AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸರಿಗೆ ಮೇಡ್ ಇನ್ ಇಂಡಿಯಾ; ಒಳಗಿರೋವೆಲ್ಲವೂ ಚೀನೀ ಬಿಡಿಭಾಗಗಳೇ… ಪಕ್ಕಾ ದೇಶೀ ಡ್ರೋನ್​ಗಳಿಗೆ ಪರದಾಡುತ್ತಿರುವ ಭಾರತೀಯ ಸೇನೆ

Pure Made-in-India drones for Indian army: ಐಜಿ ಡ್ರೋನ್ಸ್ ಎನ್ನುವ ಭಾರತೀಯ ಡ್ರೋನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗೆ ಭಾರತೀಯ ಸೇನೆಯಿಂದ ಗುತ್ತಿಗೆ ಸಿಕ್ಕಿದೆ. ಚೀನೀ ಬಿಡಿಭಾಗಗಳು ಇಲ್ಲದೇ ಇರುವ ಡ್ರೋನ್​ಗಳನ್ನು ತಯಾರಿಸಿ ಸರಬರಾಜು ಮಾಡುವಂತೆ ತಿಳಿಸಿದೆ. ಹೆಚ್ಚಿನ ಭಾರತೀಯ ಕಂಪನಿಗಳು ಭಾರತದಲ್ಲಿ ಡ್ರೋನ್ ತಯಾರಿಸಿದರೂ ಅದಕ್ಕೆ ಬೇಕಾದ ಪ್ರಮುಖ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡುತ್ತವೆ. ಇದರಿಂದ ಡ್ರೋನ್​ಗಳನ್ನು ಹ್ಯಾಕ್ ಮಾಡುವುದು ಸುಲಭವಾಗುತ್ತದೆ. ಶತ್ರುಗಳ ಕೈಗೆ ಜುಟ್ಟು ಕೊಟ್ಟಂತಾಗುತ್ತದೆ.

ಹೆಸರಿಗೆ ಮೇಡ್ ಇನ್ ಇಂಡಿಯಾ; ಒಳಗಿರೋವೆಲ್ಲವೂ ಚೀನೀ ಬಿಡಿಭಾಗಗಳೇ... ಪಕ್ಕಾ ದೇಶೀ ಡ್ರೋನ್​ಗಳಿಗೆ ಪರದಾಡುತ್ತಿರುವ ಭಾರತೀಯ ಸೇನೆ
ಡ್ರೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2025 | 4:38 PM

Share

ನವದೆಹಲಿ, ಫೆಬ್ರುವರಿ 6: ಈಗ ವಿಶ್ವದ ಹಲವು ಮಿಲಿಟರಿಗಳಿಗೆ ಕ್ಷಿಪಣಿಗಳ ರೀತಿಯಲ್ಲಿ ಡ್ರೋನ್​ಗಳೂ ಕೂಡ ಪ್ರಮುಖ ಅಸ್ತ್ರಗಳಾಗಿವೆ. ಗುಪ್ತಚರ ಕಾರ್ಯಗಳಿಗೆ ಮಾತ್ರವಲ್ಲ, ಬಾಂಬ್ ದಾಳಿಗಳಿಗೂ ಈ ಡ್ರೋನ್​ಗಳು ಸಹಾಯವಾಗುತ್ತವೆ. ಭಾರತೀಯ ಸೇನೆಯೂ ಕೂಡ ಸಾಕಷ್ಟು ಡ್ರೋನ್​ಗಳನ್ನು ಖರೀದಿಸಿದೆ. ಭಾರತದಲ್ಲಿ ತಯಾರಾದ (ಮೇಡ್ ಇನ್ ಇಂಡಿಯಾ) ಡ್ರೋನ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ಮಿಲಿಟರಿ ಕೈ ಸೇರಿದೆ. ಸೇನೆಯ ಡ್ರೋನ್ ವಿಭಾಗ ಗಟ್ಟಿಯಾಯಿತು ಎನ್ನುವಷ್ಟರಲ್ಲಿ ಬೆಚ್ಚಿಬೀಳಿಸುವ ಘಟನೆಗಳು ನಡೆದಿವೆ. ಈ ಕೆಲ ಮೇಡ್ ಇನ್ ಇಂಡಿಯಾ ಡ್ರೋನ್​ಗಳನ್ನು ಹ್ಯಾಕ್ ಮಾಡಿ ಹೈಜ್ಯಾಕ್ ಮಾಡಲಾಗಿರುವ ಘಟನೆಗಳು ಇವು. ಗಡಿಭಾಗದಲ್ಲಿ ಸರ್ವೇಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಈ ಡ್ರೋನ್​ಗಳನ್ನು ಶತ್ರುಗಳು ಹ್ಯಾಕ್ ಮಾಡಿ ಅವರ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಇದೊಂದು ರೀತಿಯಲ್ಲಿ ಭಾರತೀಯ ಸೇನೆಗೆ ಎಚ್ಚರಿಕೆಯ ಕರೆಗಂಟೆಯಂತಾಗಿದೆ.

ಹೆಸರಿಗೆ ಮೇಡ್ ಇನ್ ಇಂಡಿಯಾ… ಒಳಗಿರೋದು ಚೀನೀ ಬಿಡಿಭಾಗಗಳು…

ಭಾರತೀಯ ಸೇನೆ ಮೇಡ್ ಇನ್ ಇಂಡಿಯಾ ಡ್ರೋನ್​ಗಳನ್ನೇ ಖರೀದಿ ಮಾಡಿರುವುದು ಹೌದು. ಆದರೆ, ಈ ಡ್ರೋನ್​ಗಳು ಪೂರ್ಣ ಮೇಡ್ ಇನ್ ಇಂಡಿಯಾ ಅಲ್ಲ. ಪ್ರಮುಖ ಬಿಡಿಭಾಗಗಳನ್ನು ಚೀನಾದಿಂದ ತರಿಸಿ ಭಾರತದಲ್ಲಿ ಅಸೆಂಬ್ಲಿಂಗ್ ಮಾಡಲಾದಂತಹ ಡ್ರೋನ್​ಗಳಿವು. ಈ ಬಿಡಿಭಾಗಗಳ ಸಹಾಯದಿಂದ ಶತ್ರುಗಳು ಈ ಡ್ರೋನ್ ಅನ್ನು ಹ್ಯಾಕ್ ಮಾಡಿರುವ ಶಂಕೆ ಇದೆ.

ಇದನ್ನೂ ಓದಿ: Viral: ಅಬ್ಬಬ್ಬಾ… ಹೇಗಿದೆ ನೋಡಿ ಚೀನಾದ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ

ಡ್ರೋನ್ ಲೋಕಕ್ಕೆ ಚೀನಾ ದೇಶವೇ ಸಾಮ್ರಾಟ. ವಿಶ್ವದ ಶೇ. 80ರಷ್ಟು ಡ್ರೋನ್ ಭಾಗಗಳು ಚೀನಾದಿಂದಲೇ ಪೂರೈಕೆ ಆಗುತ್ತದೆ. ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ನಾಯಿಕೊಡೆಗಳಂತೆ ಡ್ರೋನ್ ಕಂಪನಿಗಳು ತಲೆ ಎತ್ತಿವೆ. ಹೆಚ್ಚಿನ ಕಂಪನಿಗಳು ಚೀನಾದಿಂದ ಕಡಿಮೆ ದರಕ್ಕೆ ಬಿಡಿಭಾಗಗಳನ್ನು ತರಿಸಿ ಇಲ್ಲಿಯೇ ಅಸೆಂಬಲ್ ಮಾಡುತ್ತವೆ. ಅದಕ್ಕೆ ಮೇಡ್ ಇನ್ ಇಂಡಿಯಾ ಲೇಬಲ್ ಹಾಕುತ್ತವೆ. ಎಂಜಿನ್, ಹೈಡ್ರೋ ಡ್ರೈವ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸ್, ಏರ್​ಫ್ರೇಮ್ ಮತ್ತಿತರ ಪ್ರಮುಖ ಕಾಂಪೊನೆಂಟ್​ಗಳನ್ನು ಭಾರತೀಯ ಕಂಪನಿಗಳಿಂದ ಪಡೆಯುವುದರ ಬದಲು ಚೀನೀ ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಡ್ರೋನ್ ಬಿಡಿಭಾಗಗಳನ್ನು ಪೂರೈಸಿದ ಕಂಪನಿಯ ಬಳಿ ಈ ಡ್ರೋನ್​ಗಳನ್ನು ಹ್ಯಾಕ್ ಮಾಡಬಲ್ಲ ದತ್ತಾಂಶ ಇರುತ್ತದೆ. ಡ್ರೋನ್ ಸಾಗುವ ಹಾದಿ ಇತ್ಯಾದಿಯನ್ನು ಈ ಕಾಂಪೊನೆಂಟ್ ಮೂಲಕ ನಿಯಂತ್ರಿಸಬಹುದು. ಒಂದು ಘಟನೆಯಲ್ಲಿ, ಪಾಕಿಸ್ತಾನದ ಗಡಿ ಬಹಳ ಪಹರೆ ಮಾಡುತ್ತಿದ್ದ ಡ್ರೋನ್ ವಿಚಿತ್ರವಾಗಿ ಭಾರತೀಯ ಸೈನಿಕರ ನಿಯಂತ್ರಣ ತಪ್ಪಿ ಗಡಿಯ ಆ ಬದಿಗೆ ಹೋಯಿತು. ಪಾಕಿಸ್ತಾನದ ಆ ಬದಿಯಿಂದ ಬೇರೆ ವ್ಯಕ್ತಿಗಳು ಈ ಡ್ರೋನ್ ಅನ್ನು ಹ್ಯಾಕ್ ಮಾಡಿ, ತಮ್ಮೆಡೆಗೆ ಬರುವಂತೆ ಮಾಡಿದ್ದರು.

ನೈಜ ಯುದ್ಧದ ಸಂದರ್ಭದಲ್ಲಿ ಇಂಥದ್ದು ನಡೆದರೆ ಏನಾಗಬಹುದು ಎಂದು ಊಹಿಸುವುದೂ ಕಷ್ಟ. ಭಾರತೀಯ ಸೇನೆಯು ಮೇಡ್ ಇನ್ ಇಂಡಿಯಾ ವಿಚಾರದಲ್ಲಿ ಒಂದಷ್ಟು ನಿಯಮಗಳನ್ನು ಹೊಂದಿದೆ. ಒಂದು ಉತ್ಪನ್ನದ ತಯಾರಿಕೆಯಲ್ಲಿ ಬಳಸಲಾಗುವ ಭಾಗಗಳಲ್ಲಿ ಅರ್ಧದಷ್ಟಾದರೂ ಭಾರತದಲ್ಲಿ ತಯಾರಾಗಿರಬೇಕು ಎನ್ನುವ ನೀತಿ ಇದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್​​ಬಿಐ ನಿರ್ದೇಶನ

ಐಜಿ ಡ್ರೋನ್​ಗಳಿಗೆ ಆರ್ಡರ್ ಕೊಟ್ಟ ಸೇನೆ…

ಇದೇ ವೇಳೆ, ಭಾರತೀಯ ಡ್ರೋನ್ ತಯಾರಿಕಾ ಕಂಪನಿಯಾದ ಐಡಿ ಡ್ರೋನ್ಸ್​ಗೆ ಭಾರತೀಯ ಸೇನೆಯಿಂದ ಆರ್ಡರ್ ಸಿಕ್ಕಿದೆ. ದೇಶೀಯವಾಗಿ ಅಭಿವೃದ್ಧಿಯಾದ ವಿಡಿಒಎಲ್ ಮತ್ತು ಎಫ್​ಪಿವಿ ಡ್ರೋನ್​ಗಳನ್ನು ಪೂರೈಸುವಂತೆ ಈ ಕಂಪನಿಯೊಂದಿಗೆ ಸೇನೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಷರತ್ತೆಂದರೆ, ಈ ಡ್ರೋನ್​ಗಳಿಗೆ ಯಾವುದೇ ಚೀನೀ ನಿರ್ಮಿತ ಬಿಡಿಭಾಗಗಳು ಇರಬಾರದು.

ಐಜಿ ಡ್ರೋನ್ಸ್ ಕಂಪನಿ ತಯಾರಿಸುವ ಡ್ರೋನ್​ಗಳಲ್ಲಿ ಎಲ್ಲವೂ ದೇಶೀಯವಾಗಿ ನಿರ್ಮಿತವಾದುವಲ್ಲ. ಕ್ಯಾಮರಾದಂತಹ ಬಿಡಿಭಾಗಗಳನ್ನು ವಿದೇಶದಿಂದ ತರಿಸಲಾಗುತ್ತದೆ. ಆದರೆ, ಚೀನಾದಿಂದ ಯಾವ ಭಾಗವೂ ಸರಬರಾಜಾಗುವುದಿಲ್ಲ. ಈ ಕಾರಣಕ್ಕೆ ಐಜಿ ಡ್ರೋನ್ಸ್ ಕಂಪನಿಗೆ ಡ್ರೋನ್ಸ್ ಸರಬರಾಜು ಗುತ್ತಿಗೆಯನ್ನು ಸೇನೆ ನೀಡಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ