ಅಮೆರಿಕದ DOGE ಇಲಾಖೆಗೆ 22 ವರ್ಷದ ಆಕಾಶ್ ಬೋಬ್ಬಾ; ಇಲಾನ್ ಮಸ್ಕ್ ನಡೆಗೆ ನೆಟ್ಟಿಗರು ಅಚ್ಚರಿ
Akash Bobba among Elon Musk's 6 secret recruits: ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿಗೆ 19ರಿಂದ 25 ವರ್ಷ ವಯಸ್ಸಿನ ಆರು ಯುವಕರನ್ನು ನೇಮಕ ಮಾಡಲಾಗಿದೆ. ಭಾರತ ಮೂಲದ ಆಕಾಶ್ ಬೋಬ್ಬಾ ಈ ಆರ್ವರಲ್ಲಿ ಒಬ್ಬ. ಡೋಜೆ ಮುಖ್ಯಸ್ಥ ಹಾಗೂ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರ ಈ ನಡೆಗೆ ಹಲವರು ಅಚ್ಚರಿ ಪಟ್ಟಿದ್ದಾರೆ. ಆಕಾಶ್ ಒಬ್ಬ ಜೀನಿಯಸ್ ಎಂದು ಆತನ ಹಳೆಯ ಸಹಪಾಠಿಯೊಬ್ಬ ಹಾಡಿ ಹೊಗಳಿದ್ದಾನೆ.

ವಾಷಿಂಗ್ಟನ್, ಫೆಬ್ರುವರಿ 4: ಭಾರತ ಮೂಲದ 22 ವರ್ಷದ ಯುವಕ ಆಕಾಶ್ ಬೋಬ್ಬಾನ ಹೆಸರು ಅಮೆರಿಕದಲ್ಲಿ ಸದ್ದು ಮಾಡುತ್ತಿದೆ. ಇಲಾನ್ ಮಸ್ಕ್ ಅಡಿಯಲ್ಲಿ DOGEಗೆ (ಸರ್ಕಾರಿ ಕಾರ್ಯಕ್ಷಮತೆ ಇಲಾಖೆ) ಆಯ್ಕೆಯಾಗಿರುವ 6 ಯುವಕರಲ್ಲಿ ಆಕಾಶ್ ಕೂಡ ಒಬ್ಬರು. ಈ ಆರೂ ಯುವಕರ ವಯಸ್ಸು 19ರಿಂದ 24 ವರ್ಷ ಮಾತ್ರ. ಎಲ್ಲರೂ ಯುವ ಎಂಜಿನಿಯರುಗಳು. ಸರ್ಕಾರದ ರಹಸ್ಯಗಳನ್ನು ಮತ್ತು ದೇಶದ ತಿಜೋರಿಯನ್ನು ಈ ಎಳಸು ಹುಡುಗರ ಕೈಗೆ ಹೇಗೆ ಇಟ್ಟಿದ್ದೀರಿ ಎಂದು ಹಲವರು ಟೀಕಿಸಿದ್ದಾರೆ. ಇನ್ನೂ ಸಾಕಷ್ಟು ಜನರು ಇಲಾನ್ ಮಸ್ಕ್ ಅವರದ್ದು ದಿಟ್ಟ ನಡೆ ಎಂದು ಪ್ರಶಂಸಿಸಿದ್ದಾರೆ.
ಭಾರತ ಮೂಲದ ಆಕಾಶ್ ಬೋಬ್ಬಾ (21-22 ವರ್ಷ), ಎಡ್ವರ್ಡ್ ಕೋರಿಸ್ಟೈನ್ (19 ವರ್ಷ), ಈಥಾನ್ ಶಾವೋಟ್ರಾನ್ (22 ವರ್ಷ), ಲ್ಯೂಕ್ ಫ್ಯಾರಿಟರ್ (23), ಗೌಟಿಯರ್ ಕೋಲ್ ಕಿಲಿಯನ್ (24 ವರ್ಷ) ಮತ್ತು ಗೆವಿನ್ ಕ್ಲಿಗರ್ (25 ವರ್ಷ) ಅವರು ಡೋಜೆ ಇಲಾಖೆಗೆ ನೇಮಕವಾದ ಯುವ ಎಂಜಿನಿಯರುಗಳಾಗಿದ್ದಾರೆ. ಕಿಂಚಿತ್ತೂ ಅನುಭವವೇ ಇಲ್ಲ, ಇನ್ನೂ ಅರ್ಧಂಬರ್ಧ ಓದಿರುವ ಈ ಯುವಕರನ್ನು ಯಾವ ಪುರುಷಾರ್ಥಕ್ಕೆ ಡೋಜೆಯಂತಹ ಗಂಭೀರ ಇಲಾಖೆಗೆ ಸೇರಿಸಿಕೊಂಡಿದ್ದೀರಿ ಎಂಬುದು ಕೆಲವರ ಗಂಭೀರ ಪ್ರಶ್ನೆ.
ಇದನ್ನೂ ಓದಿ: ಪನಾಮ ಕಾಲುವೆ ಮರುವಶಕ್ಕೂ ಸಿದ್ಧ ಎಂದ ಟ್ರಂಪ್; ಚೀನಾ ಒಪ್ಪಂದದಿಂದ ಹೊರಬಿದ್ದ ಪನಾಮ; ಈ ಪನಾಮ ಕೆನಾಲ್ನದ್ದು ರೋಚಕ ಇತಿಹಾಸ
ಆಕಾಶ್ ಬೋಬ್ಬಾ ಎನ್ನುವ ಜೀನಿಯಸ್….
ಈ ಯುವಕರ ಪೈಕಿ ಆಕಾಶ್ ಬೋಬ್ಬಾ ಬಗ್ಗೆ ಒಂದಷ್ಟು ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಈತ ಭಾರತ ಮೂಲದವನಾಗಿದ್ದರೂ, ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದಾನೆ. ಯುಸಿ ಬರ್ಕಲೀ ಕಾಲೇಜಿನಲ್ಲಿ ಓದಿರುವ ಹುಡುಗ. ಮೆಟಾ, ಪಲಂಟಿರ್, ಬ್ರಿಡ್ಜ್ವಾಟರ್ ಅಸೋಸಿಯೇಟ್ಸ್ ಕಂಪನಿಗಳಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದಾನೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಅನಾಲಿಟಿಕ್ಸ್, ಫೈನಾನ್ಷಿಯಲ್ ಮಾಡಲಿಂಗ್ಗಳನ್ನು ಕಲಿತಿದ್ದಾನೆ.
ಈತ ಅಸಾಮಾನ್ಯ ವ್ಯಕ್ತಿ ಮಾತ್ರವಲ್ಲ, ಒಬ್ಬ ಜೀನಿಯಸ್ ಎಂದು ಈತನ ಮಾಜಿ ಕ್ಲಾಸ್ಮೇಟ್ವೊಬ್ಬ ಹೇಳಿದ್ದಾನೆ. ಹಲವು ವ್ಯಕ್ತಿಗಳು ಸೇರಿ ಹಲವು ದಿನಗಳ ತಯಾರಿಸಿದ ಕೋಡಿಂಗ್ ಪ್ರಾಜೆಕ್ಟ್ ಅನ್ನು ಆಕಾಶ್ ಹೇಗೆ ಒಂದೇ ರಾತ್ರಿಯಲ್ಲಿ ಹೊಸದಾಗಿ ಮಾಡಿದ ಎನ್ನುವ ಘಟನೆಯನ್ನು ವಿವರಿಸಿದ್ಧಾನೆ.
ಇದನ್ನೂ ಓದಿ: ಗೂಗಲ್ ವಿರುದ್ಧ ತನಿಖೆ ಆರಂಭಿಸಿದ ಚೀನಾ; ಇದು ಅಮೆರಿಕಗೆ ಗುರಿ ಮಾಡಿದ ಪ್ರತೀಕಾರ ಕ್ರಮವಾ?
‘ಬರ್ಕ್ಲೀಯಲ್ಲಿ ಪ್ರಾಜೆಕ್ಟ್ ಮಾಡುವಾಗ ನಾನು ಅಕಸ್ಮಾತ್ ಆಗಿ ಇಡೀ ಕೋಡ್ಬೇಸ್ ಅನ್ನೇ ಡಿಲೀಟ್ ಮಾಡಿಬಿಟ್ಟೆ. ಆಗ ಬಹಳ ಗಾಬರಿಗೊಂಡಿದ್ದೆ. ಆಗ ಆಕಾಶ್ ಕಂಪ್ಯೂಟರ್ನ ಸ್ಕ್ರೀನ್ ಅನ್ನು ತದೇಕಚಿತ್ತದಿಂದ ನೋಡಿ, ಬಳಿಕ ತಾನೇ ಕೋಡಿಂಗ್ ಬರೆಯತೊಡಗಿದೆ. ಎಲ್ಲವನ್ನೂ ಹೊಸದಾಗಿ ಬರೆದ. ಅದೂ ಒಂದೇ ರಾತ್ರಿಯಲ್ಲಿ ಆತ ಬರೆದಿದ್ದ ಕೋಡಿಂಗ್, ಹಿಂದಿನದಕ್ಕಿಂತಲೂ ಉತ್ತಮವಾಗಿತ್ತು. ನಾವು ಬೇಗನೇ ಪ್ರಾಜೆಕ್ಟ್ ಸಬ್ಮಿಟ್ ಮಾಡಿ ಕ್ಲಾಸ್ಗೆ ಮೊದಲು ಬಂದೆವು,’ ಎಂದು ಝಾಂಗ್ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಬರೆದಿದ್ದಾನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ