ಎನ್ಬಿಎಫ್ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್ಬಿಐ ನಿರ್ದೇಶನ
RBI directive to NBFCs: ದೊಡ್ಡ ಎನ್ಬಿಎಫ್ಸಿಗಳು ತಮ್ಮ ವಿವಿಧ ವಿಭಾಗಗಳ ಸಾಲಗಳಿಗೆ ಗರಿಷ್ಠ ಎಷ್ಟು ಬಡ್ಡಿ ವಿಧಿಸುತ್ತವೆ ಎಂಬುದನ್ನು ಆರ್ಬಿಐಗೆ ನಿರ್ದಿಷ್ಟಪಡಿಸಬೇಕು. ಈ ಬಗ್ಗೆ ಈ ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ. ಗರಿಷ್ಠ ಬಡ್ಡಿದರದ ಬಗ್ಗೆ ಎನ್ಬಿಎಫ್ಸಿಗಳು ಮಂಡಳಿ ಅನುಮೋದನೆ ಪಡೆಯಬೇಕು. ಬಡ್ಡಿಮಿತಿ ಹೆಚ್ಚಿಸಿದಲ್ಲಿ ಅದಕ್ಕೂ ಮಂಡಳಿ ಅನುಮೋದನೆ ಪಡೆಯಬೇಕಾಗುತ್ತದೆ.

ನವದೆಹಲಿ, ಫೆಬ್ರುವರಿ 6: ತಮ್ಮ ಗ್ರಾಹಕರಿಗೆ ಗರಿಷ್ಠ ಬಡ್ಡಿದರ ವಿಧಿಸುತ್ತೀರಿ ಎಂದು ವಿವರ ಕೊಡಿ ಎಂದು ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಸಿ) ಆರ್ಬಿಐ ನಿರ್ದೇಶನ ನೀಡಿದೆ. ಪ್ರತಿಯೊಂದು ವಿಭಾಗದ ಸಾಲಕ್ಕೂ ಗರಿಷ್ಠ ಬಡ್ಡಿದರ ಎಷ್ಟು ಎಂಬುದನ್ನು ಈ ಹಣಕಾಸು ಸಂಸ್ಥೆಗಳು ಆರ್ಬಿಐಗೆ ತಿಳಿಸಬೇಕಾಗಿದೆ. ಬಡ್ಡಿದರ, ಇನ್ಷೂರೆನ್ಸ್, ಪ್ರೋಸಸಿಂಗ್ ಫೀಸ್ ಇತ್ಯಾದಿ ಯಾವುದೇ ವೆಚ್ಚಗಳು ಸೇರಿ ಗರಿಷ್ಠ ದರವನ್ನು ಎನ್ಬಿಎಫ್ಸಿಗಳು ನಿರ್ದಿಷ್ಟಪಡಿಸಬೇಕು. ಅಡಮಾನ ಸಾಲ, ವಾಹನ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ ಇತ್ಯಾದಿ ಬೇರೆ ಬೇರೆ ಸಾಲ ವಿಭಾಗದಲ್ಲಿ ಗರಿಷ್ಠ ದರವನ್ನು ಈ ಹಣಕಾಸು ಸಂಸ್ಥೆಗಳು ತಿಳಿಸಬೇಕು. ಇಲ್ಲಿ ಎನ್ಬಿಎಫ್ಸಿಗಳು ತಮ್ಮ ಗರಿಷ್ಠ ಬಡ್ಡಿದರಗಳಿಗೆ ಮಂಡಳಿಯ ಅನುಮೋದನೆ ಪಡೆಯುವುದು ಅಗತ್ಯ ಎಂದೂ ಆರ್ಬಿಐ ಸೂಚಿಸಿದೆ.
ಮೈಕ್ರೋಫೈನಾನ್ಸ್ ಸಂಸ್ಥೆಗಳು, ಎನ್ಬಿಎಫ್ಸಿಗಳು ಹಾಗೂ ಕೆಲ ಬ್ಯಾಂಕ್ಗಳು ಕೆಲ ಗ್ರಾಹಕರಿಂದ ಸಿಕ್ಕಾಪಟ್ಟೆ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಆರೋಪಗಳು ಸಾಕಷ್ಟು ಕೇಳಿಬಂದಿವೆ. ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ನವರ ಉಪಟಳದಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು, ಹಲವು ಕುಟುಂಬಗಳು ಊರು ಬಿಟ್ಟು ಹೋಗಿರುವುದು ಇತ್ಯಾದಿ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಆರ್ಬಿಐನ ಈ ನಡೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಹೈಸ್ಪೀಡ್ ಹೆದ್ದಾರಿಗಳಲ್ಲಿ ಟೋಲ್ ತಡೆಗಳಿಗೆ ಗುಡ್ ಬೈ: ಬರಲಿದೆ ಹೊಸ ವೈಶಿಷ್ಟ್ಯ
ಕಡಿಮೆ ಕ್ರೆಡಿಟ್ ಸ್ಕೋರ್, ಅಡಮಾನಕ್ಕೆ ಆಸ್ತಿ ಇಲ್ಲದಿರುವುದು ಇತ್ಯಾದಿ ಕಾರಣಕ್ಕೆ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಬಹಳಷ್ಟು ಜನರಿಗೆ ಸಾಲ ಸಿಗುವುದಿಲ್ಲ. ಇಂಥವರು ಎನ್ಬಿಎಫ್ಸಿ, ಮೈಕ್ರೋಫೈನಾನ್ಸ್ ಇತ್ಯಾದಿ ಸಂಸ್ಥೆಗಳತ್ತ ಎಡತಾಕುತ್ತಾರೆ. ಇಲ್ಲಿ ಹೆಚ್ಚು ಸುಲಭವಾಗಿ ಸಾಲ ಸಿಗುತ್ತದಾದರೂ ಬಡ್ಡಿದರವೂ ಅತ್ಯಧಿಕ ಇರುತ್ತದೆ ಎನ್ನುವ ಆರೋಪ ಇದೆ
ಕ್ರೆಡಿಟ್ ಸ್ಕೋರ್ ಸರಿ ಇಲ್ಲದ ವ್ಯಕ್ತಿಗೆ ಸಾಲ ಕೊಡುವುದು ಯಾವುದೇ ಹಣಕಾಸು ಸಂಸ್ಥೆಗಾದರೂ ಅಪಾಯ ಇರುವ ಸಂಗತಿ. ಸಾಲ ಮರಳಿಸದಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಇಂಥವರಿಗೆ ಹೆಚ್ಚಿನ ಬಡ್ಡಿದರ ಹಾಕಲಾಗಿರುತ್ತದೆ. ಇಷ್ಟೇ ಬಡ್ಡಿಮಿತಿ ಇರಬೇಕು ಎಂದು ಆರ್ಬಿಐ ಕೂಡ ತಾಕೀತು ಮಾಡಲು ಆಗುವುದಿಲ್ಲ. ಭಾರತದಲ್ಲಿ ಬ್ಯಾಂಕುಗಳು ತಮ್ಮದೇ ಬಡ್ಡಿದರ ನಿಗದಿ ಮಾಡಿಕೊಳ್ಳಲು ಸ್ವತಂತ್ರ ಇರುತ್ತವೆ. ಆದರೂ ಕೂಡ ಬ್ಯಾಂಕುಗಳಿಗೆ ಯಜಮಾನನಾಗಿರುವ ಆರ್ಬಿಐ, ಇವುಗಳತ್ತ ಒಂದು ಕಣ್ಣಿಡುವುದು ಅನಿವಾರ್ಯವಾಗಿರುತ್ತದೆ.
ಇದನ್ನೂ ಓದಿ: ಟಿಡಿಎಸ್ ಕ್ರೆಡಿಟ್ ಕ್ಲೈಮ್ ಆಗುತ್ತಿಲ್ಲವಾ? ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನ; ಏನಿದು ಟಿಡಿಎಸ್ ಸಂಗತಿ…?
ಒಂದು ವಿಭಾಗದ ಸಾಲದಲ್ಲಿ ಗರಿಷ್ಠ ದರ ಎಷ್ಟೆಂದು ನಿರ್ದಿಷ್ಟಪಡಿಸಿದರೆ ಆ ಹಣಕಾಸು ಸಂಸ್ಥೆಯು ಆ ದರಮಿತಿಗೆ ಬದ್ಧವಾಗಿರಬೇಕಾಗುತ್ತದೆ. ಈ ದರಕ್ಕೆ ಮಂಡಳಿ ಅನುಮೋದನೆ ಕೊಟ್ಟ ಬಳಿಕ, ದರ ಹೆಚ್ಚಳ ಮಾಡಿದಲ್ಲಿ ಮತ್ತೊಮ್ಮೆ ಮಂಡಳಿಯ ಅನುಮೋದನೆ ಪಡೆಯಬೇಕಾಗುತ್ತದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಇದರ ವರದಿ ಪ್ರಕಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ