AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ವಾಹನಗಳ ರೀಟೇಲ್ ಮಾರಾಟ ಜನವರಿಯಲ್ಲಿ ಶೇ. 7ರಷ್ಟು ಹೆಚ್ಚಳ

Automobile retail sales in India: ಭಾರತದಲ್ಲಿ 2025ರ ಜನವರಿ ತಿಂಗಳಲ್ಲಿ ಒಟ್ಟು 22,91,621 ವಾಹನಗಳ ಮಾರಾಟವಾಗಿದೆ. ಇದರಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ,, ಪ್ಯಾಸಂಜರ್ ವಾಹನ, ಕಮರ್ಷಿಯಲ್ ವಾಹನ, ಟ್ರಾಕ್ಟರ್​ಗಳೂ ಸೇರಿವೆ. ಪ್ಯಾಸೆಂಜರ್ ವಾಹನಗಳ ಮಾರಾಟ ಸಂಖ್ಯೆ ಕಳೆದ ವರ್ಷದಕ್ಕೆ ಹೋಲಿಸಿದರೆ ಬರೋಬ್ಬರಿ ಶೇ. 16ರಷ್ಟು ಹೆಚ್ಚಾಗಿದೆ. ಒಟ್ಟಾರೆ ವಾಹನಗಳ ಮಾರಾಟದಲ್ಲಿ ಟೂ-ವ್ಹೀಲರ್​ಗಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚಿದೆ.

ಭಾರತದಲ್ಲಿ ವಾಹನಗಳ ರೀಟೇಲ್ ಮಾರಾಟ ಜನವರಿಯಲ್ಲಿ ಶೇ. 7ರಷ್ಟು ಹೆಚ್ಚಳ
ಆಟೊಮೊಬೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2025 | 3:44 PM

Share

ನವದೆಹಲಿ, ಫೆಬ್ರುವರಿ 6: ಭಾರತದ ಆಟೊಮೊಬೈಲ್ ಕಂಪನಿಗಳು 2025ರ ಜನವರಿ ತಿಂಗಳಲ್ಲಿ 22,91,621 ವಾಹನಗಳನ್ನು ಮಾರಾಟ ಮಾಡಿವೆ. ಹಿಂದಿನ ವರ್ಷದ (2024) ಜನವರಿಯಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 21,49,117 ವಾಹನಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇ. 7ರಷ್ಟು ಹೆಚ್ಚು ವಾಹನಗಳ ರೀಟೇಲ್ ಮಾರಾಟವಾಗಿದೆ. ಆಟೊಮೊಬೈಲ್ ಡೀಲರ್​ಗಳ ಮಹಾ ಒಕ್ಕೂಟವಾದ FADA ಪ್ರಕಾರ, ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕ ವಾಹನ, ಟ್ರಾಕ್ಟರ್, ಕಮರ್ಷಿಯಲ್ ವಾಹನ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಮಾರಾಟವಾಗಿದೆ.

ಪ್ಯಾಸೆಂಜರ್ ವಾಹನಗಳ ರೀಟೇಲ್ ಮಾರಾಟವಂತೂ ಶೇ. 16ರಷ್ಟು ಹೆಚ್ಚಳವಾಗಿದೆ. ಜನವರಿ ತಿಂಗಳಲ್ಲಿ ಮಾರಾಟವಾದ ಪ್ರಯಾಣಿಕ ವಾಹನಗಳ ಸಂಖ್ಯೆ 4,65,920 ಎನ್ನಲಾಗಿದೆ. ದ್ವಿಚಕ್ರ ವಾಹನಗಳು 2024ರ ಜನವರಿಯಲ್ಲಿ 14,65,039 ಯೂನಿಟ್ ವಾರಾಟವಾಗಿದ್ದವು. ಈ ವರ್ಷದ ಜನವರಿಯಲ್ಲಿ 15,25,862 ಟೂ-ವ್ಹೀಲರ್​ಗಳು ಸೇಲ್ ಆಗಿವೆ.

ಇದನ್ನೂ ಓದಿ: ಭಾರತದಲ್ಲಿ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 10 ವರ್ಷದಲ್ಲಿ 2ರಿಂದ 300ಕ್ಕೆ ಹೆಚ್ಚಳ: ಪ್ರಗತಿ ಕಥೆ ಬಿಚ್ಚಿಟ್ಟ ವೈಷ್ಣವ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ. 4ರಷ್ಟು ಮಾತ್ರವೇ ಹೆಚ್ಚಳವಾದರೂ, ಕಮರ್ಷಿಯಲ್ ವಾಹನಗಳ ಮಾರಾಟ ಶೇ. 8ರಷ್ಟು ಏರಿಕೆ ಆಗಿದೆ. ಜನವರಿಯಲ್ಲಿ ಹೆಚ್ಚೂ ಕಡಿಮೆ ಒಂದು ಲಕ್ಷ ಸಿವಿಗಳ ಸೇಲ್ ಆಗಿದೆ. ಅಧಿಕೃತ ಮಾಹಿತಿ ಪ್ರಕಾರ 99,425 ಕಮರ್ಷಿಯಲ್ ವಾಹನಗಳು ಜನವರಿಯಲ್ಲಿ ಮಾರಾಟವಾಗಿವೆ.

2025ರ ಜನವರಿಯಲ್ಲಿ ಮಾರಾಟವಾದ ವಾಹನಗಳು

ಒಟ್ಟು ವಾಹನಗಳ ಮಾರಾಟ: 22,91,621 (ಶೇ. 7 ಏರಿಕೆ)

  • ದ್ವಿಚಕ್ರ ವಾಹನಗಳು: 15,25,862 (ಶೇ. 4 ಏರಿಕೆ)
  • ತ್ರಿಚಕ್ರ ವಾಹನಗಳು: 1,07,033 (ಶೇ. 7 ಏರಿಕೆ)
  • ಪ್ಯಾಸೆಂಜರ್ ವಾಹನಗಳು: 4,65,920 (ಶೇ. 16 ಏರಿಕೆ)
  • ಕಮರ್ಷಿಯಲ್ ವಾಹನಗಳು: 99,425 (ಶೇ. 8 ಏರಿಕೆ)
  • ಟ್ರಾಕ್ಟರ್​ಗಳು: 93,381 (ಶೇ. 5 ಏರಿಕೆ)

ಆಟೊಮೊಬೈಲ್ ಡೀಲರ್​ಗಳ ಪ್ರಕಾರ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ, ಹಳೆಯ ಮಾಡಲ್ ವಾಹನಗಳನ್ನು ಖಾಲಿ ಮಾಡಲೆಂದು ಕಳೆದ ವರ್ಷ ರೀಟೇಲ್ ಸೇಲ್​ಗಳಲ್ಲಿ ಭಾರೀ ರಿಯಾಯಿತಿ ಕೊಡಲಾಗಿತ್ತು. ಈ ಅಂಶಗಳು ಜನವರಿಯಲ್ಲಿ ಹೆಚ್ಚಿನ ವಾಹನಗಳ ಮಾರಾಟಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಬಿಟ್​ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು

ಹೊಸ ಮಾಡಲ್​ಗಳನ್ನು ಬಿಡುಗಡೆ ಮಾಡಲಾಗಿರುವುದು, ಮದುವೆ ಸೀಸನ್​ನಲ್ಲಿ ಸಹಜವಾಗಿ ಇರುವ ಬೇಡಿಕೆ, ಸಾಲ ಸೌಲಭ್ಯ ಮತ್ತಷ್ಟು ಸುಲಭವಾಗಿ ಸಿಗುತ್ತಿರುವುದು, ಈ ಅಂಶಗಳು ಕೂಡ ವಾಹನಗಳ ಮಾರಾಟ ಹೆಚ್ಚಳದಲ್ಲಿ ಪ್ರಭಾವ ಬೀರಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ