ಗೂಗಲ್ ವಿರುದ್ಧ ತನಿಖೆ ಆರಂಭಿಸಿದ ಚೀನಾ; ಇದು ಅಮೆರಿಕಗೆ ಗುರಿ ಮಾಡಿದ ಪ್ರತೀಕಾರ ಕ್ರಮವಾ?
China probes Google: ಗೂಗಲ್ ವಿರುದ್ಧ ಚೀನಾ ತನಿಖೆ ಆರಂಭಿಸಿದೆ. ದೇಶದ ಏಕಸ್ವಾಮತ್ವ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿದೆ ಎನ್ನುವುದು ಗೂಗಲ್ ವಿರುದ್ಧ ಕೇಳಿಬಂದ ಆರೋಪ. ತನಿಖೆ ಆರಂಭಿಸುವುದರ ಜೊತೆಗೆ, ಗೂಗಲ್ ಅನ್ನು ಅವಿಶ್ವಾಸೀ ಸಂಸ್ಥೆಗಳ ಪಟ್ಟಿಗೆ ಚೀನಾ ಸೇರಿಸಿದೆ. 2010ರಲ್ಲೇ ಗೂಗಲ್ನ ಸರ್ಚ್ ಎಂಜಿನ್ ಹಾಗು ಇತರ ಇಂಟರ್ನೆಟ್ ಸೇವೆಗಳನ್ನು ಚೀನಾ ಬಂದ್ ಮಾಡಿದೆ. ಆಂಡ್ರಾಯ್ಡ್ ಮೂಲಕ ಚೀನಾದಲ್ಲಿ ಗೂಗಲ್ ಒಂದಷ್ಟು ಜಾಹೀರಾತು ಬಿಸಿನೆಸ್ ಹೊಂದಿದೆ.

ನವದೆಹಲಿ, ಫೆಬ್ರುವರಿ 4: ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಯುದ್ಧವನ್ನು ಚೀನಾ ಮತ್ತೊಂದು ಸ್ತರಕ್ಕೆ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಅಮೆರಿಕದ ದೈತ್ಯ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್ ವಿರುದ್ದ ಚೀನಾದ ತನಿಖೆ ಆರಂಭಿಸಿದೆ. ದೇಶದ ಏಕಸ್ವಾಮತ್ವ ವಿರೋಧಿ ಕಾನೂನನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಈ ತನಿಖೆ ನಡೆಸಲಾಗುತ್ತಿದೆ. ಅಲ್ಲಿಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಈ ಕ್ರಮ ತೆಗೆದುಕೊಂಡಿರುವುದು ತಿಳಿದು ಬಂದಿದೆ. ವಿಶ್ವಾಸ ಇರಿಸಲು ಆಗದಂತಹ ಸಂಸ್ಥೆಗಳ ಪಟ್ಟಿಗೆ ಗೂಗಲ್ ಅನ್ನು ಸೇರಿಸಿದೆ.
ಗೂಗಲ್ ವಿರುದ್ಧ ಏಕಸ್ವಾಮತ್ವದ ಆರೋಪ ಇದೇನೂ ಹೊಸತಲ್ಲ. ಭಾರತವೂ ಒಳಗೊಂಡಂತೆ ವಿಶ್ವದ ಹಲವೆಡೆ ಆರೋಪಗಳಿವೆ. ಪ್ರಕರಣಗಳು ದಾಖಲಾಗಿವೆ. ಕೆಲ ಕಡೆ ತನಿಖೆಗಳೂ ನಡೆಯುತ್ತಿವೆ. ಹಲವು ನ್ಯಾಯಾಲಯಗಳು ಗೂಗಲ್ಗೆ ದಂಡ ಕೂಡ ವಿಧಿಸಿವೆ. ಅಮೆರಿಕದ ನ್ಯಾಯಾಲಯವೇ ಗೂಗಲ್ ಅನ್ನು ದೋಷಿಯಾಗಿಸಿ ತೀರ್ಪು ನೀಡಿದೆ. ಹೀಗಾಗಿ, ಚೀನಾದಿಂದ ಗೂಗಲ್ ವಿರುದ್ಧ ತನಿಖೆ ಆರಂಭವಾಗಿರುವುದು ಅಚ್ಚರಿ ಅಲ್ಲ. ಹಾಗೆಯೇ, ಟ್ರಂಪ್ ಅವರಿಂದ ಶುರುವಾದ ತೆರಿಗೆ ಯುದ್ಧದಲ್ಲಿ ಚೀನಾದ ಈ ಕ್ರಮ ನಿರೀಕ್ಷಿತವೂ ಹೌದು.
ಇದನ್ನೂ ಓದಿ: ಟ್ರಂಪ್ ಆಯ್ತು, ಈಗ ಚೀನೀ ಎಫೆಕ್ಟ್; ರುಪಾಯಿ ಮೌಲ್ಯ ಮತ್ತೆ ಕುಸಿತ; ಯಾರಿಗೆ ಲಾಭ, ಯಾರಿಗೆ ನಷ್ಟ?
ಚೀನಾದಲ್ಲಿ ಗೂಗಲ್ಗೆ ದೊಡ್ಡ ಬಿಸಿನೆಸ್ ಇಲ್ಲ. ಚೀನಾ ತನ್ನದೇ ಪ್ರತ್ಯೇಕ ಆಪರೇಟಿಂಗ್ ಸಿಸ್ಟಂಗಳು, ಸರ್ಚ್ ಎಂಜಿನ್ಗಳು ಇತ್ಯಾದಿ ಇಂಟರ್ನೆಟ್ ಸಿಸ್ಟಂಗಳನ್ನು ಹೊಂದಿದೆ. ಗೂಗಲ್ನ ಸರ್ಚ್ ಎಂಜಿನ್, ಇಂಟರ್ನೆಟ್ ಸೇವೆಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಚೀನಾದಲ್ಲಿ ಲಭ್ಯ ಇಲ್ಲ. ಆ್ಯಂಡ್ರಾಯ್ಡ್ ಮೊಬೈಲ್ಗಳ ಮೂಲಕ ಅದು ಚೀನಾದಲ್ಲಿ ಜಾಹೀರಾತು ಬಿಸಿನೆಸ್ ಮಾತ್ರ ಇಟ್ಟುಕೊಂಡಿದೆ.
ವಿಶ್ವದ ಹೆಚ್ಚಿನ ಫೋನ್ಗಳು ಆಂಡ್ರಾಯ್ಡ್ ತಂತ್ರಾಂಶಗಳನ್ನು ಹೊಂದಿವೆ. ಈ ಆ್ಯಂಡ್ರಾಯ್ಡ್ ಅನ್ನು ಗೂಗಲ್ ಖರೀದಿಸಿದೆ. ಹೀಗಾಗಿ, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಗೂಗಲ್ ಸಹಜವಾದ ಅಧಿಕಾರ ಹೊಂದಿದೆ. ತನಗೆ ಬೇಕಾದ ಆ್ಯಪ್ಗಳನ್ನು, ಜಾಹೀರಾತುಗಳನ್ನು ಪ್ರೊಮೋಟ್ ಮಾಡುವುದು ಇತ್ಯಾದಿಯನ್ನು ಗೂಗಲ್ ಮಾಡಬಲ್ಲುದು. ಗೂಗಲ್ ವಿರುದ್ದ ಕೇಳಿಬರುವ ಪ್ರಮುಖ ಆರೋಪ ಇದೇ ಆಗಿದೆ.
ಇದನ್ನೂ ಓದಿ: ಪನಾಮ ಕಾಲುವೆ ಮರುವಶಕ್ಕೂ ಸಿದ್ಧ ಎಂದ ಟ್ರಂಪ್; ಚೀನಾ ಒಪ್ಪಂದದಿಂದ ಹೊರಬಿದ್ದ ಪನಾಮ; ಈ ಪನಾಮ ಕೆನಾಲ್ನದ್ದು ರೋಚಕ ಇತಿಹಾಸ
ತನ್ನ ದೇಶದಲ್ಲಿ ಗೂಗಲ್ನ ಅಸ್ತಿತ್ವ ಹೆಚ್ಚೇನೂ ಇಲ್ಲದಿದ್ದರೂ ಚೀನಾ ಈ ಹೊತ್ತಲ್ಲಿ ತನಿಖೆ ಆರಂಭಿಸಿರುವುದು ಗಮನಾರ್ಹ. ಡೊನಾಲ್ಡ್ ಟ್ರಂಪ್ ಅವರು ಚೀನಾದ ಸರಕುಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಬೆನ್ನಲ್ಲೇ ಚೀನಾ ಕೂಡ ಕೆಲ ಅಮೆರಿಕನ್ ಉತ್ಪನ್ನಗಳಿಗೆ ಆಮದು ಸುಂಕ ಹಾಕಿದೆ. ಗೂಗಲ್ ಮೇಲೆ ತೆಗೆದುಕೊಂಡಿರುವ ಕ್ರಮವೂ ಇದೇ ಟ್ರೇಡ್ ವಾರ್ನ ಭಾಗವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ