AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್​ಬಿಐ ಅಂದಾಜು

GDP and Inflation estimation by RBI: ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.4ರಷ್ಟಿರಬಹುದು. ಮುಂದಿನ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಶುಕ್ರವಾರ ಎಂಪಿಸಿ ಸಭೆ ಬಳಿಕ ಈ ಅಂಶಗಳನ್ನು ತಿಳಿಸಿದ್ದಾರೆ. ಹಣದುಬ್ಬರ ದರ ಪ್ರಸಕ್ತ ವರ್ಷ ಶೇ. 4.8ರಷ್ಟು ಇರಬಹುದು. ಮುಂದಿನ ವರ್ಷ ಶೇ. 4.2ರಷ್ಟು ಮಾತ್ರವೇ ಏರಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.

ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್​ಬಿಐ ಅಂದಾಜು
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2025 | 10:40 AM

Share

ನವದೆಹಲಿ, ಫೆಬ್ರುವರಿ 7: ಜಾಗತಿಕವಾಗಿ ಇರುವ ಹಲವು ಸಮಸ್ಯೆ, ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕತೆ ಉತ್ತಮ ಕ್ಷಮತೆ ತೋರುತ್ತಿದೆ. ಆದರೂ ಜಾಗತಿಕ ಆರ್ಥಿಕ ಹಿನ್ನಡೆಯ ಪರಿಣಾಮ ಭಾರತದ ಮೇಲೂ ಆಗಿದೆ ಎಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 6.7ರಷ್ಟು ಬೆಳೆಯಬಹುದು ಎಂದು ಅವರು ತಿಳಿಸಿದ್ದಾರೆ. ಮೊನ್ನೆಯಿಂದ (ಫೆ. 5) ನಡೆದ ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯ ನಿರ್ಧಾರಗಳನ್ನು ಸಂಜಯ್ ಮಲ್ಹೋತ್ರಾ ಇಂದು ಪ್ರಕಟಗೊಳಿಸಿ ಮಾತನಾಡುತ್ತಿದ್ದರು.

ಕಳೆದ ವರ್ಷ ಜಿಡಿಪಿ ಶೇ. 8.2ರಷ್ಟು ಹೆಚ್ಚಿತ್ತು. ಈ ಹಣಕಾಸು ವರ್ಷದಲ್ಲಿ (2024-25) ಶೇ. 6.4ರಷ್ಟು ಹೆಚ್ಚಬಹುದು. ಮುಂದಿನ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಹೇಳಿದ ಸಂಜಯ್ ಮಲ್ಹೋತ್ರಾ, ಎಲ್ಲಾ ನಾಲ್ಕು ಕ್ವಾರ್ಟರ್​ಗಳಲ್ಲಿ ಎಷ್ಟೆಷ್ಟು ಬೆಳವಣಿಗೆ ಆಗಬಹುದು ಎಂದೂ ವಿವರ ನೀಡಿದ್ದಾರೆ.

2025-26ಕ್ಕೆ ಜಿಡಿಪಿ ಬೆಳವಣಿಗೆ: ಆರ್​ಬಿಐ ಅಂದಾಜು

ಇಡೀ ವರ್ಷ: ಶೇ. 6.7

  • ಮೊದಲ ಕ್ವಾರ್ಟರ್: ಶೇ. 6.7
  • ಎರಡನೇ ಕ್ವಾರ್ಟರ್: 7
  • ಮೂರನೇ ಕ್ವಾರ್ಟರ್: 6.5
  • ನಾಲ್ಕನೇ ಕ್ವಾರ್ಟರ್: 6.5

ಇದನ್ನೂ ಓದಿ: RBI MPC Updates: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್​ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ

ಹಣದುಬ್ಬರ ಶೇ. 4.4ರಷ್ಟಿರಬಹುದು…

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣದುಬ್ಬರ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪಾದನೆ ಹೆಚ್ಚಬಹುದು ಎಂದಿದ್ದಾರೆ. ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.8ರಷ್ಟಿರಬಹುದು ಎಂದಿದ್ದಾರೆ. ಪ್ರಸಕ್ತ ಕ್ವಾರ್ಟರ್​ನಲ್ಲಿ (ಜನವರಿಯಿಂದ ಮಾರ್ಚ್) ಹಣದುಬ್ಬರ ಶೇ. 4.4ರಷ್ಟಿರಬಹುದು ಎನ್ನುವುದು ಅವರ ಅಂದಾಜು. ಮುಂಬರುವ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 4.2ರಷ್ಟಿರಬಹುದು ಎಂಬುದು ಅವರ ಅನಿಸಿಕೆ.

2025-26ಕ್ಕೆ ಹಣದುಬ್ಬರ: ಆರ್​ಬಿಐ ಅಂದಾಜು

ಇಡೀ ವರ್ಷ: ಶೇ. 4.2

  • ಮೊದಲ ಕ್ವಾರ್ಟರ್: ಶೇ. 4.5
  • ಎರಡನೇ ಕ್ವಾರ್ಟರ್: 4
  • ಮೂರನೇ ಕ್ವಾರ್ಟರ್: 3.8
  • ನಾಲ್ಕನೇ ಕ್ವಾರ್ಟರ್: 4.2

ಇದ್ನೂ ಓದಿ: ಎನ್​ಬಿಎಫ್​ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್​​ಬಿಐ ನಿರ್ದೇಶನ

ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವುದು ಆರ್​ಬಿಐನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಣದುಬ್ಬರ ದರದ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಿದೆ. ಅಂದರೆ ಹಣದುಬ್ಬರ ಈ ಪರಿಧಿಗಿಂತ ಹೊರಗೆ ಹೋಗದಂತೆ ನೋಡಿಕೊಳ್ಳುವುದು ಆರ್​ಬಿಐಗೆ ಪ್ರಮುಖ ಆದ್ಯತೆ ಆಗಿರುತ್ತದೆ. ಅಂತಿಮವಾಗಿ ಹಣದುಬ್ಬರ ಶೇ. 4ರ ಸಮೀಪ ಇರುವಂತೆ ನೋಡಿಕೊಳ್ಳುವುದು ಗುರಿ. ಕಳೆದ ಹಲವು ತಿಂಗಳಿಂದ ಹಣದುಬ್ಬರ ಬಹುತೇಕ ಇದೇ ಪರಿಧಿಯಲ್ಲೇ ಇದೆ ಎನ್ನುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ