ನಿಮ್ಮ ಬಿಟ್ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು
Budget 2025 and crypto assets: ವರ್ಚುವಲ್ ಡಿಜಿಟಲ್ ಅಸೆಟ್ಗಳ ಯಾವುದೇ ಖರೀದಿ ಮತ್ತು ಮಾರಾಟ ಮಾಡಿದರೆ ಆ ವಹಿವಾಟು ಸರ್ಕಾರದ ಗಮನಕ್ಕೆ ಹೋಗಲಿದೆ. ಬಜೆಟ್ನಲ್ಲಿ ಕಾನೂನು ತಿದ್ದುಪಡಿಯ ಪ್ರಸ್ತಾಪ ಮಾಡಲಾಗಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದ್ದು 2026ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಬಹುದು. ಕ್ರಿಪ್ಟೋ ಟೆಕ್ನಾಲಜಿ ಬಳಸುವ ಯಾವುದೇ ಆಸ್ತಿಯಾದರೂ ಅದು ವರ್ಚುವಲ್ ಡಿಜಿಟಲ್ ಅಸೆಟ್ ಆಗಿ ಪರಿಗಣಿತವಾಗುತ್ತದೆ.

ನವದೆಹಲಿ, ಫೆಬ್ರುವರಿ 4: ಬಿಟ್ಕಾಯಿನ್ ಇತ್ಯಾದಿ ಯಾವುದೇ ಕ್ರಿಪ್ಟೋ ಕರೆನ್ಸಿ ಆಸ್ತಿಗಳ ಖರೀದಿ ಮತ್ತು ಮಾರಾಟ ನಡೆದಲ್ಲಿ ಅದು ಸರ್ಕಾರದ ಗಮನಕ್ಕೆ ಹೋಗಲಿದೆ. ಈ ವರ್ಷದ ಬಜೆಟ್ನಲ್ಲಿ ಸರ್ಕಾರ ಈ ಕ್ರಮವನ್ನು ಘೋಷಿಸಿದೆ. ಕ್ರಿಪ್ಟೋ ಆಸ್ತಿಗಳ ವಹಿವಾಟಿನ ಮಾಹಿತಿಯನ್ನು ಬ್ಯಾಂಕುಗಳು, ಕ್ರಿಪ್ಟೋ ವಿನಿಮಯ ಕೇಂದ್ರಗಳು ಮೊದಲಾದ ಭಾಗಿದಾರ ಸಂಸ್ಥೆಗಳು ಸರ್ಕಾರಕ್ಕೆ ತಿಳಿಸಬೇಕು ಎಂದು ತಿಳಿಸಲಾಗಿದೆ. ಈ ಸಂಬಂಧ ಕಾನೂನಿನಲ್ಲಿ ಸರ್ಕಾರ ತಿದ್ದುಪಡಿ ತರುತ್ತಿದೆ.
ಆದಾಯ ತೆರಿಗೆ ಕಾಯ್ದೆಯಲ್ಲಿ 285ಬಿಎ ಎನ್ನುವ ಸೆಕ್ಷನ್ ಇದೆ. ಇದು ಯಾವುದೇ ವ್ಯಕ್ತಿಯ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ಅನ್ನು ದಾಖಲಿಸಬೇಕು ಎಂದು ಬ್ಯಾಂಕಿಂಗ್ ಸಂಸ್ಥೆಗಳಿಗೆ ನಿರ್ದೇಶಿಸುತ್ತದೆ. ಈ ಸೆಕ್ಷನ್ಗೆ ಒಂದು ಉಪಸೆಕ್ಷನ್ ಸೇರಿಸಲಾಗಿದ್ದು, ಹಣಕಾಸು ವಹಿವಾಟು ಸ್ಟೇಟ್ಮೆಂಟ್ ರೀತಿಯಲ್ಲಿ ಕ್ರಿಪ್ಟೋ ಆಸ್ತಿಗಳ ವಹಿವಾಟಿನ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸ್ಟೇಟ್ಮೆಂಟ್ ರೂಪದಲ್ಲಿ ನೀಡಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅಮೆರಿಕದ DOGE ಇಲಾಖೆಗೆ 22 ವರ್ಷದ ಆಕಾಶ್ ಬೋಬ್ಬಾ; ಇಲಾನ್ ಮಸ್ಕ್ ನಡೆಗೆ ನೆಟ್ಟಿಗರು ಅಚ್ಚರಿ
ಇಲ್ಲಿ ಕ್ರಿಪ್ಟೋ ಟೆಕ್ನಾಲಜಿ ಬಳಸುವ ಯಾವುದೇ ಡಿಜಿಟಲ್ ಅಸೆಟ್ ಅನ್ನು ವರ್ಚುವಲ್ ಡಿಜಿಟಲ್ ಅಸೆಟ್ ಎಂದು ಪರಿಗಣಿಸಿ ಹೊಸ ವ್ಯಾಖ್ಯಾನ ಮಾಡಲಾಗಿದೆ. ಈ ವಿಡಿಎ ಅಥವಾ ವರ್ಚುವಲ್ ಡಿಜಿಟಲ್ ಅಸೆಟ್ಗಳ ವಹಿವಾಟುಗಳ ದಾಖಲೆಯನ್ನು ಬ್ಯಾಂಕುಗಳು, ಕ್ರಿಪ್ಟೋ ಎಕ್ಸ್ಚೇಂಜ್ಗಳು ಇತ್ಯಾದಿ ರಿಪೋರ್ಟಿಂಗ್ ಸಂಸ್ಥೆಗಳು ಕಾಲ ಕಾಲಕ್ಕೆ ನೀಡಬೇಕು ಎನ್ನುತ್ತದೆ ನಿಯಮ.
ನಿಮ್ಮ ಹಣಕಾಸು ವಹಿವಾಟುಗಳ ಎಲ್ಲಾ ಮಾಹಿತಿಯು ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ನಲ್ಲಿ (ಎಐಎಸ್) ಲಭ್ಯ ಇರುವ ರೀತಿಯಲ್ಲಿ, ಅದೇ ಮಾದರಿಯಲ್ಲಿ ಕ್ರಿಪ್ಟೋ ವಹಿವಾಟುಗಳು ದಾಖಲಾಗಬಹುದು. ಕ್ರಿಪ್ಟೋ ಅಸೆಟ್ಗಳನ್ನು ಯಾರು ಮಾರುತ್ತಾರೆ, ಯಾರು ಖರೀದಿಸುತ್ತಾರೆ ಈ ಎಲ್ಲಾ ಮಾಹಿತಿಯು ಸರ್ಕಾರಕ್ಕೆ ಹೋಗುತ್ತಿರುತ್ತದೆ.
ಇದನ್ನೂ ಓದಿ: ಗೂಗಲ್ ವಿರುದ್ಧ ತನಿಖೆ ಆರಂಭಿಸಿದ ಚೀನಾ; ಇದು ಅಮೆರಿಕಗೆ ಗುರಿ ಮಾಡಿದ ಪ್ರತೀಕಾರ ಕ್ರಮವಾ?
ಈ ಮುಂಚೆ ಕ್ರಿಪ್ಟೋ ವಹಿವಾಟುಗಳು ಸರ್ಕಾರದ ಗಮನಕ್ಕೆ ಬರುತ್ತಿದ್ದವು. ಆದರೆ, ಟಿಡಿಎಸ್ ಅನ್ವಯ ಆಗುವಂತಹ ವಹಿವಾಟು ಇದ್ದರೆ ಮಾತ್ರ ಅಂಥವನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು. ಈಗ ಎಲ್ಲಾ ಕ್ರಿಪ್ಟೋ ವಹಿವಾಟುಗಳನ್ನೂ ಟ್ರ್ಯಾಕ್ ಮಾಡಲು ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ