AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC Meet: ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಮೊದಲ ಆರ್​ಬಿಐ ಎಂಪಿಸಿ ಸಭೆ; ನಾಳೆ ಬಡ್ಡಿದರ ಕಡಿತ ನಿಶ್ಚಿತವಾ?

First RBI MPC meet under Sanjay Malhotra: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಮೊದಲ ಹಣಕಾಸು ನೀತಿ ಸಮಿತಿ ಫೆ. 5ರಂದು ಆರಂಭವಾಗಿದೆ. ರಿಪೋ ದರ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ನಿರೀಕ್ಷೆ ದಟ್ಟವಾಗಿದೆ. ಫೆಬ್ರುವರಿ 7, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

RBI MPC Meet: ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಮೊದಲ ಆರ್​ಬಿಐ ಎಂಪಿಸಿ ಸಭೆ; ನಾಳೆ ಬಡ್ಡಿದರ ಕಡಿತ ನಿಶ್ಚಿತವಾ?
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2025 | 11:25 AM

Share

ನವದೆಹಲಿ, ಫೆಬ್ರುವರಿ 6: ಆರ್​ಬಿಐನ ನೂತನ ಗವರ್ನರ್ ಆಗಿ ನೇಮಕಗೊಂಡಿರುವ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಇವತ್ತು ಮಾನಿಟರಿ ಪಾಲಿಸಿ ಕಮಿಟಿ ಸಭೆ ನಿನ್ನೆ ಬುಧವಾರ ಶುರುವಾಗಿದೆ. ಮೂರು ದಿನಗಳ ಕಾಲ ಸಭೆ ನಡೆಯಲಿದ್ದು, ನಾಳೆ ಶುಕ್ರವಾರ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ವರದಿಗಳ ಪ್ರಕಾರ, ಈ ಬಾರಿ ಹಣಕಾಸು ನೀತಿ ಸಮಿತಿಯು ಬಹುನಿರೀಕ್ಷಿತ ರಿಪೋ ದರ ಅಥವಾ ಬಡ್ಡಿದರಗಳನ್ನು ಕಡಿಮೆಗೊಳಿಸುವ ಸಾಧ್ಯತೆ ಬಹಳ ದಟ್ಟವಾಗಿದೆ. ನಾಳೆ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಆಗಬಹುದು ಎಂದೇ ಹೆಚ್ಚಿನವರು ಅಂದಾಜು ಮಾಡಿದ್ದಾರೆ.

ಸದ್ಯ ರಿಪೋ ದರ ಶೇ. 6.50 ಇದೆ. 2023ರ ಫೆಬ್ರುವರಿಯಿಂದ, ಅಂದರೆ ಎರಡು ವರ್ಷದಿಂದ ಇದೇ ದರ ಇದೆ. ಅದಕ್ಕೂ ಮುನ್ನ ಆರ್​ಬಿಐ ಹಲವು ತಿಂಗಳ ಕಾಲ ಸತತವಾಗಿ ಬಡ್ಡಿದರ ಏರಿಕೆ ಮಾಡುತ್ತಾ ಹೋಗಿತ್ತು. 2020ರ ಮೇ ಬಳಿಕ ಆರ್​ಬಿಐ ತನ್ನ ದರಗಳನ್ನು ಇಳಿಸಿದ್ದೇ ಇಲ್ಲ. ನಾಲ್ಕರಿಂದ ಐದು ವರ್ಷದ ಬಳಿಕ ಆರ್​ಬಿಐ ಮೊದಲ ಬಾರಿಗೆ ರಿಪೋ ದರ ಇಳಿಸಿದಂತಾಗುತ್ತದೆ.

ಬಜೆಟ್ ಆಶಯಕ್ಕೆ ಅನುಗುಣವಾದ ನಿರ್ಧಾರ ಆರ್​ಬಿಐನಿಂದ?

ಈ ಬಾರಿಯ ಬಜೆಟ್​ನಲ್ಲಿ ಮಧ್ಯಮವರ್ಗದವರಿಗೆ ಸರ್ಕಾರ ಭರ್ಜರಿಯಾಗಿಯೇ ಟ್ಯಾಕ್ಸ್ ರಿಲೀಫ್ ಕೊಟ್ಟಿದೆ. ಸರ್ಕಾರದ ಬಂಡವಾಳ ವೆಚ್ಚದಲ್ಲಿ ಹೆಚ್ಚಿನ ಏರಿಕೆ ಮಾಡಲಾಗಿಲ್ಲ. ಅನುಭೋಗ ಅಥವಾ ಜನರ ವೆಚ್ಚ ಅಧಿಕ ಆಗುವ ರೀತಿಯಲ್ಲಿ ಬಜೆಟ್​ನಲ್ಲಿ ಹೆಜ್ಜೆಗಳನ್ನು ಇಡಲಾಗಿದೆ. ಇದಕ್ಕೆ ಅನುಗುಣವಾಗಿ ಆರ್​ಬಿಐ ಕೂಡ ಬಡ್ಡಿದರ ಇಳಿಕೆ ಮಾಡಿದರೆ, ಮಧ್ಯಮ ವರ್ಗದವರ ಕೈಯಲ್ಲಿ ಮತ್ತಷ್ಟು ಸೇವಿಂಗ್ಸ್ ಸೃಷ್ಟಿಯಾಗುತ್ತದೆ. ಇದು ಮತ್ತಷ್ಟು ಅನುಭೋಗ ಹೆಚ್ಚಿಸಬಹುದು. ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ನಿರೀಕ್ಷೆ ಈ ಕಾರಣಕ್ಕಾಗೇ ದಟ್ಟವಾಗಿ ಕಾಣುತ್ತಿದೆ.

ಇದನ್ನೂ ಓದಿ: ಹೆಚ್ಚು ಸಾಲ ವಸೂಲಿ: ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಮಲ್ಯ

ಹಣದುಬ್ಬರ ಆತಂಕ ಪಡುವ ಮಟ್ಟಕ್ಕೆ ಹೋಗಿಲ್ಲ….

ಆರ್​ಬಿಐ ತನ್ನ ರಿಪೋ ದರ ಇಳಿಸದೇ ಇರಲು ಪ್ರಮುಖ ಕಾರಣ ಇದ್ದದ್ದು ಹಣದುಬ್ಬರ. ದರ ಕಡಿಮೆ ಮಾಡಿಬಿಟ್ಟರೆ ಹಣದುಬ್ಬರ ನಿಯಂತ್ರಣ ತಪ್ಪಿ ಹೋಗಿಬಿಡಬಹುದು ಎನ್ನುವ ಆತಂಕ ಆರ್​ಬಿಐಗೆ ಇತ್ತು. ಆದರೆ, ಸದ್ಯದ ಮಟ್ಟಿಗೆ ಹಣದುಬ್ಬರ ತೀರಾ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಆಹಾರ ಬೆಲೆಗಳು ಮಾತ್ರವೇ ಕೈ ಮೀರಿ ಹೋಗಿರುವುದು. ಮುಂದಿನ ದಿನಗಳಲ್ಲಿ ಆಹಾರವಸ್ತುಗಳ ಬೆಲೆ ತಹಬದಿಗೆ ಬರುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಎಂಪಿಸಿಯಿಂದ ರಿಪೋ ದರ ಕಡಿತದ ನಿರ್ಧಾರ ಬರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ