರೀದಿಸಿತು. ಲಾಜಿಸ್ಟಿಕ್ಸ್ ಬಿಸಿನೆಸ್ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪನಿಗೆ ಪ್ರತ್ಯೇಕ ಐಡೆಂಟಿಟಿ ಇರುವ ಅವಶ್ಯಕತೆ ಇತ್ತು. ಹೀಗಾಗಿ, ಎಟರ್ನಲ್ ಎಂದು ಹೆಸರು ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಹೆಸರಿಗೆ ಮೇಡ್ ಇನ್ ಇಂಡಿಯಾ; ಒಳಗಿರೋವೆಲ್ಲವೂ ಚೀನೀ ಬಿಡಿಭಾಗಗಳೇ… ಪಕ್ಕಾ ದೇಶೀ ಡ್ರೋನ್ಗಳಿಗೆ ಪರದಾಡುತ್ತಿರುವ ಭಾರತೀಯ ಸೇನೆ
‘ಬ್ಲಿಂಕಿಟ್ ಸಂಸ್ಥೆಯನ್ನು ಖರೀದಿಸಿದಾಗಲೇ ಜೊಮಾಟೋ ಸಂಸ್ಥೆ ಆಂತರಿಕವಾಗಿ ‘ಎಟರ್ನಲ್’ ಐಡೆಂಟಿಟಿಯನ್ನು ಬಳಸುತ್ತಿತ್ತು. ಕಂಪನಿ ಹಾಗೂ ಅದರ ಬ್ರ್ಯಾಂಡ್ ನಡುವೆ ಪ್ರತ್ಯೇಕ ಗುರುತಿಗೆ ಈ ಕ್ರಮ ಅನುಸರಿಸಲಾಗುತ್ತಿತ್ತು. ಜೊಮಾಟೋ ಹೊರತಾದ ಬೇರೆ ಬಿಸಿನೆಸ್ ನಮ್ಮ ಭವಿಷ್ಯಕ್ಕೆ ಹೊಸ ದೊಡ್ಡ ಹಾದಿ ಕಲ್ಪಿಸುತ್ತಿದೆ ಎಂದ ದಿನ ಕಂಪನಿಯ ಹೆಸರನ್ನು ಎಟರ್ನಲ್ ಎಂದು ಸಾರ್ವತ್ರಿಕವಾಗಿ ಬದಲಿಸುವುದು ಎಂದು ಮೊದಲೇ ನಿಶ್ಚಯಿಸಿದ್ದೆವು. ಇವತ್ತು ಬ್ಲಿಂಕಿಟ್ನೊಂದಿಗೆ ನಮಗೆ ಆ ದಿನ ಬಂದಿದೆ’ ಎಂದು ಜೊಮಾಟೋ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಗ್ರೂಪ್ ಸಿಇಒ ದೀಪಿಂದರ್ ಗೋಯಲ್ ಗುರುವಾರ ಬಿಎಸ್ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈಗ ಜೊಮಾಟೊದ ಹೆಸರು ಬದಲಾವಣೆಯನ್ನು ಷೇರು ವಿನಿಮಯ ಕೇಂದ್ರಗಳ ಲಿಸ್ಟಿಂಗ್ನಲ್ಲಿ ಕಾಣಬಹುದು. ಜೊಮಾಟೊ ಬದಲು ಎಟರ್ನಲ್ ಹೆಸರನ್ನು ಕಾಣುತ್ತೀರಿ. ನಿಮ್ಮ ಊಟಕ್ಕೆ ಬುಕ್ ಮಾಡಲು ಬಳಸುವ ಜೊಮಾಟೊ ಆ್ಯಪ್ನ ಹೆಸರು ಮತ್ತು ಅದರ ಬ್ರ್ಯಾಂಡಿಂಗ್ ಹಾಗೆಯೇ ಇರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ವಾಹನಗಳ ರೀಟೇಲ್ ಮಾರಾಟ ಜನವರಿಯಲ್ಲಿ ಶೇ. 7ರಷ್ಟು ಹೆಚ್ಚಳ
ಎಟರ್ನಲ್ ಸಂಸ್ಥೆಯ ಅಡಿಯಲ್ಲಿ ಈ ಕೆಳಗಿನ ನಾಲ್ಕು ಬ್ರ್ಯಾಂಡ್ ಅಥವಾ ಬಿಸಿನೆಸ್ ಇವೆ: ಜೊಮಾಟೊ, ಬ್ಲಿಂಕಿಟ್, ಹೈಪರ್ಪ್ಯೂರ್, ಡಿಸ್ಟ್ರಿಕ್ಟ್.
ಇಲ್ಲಿ ಹೈಪರ್ಪ್ಯೂರ್ ಎಂಬುದು ರೆಸ್ಟೋರೆಂಟ್, ಕೆಫೆ, ಹೋಟೆಲ್ಗಳಿಗೆ ಬೇಕಾದ ತರಕಾರಿ, ದಿನಸಿ ಇತ್ಯಾದಿ ಆಹಾರವಸ್ತುಗಳನ್ನು ಹೋಲ್ಸೇಲ್ ದರದಲ್ಲಿ ಸರಬರಾಜು ಮಾಡುವ ಒಂದು ಸೇವೆ. ಡಿಸ್ಟ್ರಿಕ್ಟ್ ಎಂಬುದು ಬುಕ್ ಮೈ ಶೋ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್ ಬುಕ್ ಮಾಡುವುದು ಇತ್ಯಾದಿ ಸೇವೆ ನೀಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ